ಮೈಸೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಗೋಲ್‌ಮಾಲ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಾಸಕ ಎಂ.ಕೆ.ಸೋಮಶೇಖರ್ ಆಗ್ರಹಿಸಿದರು. ನಗರದ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ಮತದಾರರನ್ನು ತೆಗೆದು ಹಾಕಲಾಗಿದೆ ಎಂಬ ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪಕ್ಕೆ ತಿರುಗೇಟು ನೀಡಿದರು.
ಕಳೆದ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರಿಗಳಾದ ಕೃಷ್ಣ ಮತ್ತು ರಂಗನಾಥ ಅವರು ರಾಮದಾಸ್ ಅವರ ಮನೆಯಲ್ಲೇ ಕುಳಿತು ಮತದಾರರ ಪಟ್ಟಿಯಲ್ಲಿ 20 ಸಾವಿರ ನಕಲಿ ಮತದಾರರನ್ನು ಸೇರ್ಪಡೆಗೊಳಿಸಿದ್ದಾರೆ. ಈ ಕುರಿತಂತೆ ನ್ಯಾಯಾಂಗ ತನಿಖೆ ಜತೆಗೆ ಸಿಬಿಐ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೆ.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ 2013ರಲ್ಲಿ 2.16 ಲಕ್ಷ ಮತದಾರರಿದ್ದರೆ, 2017ರಲ್ಲಿ 2.36 ಲಕ್ಷ ಇದ್ದು, ಆ ಮೂಲಕ 19,377 ನಕಲಿ ಮತದಾರರನ್ನು ಸೇರಿಸಲಾಗಿದೆ. ಎಲ್ಲೆಲ್ಲಿ ಖಾಲಿ ನಿವೇಶನವಿದೆಯೋ, ಅಲ್ಲಿ ನಕಲಿ ಮತದಾರರನ್ನು ಸೇರಿಸಲಾಗಿದೆ. ಅದರಂತೆ ಶ್ರೀರಾಂಪುರದ ಮನೆಯೊಂದರಲ್ಲಿ ಕೇವಲ ಇಬ್ಬರು ವಾಸಿಸುತ್ತಿದ್ದು, ಅಲ್ಲಿ 18 ಮತಗಳು ಹಾಗೂ ಮತ್ತೂಂದು ಮನೆಯಲ್ಲಿ 21 ಮತದಾರರನ್ನು ಸೃಷ್ಟಿಸಲಾಗಿದೆ. ಈ ನಕಲಿ ಮತದಾರರನ್ನು ರಾಮದಾಸ್‌ರ ಶಿಷ್ಯರೇ ಹುಟ್ಟು ಹಾಕಿದ್ದಾರೆಂದು ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವುದಿಲ್ಲವೋ ಎಂಬ ಆತಂಕದಲ್ಲಿರುವ ರಾಮದಾಸ್ ಅವರು ಸುದ್ದಿಯಲ್ಲಿಲ್ಲದಿದ್ದರೆ ಜನ ತಮ್ಮನ್ನು ಮರೆತು ಬಿಡುತ್ತಾರೆಂಬ ಆತಂಕದಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಮಾಜಿ ಸಚಿವರು ಆರೋಪಿಸುವಂತೆ ಅಸ್ಲಾಂ ಎಂಬುವವರು ಯಾರೆಂಬುದೇ ತಮಗೆ ಗೊತ್ತಿಲ್ಲ,
ಹೀಗಿದ್ದರೂ ಅಲ್ಪಸಂಖ್ಯಾತರ ಹೆಸರನ್ನು ಸೃಷ್ಟಿಸಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ನಕಲಿ ಮತದಾರರನ್ನು ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಜಿಲ್ಲಾದಿಕಾರಿಗಳಿಗೆ ತಾವು ಬರೆದ ಪತ್ರಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಪಾಲಿಕೆ ಸದಸ್ಯ ಸುನೀಲ್, ಸೋಮಶೇಖರ್ ಇದ್ದರು.