ವಿಧಾನಪರಿಷತ್ತು: “ನೈಸ್’ ಯೋಜನೆ ಬಗ್ಗೆ ಉಗ್ರಪ್ಪನವರ ನೇತೃತ್ವದಲ್ಲೇ ಸಮಿತಿ ರಚಿಸೋಣ, ಅವರು ಏನು ಹೇಳುತ್ತಾರೋ, ಅದನ್ನೇ ಮಾಡೋಣ ಎಂದು ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಹೇಳಿದ ಮಾತು ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಮೈಸೂರು-ಬೆಂಗಳೂರು ಹೆದ್ದಾರಿ ಬಗ್ಗೆ ಜೆಡಿಎಸ್‌ನ ಸಂದೇಶ ನಾಗರಾಜ್ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿ ದ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ನೈಸ್ ಯೋಜನೆ ಹೆಸರಲ್ಲಿ ಬಡವರ ಜಮೀನು ಕಿತ್ತುಕೊಂಡು ಕಂಪೆನಿಯೊಂದು ಮಜಾ ಮಾಡುತ್ತಿದೆ. ಈ ಬಗ್ಗೆ ಸಚಿವರು ಬೆಳಕು ಚೆಲ್ಲಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಸದಸ್ಯರು ಪ್ರಶ್ನೆ ಕೇಳಿದ್ದು ಹೆದ್ದಾರಿ ಬಗ್ಗೆ. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಪ್ರಶ್ನೋತ್ತರ ಅವಧಿಯಲ್ಲಿ ಸಂಬಂಧವಿಲ್ಲದ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದರು.
ಇದಕ್ಕೆ ಪ್ರತಿಪತ್ರಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನೈಸ್ ವಿವಾದ ಬಗೆಹರಿಸುವ ತಾಕತ್ತು ಇರುವುದು ರೇವಣ್ಣ ಅವರೊಬ್ಬರಿಗೆ ಮಾತ್ರ ಎಂಬ ಕಾರಣಕ್ಕೆ ಉಗ್ರಪ್ಪ ಅವರು ವಿಷಯ ಪ್ರಸ್ತಾಪಿಸಿರಬೇಕು ಎಂದು ಛೇಡಿಸಿದಾಗ, ಬೇರೆರೂಪದಲ್ಲಿ ಈ ವಿಚಾರ ಪ್ರಸ್ತಾಪಿಸಿದರೆ ಉತ್ತರ
ಕೊಡುತ್ತೇನೆ ಎಂದು ರೇವಣ್ಣ ತಿರುಗೇಟು ನೀಡಿದರು.
ಯೋಜನಾ ವರದಿ ಸಿದ್ಧ: ಇದಕ್ಕೂ ಮೊದಲು ಸಂದೇಶ ನಾಗರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು-ಮೈಸೂರು ನಡುವಿನ 10 ಪಥದ ರಸ್ತೆ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧಗೊಂಡಿದೆ. ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶೇ. 64ರಷ್ಟು ಭೂಸ್ವಾಧೀನ ಮುಗಿದಿದೆ. ತ್ವರಿಗತಿಯಲ್ಲಿ ಕಾಮಗಾರಿ ನಡೆಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.