ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳು “ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ’ ಎಂದು ಕೇಳುತ್ತಿದ್ದಾರೆ. ಹಾಗಿದ್ದರೆ ಇವರು ಬುರ್ಕಾ ಹಾಕಿಕೊಂಡು ಪ್ರಚಾರ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರವಾಗಿ ಪ್ರಚಾರ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಐದು ವರ್ಷ ಏನೂ ಕೆಲಸ ಮಾಡಿಲ್ಲ.ಹೀಗಾಗಿ ಜನರಿಗೆ ಮುಖ ತೋರಿಸಲು ಧೈರ್ಯ ಇಲ್ಲದೇ ಮೋದಿ ಮುಖ ನೋಡಿ ಮತ ಹಾಕುವಂತೆ ಕೇಳುತ್ತಿದ್ದಾರೆ.
ಬಿಜೆಪಿಯವರು ನನ್ನನ್ನು ಹಿಂದೂ ಅಲ್ಲ ಎಂದು ಹೇಳುತ್ತಾರೆ. ನಮ್ಮಲ್ಲಿ ಅನೇಕ ಜಾತಿ ಧರ್ಮಗಳಿವೆ. ನಮಗೆ ಎಲ್ಲವೂ ಒಂದೇ. ಕಾಂಗ್ರೆಸ್ ಹಾಗೂ ನಾನು ಮಾನವತಾವಾದಿಗಳು. ಹಿಂದೂ ಧರ್ಮ ಪರಧರ್ಮ ಸಹಿಷ್ಣುತೆ ಸಾರುತ್ತದೆ. ಬಿಜೆಪಿಯವರು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಹೇಳಿದರು.
ಬಿಜೆಪಿಯವರನ್ನು ನಾವು ಸಂವಿಧಾನ ವಿರೋಧಿಗಳಂತೆ ಬಿಂಬಿಸುತ್ತಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಅನಂತಕುಮಾರ್ ಹೆಗಡೆ ಬಹಿರಂಗವಾಗಿಯೇ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಎಂಬ ಹುಡುಗನನ್ನು ನಿಲ್ಲಿಸಿದ್ದಾರೆ. ಅವನು ಸೂರ್ಯ ಅಲ್ಲ. ಅಮವಾಸ್ಯೆ,ಇನ್ನೂ ಸಂಸತ್ತು ಪ್ರವೇಶ ಮಾಡಿಲ್ಲ. ಈಗಲೇ ಸಂವಿಧಾನ ವಿರೋಧಿ ಮಾತುಗಳನ್ನಾಡುತ್ತಾನೆ ಎಂದು ವಾಗ್ಧಾಳಿ ನಡೆಸಿದರು. ಇದೇ ವೇಳೆ, ಆದಾಯ ತೆರಿಗೆ ದಾಳಿಯನ್ನು ವಿರೋಧಿಸಿದ ಅವರು, ರಾಜಕೀಯ ಪ್ರೇರಿತ ದಾಳಿ ನಡೆಸಲಾಗುತ್ತಿದೆ. ಸದಾನಂದಗೌಡ, ಯಡಿಯೂರಪ್ಪ ಅವರ ಮನೆಗಳ ಮೇಲೆ ದಾಳಿ ಮಾಡಲಿ. ಅವರ ಮನೆಯಲ್ಲಿ ದುಡ್ಡು ಇಲ್ವಾ ? ಅಧಿಕಾರಿಗಳ ಮನೆಗಳಲ್ಲಿ ಹಣ ದೊರೆತಿದ್ದರೆ, ಅವರು ಲೆಕ್ಕ ಕೊಡುತ್ತಾರೆ ಎಂದರು.
ಇನ್ನು ಸಿದ್ದರಾಮಯ್ಯ ಅವರಿಗೆ ಅಡ್ರೆಸ್ಸೇ ಇಲ್ಲ ಎಂದು ಆರೋಪಿಸಿದ್ದ ಡಿ.ವಿ. ಸದಾನಂದಗೌಡ ಅವರಿಗೆ ತಿರುಗೇಟು ನೀಡಿರುವ ಅವರು, ಬಾದಾಮಿಯಲ್ಲಿ ಗೆದ್ದಿರುವುದು ಗೊತ್ತಿಲ್ವಾ ? ಒಂದೆರಡಲ್ಲಾ ಎಂಟು ಬಾರಿ ಶಾಸಕನಾಗಿದ್ದೇನೆ. ನನಗೆ ಹಿಂದಿ ಭಾಷೆ ಬಾರದಿರುವು ದರಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಿದರು.