ಉಭಯಕುಶಲೋಪರಿಯ ನಂತರ ಓದಿನತ್ತ ನಮ್ಮ ಮಾತು ಹೊರಳಿತು. ಇನ್ನೇನು ನಿನ್ನ ಮುಂದೆ ಪ್ರೇಮದ ಮೂಟೆ ಬಿಚ್ಚಬೇಕು ಅನ್ನುವಷ್ಟರಲ್ಲಿ, ನೀನು ಗೆಳೆತನದ ಬಗ್ಗೆ, ಬದುಕಿನ ಕನಸುಗಳ ಬಗ್ಗೆ ಆಡಿದ ಮಾತುಗಳು ನನ್ನ ಬಾಯಿ ಕಟ್ಟಿದವು. ನಿನ್ನ ಮಾತಲ್ಲಿ ಸತ್ಯ ಇತ್ತು, ಬದುಕಿನ ವಾಸ್ತವ ಇತ್ತು.
ಅಂದು ನೀನು, ತಂಗಾಳಿ ಬೀಸುವಾಗ ಹೂವಿನ ಹಾಸಿಗೆ ಮೇಲೆ ನಾಜೂಕಾಗಿ ಹೆಜ್ಜೆಯಿಟ್ಟು ನಡೆಯುತ್ತಿದ್ದೆ. ನಾನು ದೂರದಿಂದ ಕಳ್ಳ ಬೆಕ್ಕಿನ ಹಾಗೆ ನಿನ್ನನ್ನು ನೋಡುತ್ತಿದ್ದೆ. ಆ ನಿನ್ನ ಮುಗª ನಗು, ಹಾವಭಾವ, ಆಧುನಿಕತೆಯ ಸ್ಪರ್ಶವಿಲ್ಲದ ಉಡುಗೆ ತೊಡುಗೆ, ಕಣ್ಣೋಟ ಎಲ್ಲವೂ ಇಷ್ಟವಾದವು. ಅದು ಆಕರ್ಷಣೆಯೋ, ಪ್ರೀತಿಯೋ, ಸೆಳೆತವೋ ಏನೊಂದೂ ಅರಿಯದ ಹದಿಹರೆಯ ನನ್ನದು. ಆಗ ನಾನೇ ಮುಂದಾಗಿ ನಿನ್ನ ಪರಿಚಯ ಮಾಡಿಕೊಂಡೆ. ಅಷ್ಟೇ ಮುದ್ದಾಗಿ ಮಾತಾಡಿದೆ. ನನ್ನ ಗೆಳತಿಯಾದೆ.
ಭಾವನೆಗಳು ಉಕ್ಕಿ ಹರಿಯುವ ಮುನ್ನವೇ ಅವುಗಳಿಗೆ ಸರಿಯಾದ ದಿಕ್ಕು ತೋರಿಸಬೇಕು ಎಂದು ಹೇಳುತ್ತಾರೆ. ನಾವಿಬ್ಬರೂ ಓದಿನಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದೆವು. ಸಮಾನ ಮನಸ್ಕರು ಬೇಗ ಹತ್ತಿರಾಗುತ್ತಾರೆ ಎನ್ನುವಂತೆ ನಾವಿಬ್ಬರೂ ಹತ್ತಿರಾದೆವು. ಆ ಸ್ನೇಹ, ಆದಷ್ಟು ಬೇಗ ಪ್ರೀತಿಯ ರೂಪ ಪಡೆಯಲಿ ಅಂತ ಆರಂಭದಲ್ಲಿ ನನಗನಿಸಿದ್ದು ನಿಜ. ಆದರೆ, ನಿನ್ನ ಕಣ್ಣೋಟದಲ್ಲಿ ಪ್ರೀತಿಯ ಬದಲು ವಿಶ್ವಾಸ ಇತ್ತು, ಭರವಸೆ ಇತ್ತು. ನಿನ್ನ ಮಾತುಗಳಲ್ಲಿ ಬದುಕಿನ ಬಗ್ಗೆ ನೇರ, ನಿಖರ ಗುರಿಗಳಿದ್ದವು. ಈ ವಿರುದ್ಧ ಭಾವನೆಗಳ ಹಾದಿ ಅಪಾಯ ಅಂತ ಅರಿತ ನಾನು, ಆದಷ್ಟು ಬೇಗ ಮನದ ಇಂಗಿತವನ್ನು ಹೇಳಬೇಕೆಂದು ನಿಶ್ಚಯಿಸಿದೆ. ಆದರೆ ಹೇಗೆ ಹೇಳುವುದು? ಹೇಳಿದ ಕೂಡಲೇ ನೀನು ಸಿಟ್ಟು ಮಾಡಿಕೊಂಡು ದೂರಾಗಿಬಿಟ್ಟರೆ? ನಿನ್ನ ಸ್ನೇಹವನ್ನು ಕಳೆದುಕೊಳ್ಳುವ ಮೂರ್ಖ ಕೆಲಸ ಅದಲ್ಲವೇ ಅಂತ ಬಹಳ ಯೋಚಿಸಿದೆ. ಹೇಳದೇ ಉಳಿಯುವುದು, ನನಗೆ ನಾನೇ ಮಾಡಿಕೊಳ್ಳುವ ಮೋಸ ಅಂತಲೂ ಅನ್ನಿಸಿತು.
ಅಂತೂ ಒಂದು ದಿನ ಧೈರ್ಯ ಮಾಡಿ ನಿನ್ನನ್ನು ಭೇಟಿಗೆ ಕರೆದೆ. ಉಭಯಕುಶಲೋಪರಿಯ ನಂತರ ಓದಿನತ್ತ ನಮ್ಮ ಮಾತು ಹೊರಳಿತು. ಇನ್ನೇನು ನಿನ್ನ ಮುಂದೆ ಪ್ರೇಮದ ಮೂಟೆ ಬಿಚ್ಚಬೇಕು ಅನ್ನುವಷ್ಟರಲ್ಲಿ, ನೀನು ಗೆಳೆತನದ ಬಗ್ಗೆ, ಬದುಕಿನ ಕನಸುಗಳ ಬಗ್ಗೆ ಆಡಿದ ಮಾತುಗಳು ನನ್ನ ಬಾಯಿ ಕಟ್ಟಿದವು. ನಿನ್ನ ಮಾತಲ್ಲಿ ಸತ್ಯ ಇತ್ತು, ಬದುಕಿನ ವಾಸ್ತವ ಇತ್ತು. ಅವತ್ತು ನೀನು ಹೇಳಿದ್ದೆ, “ನೀನು ನನ್ನ ಬೆಸ್ಟ್ ಫ್ರೆಂಡ್ ಕಣೋ. ಸುಖ-ದುಃಖ, ನೋವು-ನಲಿವು ಏನೇ ಇದ್ದರೂ ನಿನ್ನ ಜೊತೆ ಹೇಳಬೇಕು ಅನ್ನಿಸುತ್ತೆ. ಹಾಗಂತ ನಿನ್ನನ್ನು ಪ್ರೀತಿಸಬೇಕು ಅಂತ ಯಾವತ್ತೂ ನಂಗೆ ಅನ್ನಿಸಲಿಲ್ಲ. ಯಾಕೆ ಗೊತ್ತಾ? ಪ್ರೀತಿಗಿಂತ ಸ್ನೇಹ ದೊಡ್ಡದು. ಪ್ರೀತಿ ಗೀತಿ ಅಂತ ತಿರುಗಾಡಿ ಬದುಕನ್ನು ಯಾಕೆ ಹಾಳು ಮಾಡಿಕೊಳ್ಳಬೇಕು? ಗುರಿ ತಲುಪಲು ಪರಿಶ್ರಮ ಪಡುತ್ತಾ, ಬದುಕನ್ನು ಪ್ರೀತಿಸಬೇಕು ಅನ್ನೋದು ನನ್ನ ಪಾಲಿಸಿ. ಈ ವಯಸ್ಸಲ್ಲಿ ಆಕರ್ಷಣೆ, ಸೆಳೆತ ಸಾಮಾನ್ಯ. ಈಗ ಹುಟ್ಟುವ ಪ್ರೀತಿಗೆ ಬದುಕಿನ ಭದ್ರತೆ ಇರೋದಿಲ್ಲ. ಪ್ರೀತಿಗಿಂತ ಬದುಕು ಮಿಗಿಲು ಕಣೋ… ನೀನು ಚೆನ್ನಾಗಿ ಓದಬೇಕು, ಒಳ್ಳೆಯ ನೌಕರಿ ಹಿಡಿಬೇಕು. ಅದನ್ನು ನೋಡಿ ನಾನು ಖುಷಿ ಪಡಬೇಕು. ಹಾಗಂತ ಪ್ರಾಮಿಸ್ ಮಾಡ್ತೀಯಾ?’ ಅಂತ ನನ್ಮುಂದೆ ಕೈ ಚಾಚಿದ್ದೆ.
ಬದುಕಿನ ವಾಸ್ತವವನ್ನು ಇದಕ್ಕಿಂತ ಚೆನ್ನಾಗಿ ಅರ್ಥ ಮಾಡಿಸಲು ಯಾರಿಗೆ ಸಾಧ್ಯವಿತ್ತು ಹೇಳು? ಜೀವನ ಅಂದ್ರೆ ಏನು ಅಂತ ಕಲಿಸಿದ ಮೊದಲ ಗುರು ನೀನು. ಬದುಕಿನ ಬಗ್ಗೆ ಮೊದಲ ಕನಸು ಮೊಳೆತಿದ್ದೇ ಆಗ. ನೀನಾಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ನಾವಿಬ್ಬರೂ ಬೇರೆ ಬೇರೆ ಕಡೆ ಓದುವಂತಾಯ್ತು. ನೀನು ಜೊತೆಗಿರದಿದ್ದರೂ, ನೀನಾಡಿದ ಮಾತುಗಳು ನನ್ನ ಕೈ ಹಿಡಿದವು. ಚೆನ್ನಾಗಿ ಓದಿದೆ, ನೌಕರಿಯನ್ನೂ ಹಿಡಿದೆ. ನೀನೂ ಓದು ಮುಗಿಸಿ ಮನೆಯವರು ಮೆಚ್ಚಿದ ಹುಡುಗನನ್ನು ಮದುವೆಯಾದೆ ಎಂಬ ವಿಷಯ ತಿಳಿಯಿತು. ಆದರೀಗ ನಿನ್ನ ಜೊತೆಗೆ ಮಾತಾಡಬೇಕು ಅಂತ ಬಹಳ ಅನ್ನಿಸುತ್ತಿದೆ. ಆವತ್ತು ನಾವು ಭೇಟಿಯಾದೆವಲ್ಲವಾ, ಅದೇ ಜಾಗದಲ್ಲಿ ಮತ್ತೆ ಸಿಗ್ತಿàಯಾ?
ಇಂತಿ ನಿನ್ನ ಗೆಳೆಯ
– ರಂಗನಾಥ ಎನ್. ವಾಲ್ಮೀಕಿ