Advertisement

ಮರೆತ ಆಹಾರ ಕ್ರಮಗಳನ್ನು ನೆನಪಿಸಿಕೊಳ್ಳೋಣ

12:55 AM May 18, 2021 | Team Udayavani |

ಆರೋಗ್ಯಕರ ಬದುಕಿಗೆ ಕ್ರಮಬದ್ಧ ಆಹಾರ ಅತ್ಯಗತ್ಯ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಿರುವ ನಾವು ಆಹಾರ ಕ್ರಮದಲ್ಲೂ ತಪ್ಪು ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ ಇಂದು ಹೆಚ್ಚಿನವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿದೆ. ತಟ್ಟೆಗೆ ಏನು ಹಾಕುತ್ತೇವೆ ಎನ್ನುವುದನ್ನು ನೋಡುತ್ತೇವೆಯೇ ವಿನಾ ಅದರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರ ಬಗ್ಗೆ ಗಮನಹರಿಸುತ್ತಿಲ್ಲ. ಹಸಿವಿರಲಿ, ಇಲ್ಲದೇ ಇರಲಿ ಮನಸ್ಸು ಕೇಳಿದಾಗ ಏನಾದರೂ ತಿಂದು ತೇಗುತ್ತೇವೆ. ಪರಿಣಾಮ ಇವತ್ತು ನಮ್ಮ ಕಣ್ಣ ಮುಂದಿದೆ.

Advertisement

ಸುಮಾರು 25ರ ವಯಸ್ಸಿನ ಹುಡುಗಿ ಕ್ಲಿನಿಕ್‌ನಲ್ಲಿ ಕಾಯುತ್ತಿದ್ದಳು. ಕುಳಿತುಕೊಳ್ಳಲು ಸ್ವಲ್ಪ ಹಿಂಜರಿದಂತೆ ಅನ್ನಿಸಿತು. ಪ್ರಶ್ನಿಸಿ, ಪರೀಕ್ಷಿಸಿದಾಗ ರಕ್ತದೊತ್ತಡ ಇರುವುದು ತಿಳಿಯಿತು.

ಲಾಕ್‌ಡೌನ್‌ನಲ್ಲಿ ವರ್ಕ್‌ಫ್ರಮ್ ಹೋಮ್‌ ಇದ್ದ ಕಾರಣ ಸುಮಾರು ಒಂದು ತಿಂಗಳಿನಿಂದ ದಿನವೂ ಚಿಪ್ಸ್‌, ಖಾರವಾದ ಎಣ್ಣೆ ತಿಂಡಿಗಳನ್ನು ಅವಿರತವಾಗಿ ಸೇವಿಸುತ್ತಿದ್ದಳು. ಹಗಲಿರುಳೆನ್ನದೆ ಮಾಡಿದ ಕೆಲಸದ ಒತ್ತಡದಿಂದಾಗಿ ಊಟದ ಸಮಯದಲ್ಲಾದ ಭಾರೀ ವ್ಯತ್ಯಾಸ, ಪದೇಪದೆ ಬೇಕರಿ ತಿಂಡಿ, ತಂಪು ಪಾನೀಯಗಳನ್ನು ಸೇವಿಸಿದ್ದು ಇದಕ್ಕೆ ಕಾರಣವಾಗಿತ್ತು. ಇದು ಬರೀ ಲಾಕ್‌ಡೌನ್‌ ಸಮಯದ ಸಮಸ್ಯೆ ಮಾತ್ರವಲ್ಲ ಈಗಿನ ಜನರ ಜೀವನಶೈಲಿಯೂ ಆಗಿದೆ. ನಾಲಗೆಯ ಚಪಲ ತೀರಿಸಲು ಸಮಯವಲ್ಲದ ಸಮಯದಲ್ಲಿ ನಾವು ಸೇವಿಸುವ ಮಸಾಲೆದೋಸೆ, ಗೋಬಿಮಂಚೂರಿ, ಚಿಕನ್‌ಮಂಚೂರಿ… ಇತ್ಯಾದಿ ತಿನಿಸುಗಳು ವಾತವ್ಯಾಧಿ, ಉದರ ರೋಗ, ಚರ್ಮರೋಗ, ಮೂತ್ರಪಿಂಡದಲ್ಲಿ ಕಲ್ಲುಗಳ ಉತ್ಪತ್ತಿ, ಮೂಲವ್ಯಾಧಿ, ಅತಿಸಾರ, ಕೆಮ್ಮು, ಮರೆವು ಮೊದಲಾದ ಕಾಯಿಲೆಗಳಿಗೆ ಕಾರಣವೆಂದು ಗೊತ್ತಿರುವಂಥದ್ದೇ. ಆದರೂ ಈಗಿನ ಸ್ಪರ್ಧಾತ್ಮಕ ಜಗತ್ತು ನಮ್ಮ ಮೂಲ ಅಗತ್ಯಗಳಲ್ಲೊಂದಾದ ಆಹಾರಕ್ರಮ ಗಳನ್ನು ಮರೆಯಿಸುತ್ತಿದೆ.

ನಾವು ಮರೆತದ್ದು ಏನು?
ತಿಂದ ಆಹಾರ ಜೀರ್ಣವಾಗುವ ಮೊದಲೇ ಮತ್ತೆ ಏನಾದರೂ ತಿಂದರೆ ಜಠರಾಗ್ನಿ ಮಂದವಾಗುತ್ತದೆ. ಆಹಾರ ಸರಿಯಾಗಿ ಪಚನವಾಗದೆ ಜಠರದಲ್ಲಿರುವಂತೆಯೇ ವಿಷವಾಗಿ ಮಾರ್ಪಾಡಾಗುತ್ತದೆ. ವ್ಯಾಧಿ ನಿಯಂತ್ರಕ ಶಕ್ತಿ ಕ್ಷೀಣವಾಗಿ ಜ್ವರದಿಂದ ಹಿಡಿದು ದೊಡ್ಡ ಕಾಯಿಲೆಗಳಿಗೆ ಮೂಲವಾಗಿ ಬಿಡಬಹುದು.

ಜೀರ್ಣ -ಅಜೀರ್ಣ
ಬಂದ ತೇಗಿನಲ್ಲಿ ತಿಂದ ಆಹಾರದ ವಾಸನೆ ಇಲ್ಲದೇ ಶುದ್ಧವಾಗಿದ್ದರೆ, ಮಲ ಮೂತ್ರಾದಿಗಳು ಸಲೀಸಾಗಿ ವಿಸರ್ಜನೆಯಾದರೆ, ಶರೀರ-ಮನಸ್ಸುಗಳು ಹಗುರವಾಗಿ ದ್ದರೆ, ತಿನ್ನುವ ಹಂಬಲ ಮೂಡಿದರೆ ಈ ಮೊದಲು ಸೇವಿಸಿದ ಆಹಾರ ಜೀರ್ಣವಾಯಿತು ಎಂದು ಅರ್ಥ.

Advertisement

ಇದಕ್ಕೆ ವ್ಯತಿರಿಕ್ತವಾಗಿ ಹಸಿವಿನ ಕೊರತೆ, ವಾಸನೆಯುಕ್ತ ತೇಗು, ಶರೀರ ಹಾಗೂ ಮನಸ್ಸಿನ ಜಡತೆ, ಮಲಮೂತ್ರಗಳ ವಿಸರ್ಜನೆಯಲ್ಲಿ ವ್ಯತ್ಯಾಸವಾದರೆ ಅದೇ ಅಜೀರ್ಣವೆಂದು ತಿಳಿಯಬೇಕು.

ಸರಿಪಡಿಸುವುದು ಹೇಗೆ?
ಯಾವ ಆಹಾರದಿಂದ ಅಜೀರ್ಣವಾಗಿದೆ ಎಂದು ತಿಳಿದರೆ ಔಷಧವನ್ನು ನಿರ್ಣಯಿಸಬಹುದು. ಮಾವಿನಹಣ್ಣಿನಿಂದ ಆದ ಅಜೀರ್ಣಕ್ಕೆ ಹಾಲು ಮದ್ದು, ಮಾಂಸಾಹಾರದ ಅಜೀರ್ಣಕ್ಕೆ ಸ್ವಲ್ಪ ಹುಳಿ ಬರಿಸಿದ ಗಂಜಿಯೇ ಮದ್ದು, ಮೀನು ತಿಂದು ಆಗುವ ಅಜೀರ್ಣಕ್ಕೆ ಮಾವಿನ ಹಣ್ಣು, ಆಲೂಗಡ್ಡೆ ಅಜೀರ್ಣಕ್ಕೆ ಅಕ್ಕಿ ತೊಳೆದ ನೀರು, ಕರಿದ ತಿಂಡಿಯಿಂದಾದ ಅಜೀರ್ಣಕ್ಕೆ ಮಜ್ಜಿಗೆ… ಹೀಗೆ ಮನೆಮದ್ದಿನ ಅನೇಕ ಪ್ರಯೋಗಗಳ ಬಗ್ಗೆ ಆಯುರ್ವೇದ ತಿಳಿಸುತ್ತದೆ.

ಸಮ ಪ್ರಮಾಣದಲ್ಲಿ ತಿನ್ನುವುದು
ಆಹಾರದ ಪ್ರಮಾಣವನ್ನು ನಾವೇ ಯೋಜಿಸಬೇಕು. ಜಠರವನ್ನು 4 ಭಾಗಗಳನ್ನಾಗಿ ವಿಂಗಡಿಸಿ ಅರ್ಧ ಭಾಗ ಘನ ಆಹಾರ, ಕಾಲು ಭಾಗ ದ್ರವ ಆಹಾರ, ಉಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು.

ರುಚಿಕರವಾಗಿದ್ದರೂ ಹೊಟ್ಟೆ ಬಿರಿಯುವಂತೆ ತಿನ್ನಬಾ ರದು. ಹಾಗೆಂದು ಕಡಿಮೆ ತಿನ್ನುವುದೂ ಸೂಕ್ತವಲ್ಲ. ಪದೇ ಪದೆ ಉಪವಾಸ ಮಾಡುವುದು ಒಳ್ಳೆಯದಲ್ಲ.

ಪ್ರಕೃತಿ, ಕಾಲ, ಉದ್ಯೋಗ, ವಯೋಮಾನ ಇತ್ಯಾದಿಗ ಳನ್ನು ಗಮನದಲ್ಲಿರಿಸಿಕೊಂಡು ಆಹಾರದ ಪ್ರಮಾಣ ನಿರ್ಧರಿಸಬೇಕು. ಹಸಿವಾದಾಗ ದ್ರವಾಹಾರ ಅಥವಾ ನೀರನ್ನು ಸೇವಿಸುವುದು, ಬಾಯಾರಿ ದಾಗ ಘನಾಹಾರ ಸೇವಿಸುವುದು ದೇಹಕ್ಕೆ ವಿಷಕಾರಿಯಾಗುವುದು.

ಸೂಕ್ತ ಸಮಯ
ಬೆಳಗ್ಗೆ 7.30-9ರ ನಡುವೆ ಉಪಾಹಾರ, ಮಧ್ಯಾಹ್ನ 12.30- 2 ನಡುವೆ ಊಟ, ಸಂಜೆ 6-7 ಗಂಟೆಯೊಳಗೆ ಲಘು ಉಪಾಹಾರ/ ಊಟ- ಹೀಗೆ ಆಹಾರಕ್ಕೆಂದೇ ನಿರ್ದಿಷ್ಟ ಸಮಯವನ್ನು ಮೀಸಲಿಡಿ. ಪದೇ ಪದೆ ತಿನ್ನುವುದು, ಹೊತ್ತಿಗೆ ಮುಂಚೆ ತಿನ್ನುವುದು, ಹೊತ್ತು ಮೀರಿ ತಿನ್ನುವುದು ಇತ್ಯಾದಿ ಅಭ್ಯಾಸಗಳಿಂದ ದೇಹದ ಬಲ, ಪ್ರಭೆ ಕುಂದುತ್ತದೆ, ರೋಗಗಳು ಮುತ್ತಿಕೊಳ್ಳತೊಡಗುತ್ತದೆ.
ಎರಡು ಆಹಾರ ಕಾಲಗಳ ಮಧ್ಯದಲ್ಲಿ 4ರಿಂದ 5 ಗಂಟೆ ಅಂತರ ಇದ್ದಾಗ ಪಚನಕ್ಕೆ ಸಹಕಾರಿಯಾಗುವುದು. ಮಧ್ಯದಲ್ಲಿ ತುಂಬಾ ಹಸಿವಾದರೆ ಮಾತ್ರ ತಿನ್ನಿ. ಅದು ಲಘು ಪ್ರಮಾಣದಲ್ಲಿರಲಿ. ಬಾಯಾರಿದರೆ ನೀರು ಕುಡಿಯಿರಿ.

ಬೆಳಗ್ಗೆ ತುಂಬಾ ಬೇಗ, ರಾತ್ರಿ ತುಂಬಾ ತಡವಾಗಿ ತಿನ್ನುವುದು ಸರಿಯಲ್ಲ. ಇದು ಅಜೀರ್ಣಕ್ಕೆ ದಾರಿ. ರಾತ್ರಿ ತಿಂದಿರುವುದು ಜೀರ್ಣವಾಗಿರದಿದ್ದರೆ, ಬೆಳಗ್ಗೆ ತಿನ್ನದಿರು ವುದೇ ಒಳ್ಳೆಯದು ಅಥವಾ ಹಸಿವಾಗುವ ತನಕ ಕಾದು ತಿನ್ನಬಹುದು. ಮಧ್ಯಾಹ್ನದ ಅನ್ನ ಜೀರ್ಣವಾಗದಿದ್ದರೆ ರಾತ್ರಿ ಲಘು ಉಪಾಹಾರಕ್ಕೆ ಅಡ್ಡಿ ಇಲ್ಲ. ತಿಂದ ಆಹಾರದ ಫ‌ಲ ಸಿಗಲು, ಭೋಜನವಾದ ಮೇಲೆ 100 ಹೆಜ್ಜೆಯನ್ನಾದರೂ ನಡೆಯಬೇಕು. ಹೀಗೆ ಆಹಾರ ಸಂಹಿತೆಯಲ್ಲಿ ತಿಳಿಸಿದ ಕ್ರಮದಂತೆ ಸೇವಿಸಿದ ಆಹಾರ ಅಮೃತಸಮಾನವಾಗಿ ಆರೋಗ್ಯಕ್ಕೆ ದಾರಿಯಾಗುತ್ತದೆ.

ಶ್ರದ್ಧೆಯಿಂದ ತಿನ್ನುವುದು
ಬರೀ ಹಸಿವಿಗಾಗಿ ಅಲ್ಲದೆ, ಆಹಾರದಿಂದ ಮಾನಸಿಕ ಹಾಗೂ ಶಾರೀರಿಕ ಶಕ್ತಿ ಸಂಚಯವಾಗುತ್ತದೆ ಎಂಬ ನಂಬಿಕೆ ಮುಖ್ಯ. ಆಹಾರ ಸೇವಿಸುವ ಸಮಯದಲ್ಲಿ ಚಿಂತೆ, ಅಸಹನೆ, ದುಃಖ, ಮತ್ಸರ, ದ್ವೇಷ, ಅನ್ಯ ವಿಷಯಗಳ ಬಗ್ಗೆ ಆಲೋಚಿಸಿದರೆ ಜಠರಕ್ಕೆ ರಕ್ತಸಂಚಲನೆ ಕಡಿಮೆಯಾಗಿ ಅಜೀರ್ಣ ಆಗಬಹುದು.

– ಡಾ| ಚೈತ್ರಾ ಶ್ರೀರಾಮ್‌ ಹೆಬ್ಟಾರ್‌
ಮುಖ್ಯಸ್ಥರು, ಅಗದ ತಂತ್ರ ವಿಭಾಗ, ಎಸ್‌ಡಿಎಂ ಆಯುರ್ವೇದಿಕ್‌ ಆಸ್ಪತ್ರೆ, ಕುತ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next