ಕಳೆದು ಕೊಂಡಿರುವ ಹಣವನ್ನೂ, ಕಾಣೆಯಾದವರನ್ನೂ ಹುಡುಕುವ ಜನರಂತೆಯೇ ಈಗ ನಾನೂ ನಿನ್ನ ಹುಡುಕಾಟದಲ್ಲಿ ತೊಡಗಿದ್ದೇನೆ.
ಮುಂಜಾನೆ ಎದ್ದು ನಾ ಬಿಡಿಸುವ ರಂಗೋಲಿಯಲ್ಲಿ ನಿನ್ನ ಹೆಸರನ್ನೇ ಬರೆಯುವೆ. ಬಣ್ಣ ತುಂಬುವಾಗಲೂ ನಿನ್ನದೇ ಧ್ಯಾನ. ಚುಕ್ಕಿ ಚಿತ್ತಾರವೋ ನನ್ನ ಚಿತ್ತದಲ್ಲಿ ನೆಲೆಸಿಹ ನಿನ್ನದೇ ನೆನಪು. “ಬೆಳಗೆದ್ದು ನಾ ಮುನ್ನ ಯಾರ್ಯಾರ ನೆನೆಯಲಿ’ ಎಂದು ಹಾಡು ಕೇಳುತ್ತ ನಾನು ಮಾತ್ರ ನಿನ್ನನ್ನು ನೆನೆಯುತ್ತೇನೆ ನನ್ನ ಚಿನ್ನ. ಬ್ಯಾಂಕಿನ ಖಾತೆ ತೆರೆಯಲು ಬಣ್ಣಬಣ್ಣದ ಮಾತುಗಳನ್ನು ಆಡಿ ನನ್ನ ಮನವೊಲಿಸಿದೆ. ಖಾತೆ ತೆರೆದನಂತರ, ಬಹು ಮೊತ್ತವ ಜಮಾ ಮಾಡಿಸಿ,ಬಡ್ಡಿ ಹಣವನ್ನೂ ಸಹ ನನ್ನ ಕೈಗೆ ನೀಡದೇ ಓಡಿ ಹೋದ ಮ್ಯಾನೇಜರನನ್ನು ಹುಡುಕುವುದೇ ನನ್ನ ಕೆಲಸವಾಯಿತಲ್ಲ?
ಖಾತೆ ತೆರೆಯುವಾಗ ಓದಿಕೊಳ್ಳಬೇಕಾದ ಸೂಚನೆ(ಟರ್ಮ್ಸ್ ಎಂಡ್ ಕಂಡೀಷನ್ಸ್) ಓದದೇ ಸಹಿ ಮಾಡಿದ್ದೇ ದೊಡ್ಡ ತಪ್ಪಾಯಿತೇನೋ. ನಿನ್ನ ಪ್ಯಾನ್ ಕಾರ್ಡ್‌ಗೆ ನನ್ನ ಆಧಾರ್ ಲಿಂಕ್ ಮಾಡದೇ ಹೋದದ್ದೇ ಕಾರಣವಾಯಿತೇನೋ. ಪಾಸ್ ಬುಕ್,ಚೆಕ್ ಬುಕ್, ಎಟಿಎಮ್ ಎಂದು ಏನನ್ನೂ ನೀಡದ ಶಾಖೆಯಲ್ಲಿ ಖಾತೆ ತೆರೆದದ್ದು ದೊಡ್ಡ ತಪ್ಪೇ ಸರಿ. ಯಾರಿಗೆ ನೀಡಲಿ ನಾನು ದೂರನ್ನು? ನನ್ನ ಬಳಿ ಜಮೆ ಮಾಡಿದ ಖಾತೆಯ ಲಿಖೀತ ದಾಖಲೆ ಹೋಗಲಿ, ಮೌಖೀಕ ದಾಖಲೆಯೂ ಇಲ್ಲ, ಸಾಕ್ಷಿ ಆಧಾರಗಳ ಬೆಂಬಲವೂ ಇಲ್ಲ!.
ಇಷ್ಟೆಲ್ಲ ಕುಂದು ಕೊರತೆಗಳಿದ್ದರೂ ನನ್ನ ಕಡೆಯಿಂದ ಖಾತೆಗೆ ಜಮಾ ಆಗುತ್ತಿರುವ ಪ್ರೀತಿಯ ಮೊತ್ತ ಮಾತ್ರ ಇನ್ನೂ ನಿಂತಿಲ್ಲ, ಏಕೆಂದರೆ, ಯಾರಿಲ್ಲದಿದ್ದರೂ ನೀನೇ ನನಗೆ ಮ್ಯಾನೇಜರ್, ಸಾಕ್ಷಿ,ಇಂಟ್ರಾಡ್ಯುಸ್, ರಿಸೆಪ್ಷನಿಸ್ಟ್, ಕ್ಯಾಶಿಯರ್, ಎಲ್ಲ ನೀನೇ ಕಣೋ. ರಂಗೋಲಿ ಬಿಡಿಸುವಾಗೇನು? ಅಂಗಳ ಗುಡಿಸುವಾಗ, ಊಟ-ತಿಂಡಿಯ ಹೊತ್ತಲ್ಲೂ ನಿನ್ನದೇ ಧ್ಯಾನ. ಕಳೆದುಕೊಂಡಿರುವ ಹಣವನ್ನೂ, ಕಾಣೆಯಾದವರನ್ನು ಹುಡುಕುವ ಜರಂತೆ ನಾನು. ಅಂದು ಶಕುಂತಲೆಯ ಬಳಿ ಉಂಗುರವಾದರೂ ಇತ್ತು, ದುಶ್ಯಂತನ ಬಳಿ ಸಾಗಲು.
ನನ್ನ ಬಳಿ ಅದೂ ಕೂಡ ಇಲ್ಲವಲ್ಲೋ. ಅವಳು ಉಂಗುರ ಕಳೆದುಕೊಂಡಂತೆ ನನ್ನ ಬಳಿಯಿರುವ ನೀ ಬರೆದ ಪತ್ರಗಳ ನಾ ತೋರಿಸಿದರೆ ಯಾರು ನನ್ನ ನಂಬುವರು? ನಿನ್ನ ಹುಡುಕಲು ಯಾರು ತಾನೆ ಸಹಾಯ ಮಾಡುವರು? ಇನ್ನು ಕಾಯಿಸಬೇಡ ಗೆಳೆಯ, ಸತಾಯಿಸಲೂ ಬೇಡ. ಬೇಗ ಎದುರಿಗೆ ಬಾ, ಪ್ರೀತಿಯ ಖಾತೆಗೆ ಬಡ್ಡಿ, ಅಸಲು ಸೇರಿ ದೊಡ್ಡ ಮೊತ್ತ ಜಮೆ ಮಾಡಿ ಫಿಕ್ಸಡ್ ಡೆಪೋಸಿಟ್ ಮಾಡೋಣ, ಜಾಯಿಂಟ್ ಅಕೌಂಟ್ ತೆರೆದು, ಅದರಲ್ಲಿ ಪ್ರೀತಿಯ ಬೆಳೆಯನ್ನು ತೆಗೆಯೋಣ.
* ಸಾವಿತ್ರಿ ಶ್ಯಾನುಭಾಗ