ಯಲಹಂಕ: ರೈತರು ಸಾವಯವ ಕೃಷಿ ಬಗ್ಗೆ ತಮಗಿರುವ ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ಕೀಠನಾಶಕ, ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ನಾರಾಯಣ ರೆಡ್ಡಿ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಷ್ಟ್ರೀಯ ಕಿಸಾನ್ ಸಂಘಟನೆ ರಾಜ್ಯ ಘಟಕ ಮತ್ತು ಕಾಬೋಶಾಪ್ ಇಂಡಸ್ಟ್ರೀಸ್ ಸಂಯುಕ್ತ ಆಶ್ರಯದಲ್ಲಿ ರಾಜಾನುಕುಂಟೆಯಲ್ಲಿ ಆಯೋಜಿಸಿದ್ದ ಸಾವಯವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮಿತಿ ಮೀರಿದ ಬಳಕೆಯಿಂದಾಗಿ ಇಂದು ಭೂಮಿ ಸತ್ವಹೀನವಾಗಿದೆ.
ಭೂಮಿ ಆರೋಗ್ಯಯುತವಾಗಬೇಕಾದರೆ ಸಾವಯವ ಗೊಬ್ಬರ ಬಳಸಬೇಕು ಎಂದು ಹೇಳಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀಮಣ್ಣ ಮಾತನಾಡಿ, ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಪಡೆಯಬಹುದು. ಸಾವಯವ ಕೃಷಿ ಅಳವಡಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದು ಎಂದರು.
ರಾಷ್ಟ್ರಿಯ ಕಿಸಾಸ್ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ವಿಜಯಕುಮಾರ್ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಸಿ ಬೆಳೆಯುವ ಆಹಾರ ಪದಾರ್ಥಗಳಲ್ಲಿ ಪೋಷಕಾಂಶಗಳು ಇರುವುದಿಲ್ಲ. ಇದು ಪರೋಕ್ಷವಾಗಿ ಮನುಷ್ಯನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ರೀತಿಯಲ್ಲೇ ಭೂಮಿಗೆ ಪೂರಕವಾದ ಆರೋಗ್ಯಕರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು
ಬಹು ಬೆಳೆ ಅಥವಾ ವಿಶ್ರಬೆಳೆ ಮತ್ತು ಪರ್ಯಾಯ ಬೆಳೆ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರು ಕಡಿಮೆ ಭೂಮಿಯಲ್ಲಿ ವಿವಿಧ ಬೆಳೆ ಬೆಳದು, ಹೆಚ್ಚು ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು. ಕಾಬೋಶಾಪ್ ಇಂಡಸ್ಟ್ರೀಸ್ ಸಿಇಒ ಸುಬ್ರಮಣಿ, ರೈತ ಸಂಘದ ಮುಖಂಡರಾದ ಹರೀಶ್ ಹದ್ದೆ, ಗಿರೀಶ್ ಆವಲಹಳ್ಳಿ, ವೇದಾವತಿ, ಸತೀಶ್‌ಗೌಡ, ಬಿ.ಚಂದ್ರು ಮತ್ತಿತರರು ಹಾಜರಿದ್ದರು.