Advertisement

ಕಾಮಗಾರಿ ಕಾಗದಲ್ಲಲ್ಲ ವಾಸ್ತವದಲ್ಲಿ ಆಗಲಿ

12:48 PM Jun 29, 2018 | Team Udayavani |

ಲಿಂಗಸುಗೂರು: ನಿಮ್ಮ ಕಾಗದದಲ್ಲಿ ಕಾಮಗಾರಿ ಮುಗಿದಿದೆ ಎಂದು ಹೇಳಿದರೆ ನಾನು ಕೇಳಲ್ಲ. ನನಗೆ ಸ್ಥಳದಲ್ಲಿ ವಾಸ್ತವ ಕಾಮಗಾರಿಯಾಗಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ತಾಪಂ ಸಭಾಂಗಣದಲ್ಲಿ ಗುರುವಾರ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಶಾಸಕನಾದ ಮೇಲೆ ಇಡೀ ಕ್ಷೇತ್ರ ಸಂಚರಿಸಿ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದ್ದೇನೆ. ಕೆಆರ್‌ಡಿಎಲ್‌ ವತಿಯಿಂದ ಕೆಲವಡೆ ಅಂಗನವಾಡಿ ಕಟ್ಟಡದ ಕಾಮಗಾರಿ ನಡೆದೇ ಇಲ್ಲ. ಈಗ ಸಭೆಯಲ್ಲಿ ನೀವು ನಿಮ್ಮ ದಾಖಲಾತಿಯಲ್ಲಿ ಕಾಮಗಾರಿ ಮುಗಿದಿದೆ ಎಂದು ಹೇಳುತ್ತಿದ್ದಿರಿ.

ಇದು ಸರಿಯಲ್ಲ. ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ತಾಲೂಕಿನಲ್ಲಿ ಎಲ್ಲೆಲ್ಲಿ ಅಂಗನವಾಡಿ ಕಾಮಗಾರಿ ನಡೆಯುತ್ತಿವೆ. ಯಾವ ಹಂತದಲ್ಲಿವೆ ಎಂಬುದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಹಟ್ಟಿ-ತವಗ ರಸ್ತೆ ಅಭಿವೃದ್ಧಿಗಾಗಿ ಎರಡು ವರ್ಷದ ಹಿಂದೆಯೇ ಅನುದಾನ ಬಂದರೂ ಈವರೆಗೂ ಕಾಮಗಾರಿ ಮಾಡಿಲ್ಲ. ಕಾಮಗಾರಿ ಬೇರೆ ಸಂಸ್ಥೆಗೆ ವಹಿಸಿದರೆ ಟೆಂಡರ್‌ ಕರೆಯಬೇಕಾಗುತ್ತದೆ ಎಂದು ನಿಮಗೆ ಕೊಟ್ಟರೆ ಎರಡು ವರ್ಷವಾದರೂ ಕಾಮಗಾರಿ ಮಾಡಿಲ್ಲ ಅಂದ್ರೆ ಹೇಗೆ? ಇನ್ನು ಮುಂದೆ ಏನೇ ಕಾರಣ ಹೇಳಿದರೂ ನಡೆಯಲ್ಲ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಮಾಡಬೇಕು ಎಂದು ಕೆಆರ್‌ಡಿಎಲ್‌ ಎಇಇ ಅನಿಲಕುಮಾರ ಅವರಿಗೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಎರವಲುಗೆ ಲಂಚ: ಹಾಲಬಾವಿ ಶಾಲೆ ಮುಖ್ಯ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಆರು ತಿಂಗಳ ಹಿಂದೆಯೇ ನಿಮಗೆ ಪತ್ರ ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಪತ್ರಕ್ಕೆ ಕಿಮ್ಮತ್ತು ಇಲ್ವಾ.? ನಿಮಗೆ ಯಾವಾಗ ಅವಶ್ಯಕವೋ ಅವಾಗ ಶಿಕ್ಷಕರಿಂದ 10 ಸಾವಿರ ರೂ. ಲಂಚ ಪಡೆದು ಎರವಲು ನೀಡುತ್ತಿರಿ ಎಂದು ಜಿಪಂ ಸದಸ್ಯ ಸಂಗಣ್ಣ ದೇಸಾಯಿ ಬಿಇಒ ಚಂದ್ರಶೇಖರ ಭಂಡಾರಿಯವರನ್ನು ತರಾಟೆ ತೆಗೆದುಕೊಂಡರು. ತಾಲೂಕಿನ ಚಿಕ್ಕಹೆಸರೂರು ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇದರಿಂದ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Advertisement

ಈ ಬಗ್ಗೆ ಕೂಡಲೇ ಗಮನಹರಿಸಿ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಸಂತೆಕೆಲ್ಲೂರು ಕ್ಷೇತ್ರದ ಜಿಪಂ ಸದಸ್ಯೆ ರೇಣುಕಾ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಬಿಇಒ ವಾರದಲ್ಲಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. 

ಮಂಜೂರು: ಕೇಂದ್ರ ಸರಕಾರದ ಕರ್ನಾಟಕ ಪಬ್ಲಿಕ್‌ ಶಾಲೆಗೆ ತಾಲೂಕಿನ ಖೈರವಾಡಗಿ ಗ್ರಾಮದ ಶಾಲೆ ಆಯ್ಕೆಯಾಗಿದೆ. ಇಲ್ಲಿ 1ರಿಂದ 12ನೇ ತರಗತಿವರೆಗೆ ಶಿಕ್ಷಣ ದೊರೆಯಲಿದೆ. ಇದಲ್ಲದೇ ನಾಗರಹಾಳ, ಲಿಂಗಸುಗೂರು ಪಟ್ಟಣಕ್ಕೆ ಇನ್ನೂ ಒಂದು ಆದರ್ಶ ವಿದ್ಯಾಲಯ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ 9 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗೆ ಉನ್ನತೀಕರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಇಒ ಸಭೆಗೆ ಮಾಹಿತಿ ನೀಡಿದರು.

ಕ್ರಮಕ್ಕೆ ಆಗ್ರಹ: ಚಿತ್ತಾಪುರ ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದೆ. ಇದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಜಿಪಂ ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಬಾವುಗೆ ವಿರುದ್ಧ ಕ್ರಮ ಜರಗಿಸುವಂತೆ ಮತ್ತು ತೊಂಡಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸದೇ ಈಗಾಗಲೇ ಗುತ್ತಿಗೆದಾರರಿಗೆ ಬಿಲ್‌ ಮಾಡಲಾಗಿದೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಜಿಪಂ ಸದಸ್ಯ ಬಸನಗೌಡ ಕಂಬಳಿ ಆಗ್ರಹಿಸಿದರು.

ಯಾವುದೇ ಇಲಾಖೆ ಅಧಿಕಾರಿಗಳು ಮೊದಲು ತಾಲೂಕಿನಲ್ಲಿ ಸಂಚರಿಸಿ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಪಟ್ಟಿ ಮಾಡಬೇಕು. ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲನೆ ಮಾಡಬೇಕು. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿ ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಟಣಮಣಕಲ್‌ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ಮೂರು ವರ್ಷ ಕಳೆದರೂ ಇನ್ನೂ ನೀರು ಸರಬರಾಜು ಆಗುತ್ತಿಲ್ಲವೆಂದರೆ ಹೇಗೇ? ಅಲ್ಲಿನ ಜನರ ಭಾವನೆಗಳೊಂದಿಗೆ ಆಟ ಆಡಬೇಡಿ. ಶೀಘ್ರವೇ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ನ್ಯರ್ಮಲ್ಯ ಅಧಿಕಾರಿಗೆ ಶಾಸಕರು ಸೂಚಿಸಿದರು. ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ತಾಪಂ ಕಾ.ನಿ. ಅಧಿಕಾರಿ ಪುಷ್ಪಾ ಕಮ್ಮಾರ, ತಹಶೀಲ್ದಾರ್‌ ಚಾಮರಾಜ ಪಾಟೀಲ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next