ಬೆಂಗಳೂರು: ಹೊನ್ನಾಳಿ ತಾಲ್ಲೂಕಿನಲ್ಲಿ ಮರಳಿನ ತೀವ್ರ ಅಭಾವ ತಲೆದೋರಿದ್ದು, ಮರಳಿಗಾಗಿ ದಂಗೆ ಏಳುವಂತೆ ಜನತೆಗೆ ಕರೆ ನೀಡುತ್ತೇನೆ. ಸೋಮವಾರದಿಂದ ನೇರವಾಗಿ ನದಿ ಬ್ಲಾಕ್‌ಗಳಿಂದಲೇ ಮರಳು ತೆಗೆಯುತ್ತೇವೆ. ಸರ್ಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಾಜು ಆಗದ ಬ್ಲಾಕ್‌ಗಳಿಂದ ಮರಳು ತೆಗೆದು ಹಂಚಿಕೆ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಹಾಗಾಗಿ ಸೋಮವಾರ ನದಿ ಬ್ಲಾಕ್‌ಗಳಿಂದಲೇ ಮರಳು ತೆಗೆದು ಜನರಿಗೆ ಹಂಚಲಾಗುವುದು. ಮರಳಿಗಾಗಿ ಜನ ದಂಗೆ ಏಳಲಿ. ಅವರ ರಕ್ಷಣೆಗೆ ನಾನಿರುತ್ತೇನೆ. ಸಮ್ಮಿಶ್ರ ಸರ್ಕಾರದ ವಿರುದ್ಧ ನಾನು ತೊಡೆ ತಟ್ಟಿ ನಿಂತಿದ್ದಕ್ಕೆ ನನ್ನನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಹೇಳಿದರು.
ಮರಳಿನ ಅಭಾವದಿಂದ ತಾಲ್ಲೂಕಿನಲ್ಲಿ ಸುಮಾರು 7000 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಶೌಚಾಲಯ, ಸರ್ಕಾರಿ ಕಾಮಗಾರಿ, ಸಾರ್ವಜನಿಕರ ನಿರ್ಮಾಣ ಕಾರ್ಯಗಳು ಮರಳು ಅಭಾವದಿಂದ ಸ್ಥಗಿತವಾಗಿವೆ. ಹರಾಜು ಆಗದ ಬ್ಲಾಕ್‌ಗಳಿಂದ ಮರಳು ತೆಗೆದು ಒಂದು ಕ್ಯುಬಿಕ್ ಮೀಟರ್‌ಗೆ 600 ರೂ.ನಂತೆ ಮರಳು ಹಂಚಿಕೆ ಮಾಡಬೇಕೆಂದು ಕೋರಿದರೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ಮರಳು ತೆಗೆದು ಬಳಸಲು ಮುಂದಾದವರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದರು.
ಸಿಎಂ ಗಮನಕ್ಕೆ ತರಲಾಗಿತ್ತಾದರೂ, ಜಿಲ್ಲಾಧಿಕಾರಿ, ಎಸ್‌ಪಿ ತಪ್ಪು ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಳೆದ 19ರಂದು ಅನಿವಾರ್ಯವಾಗಿ ನದಿಗಿಳಿದು ಮರಳು ತೆಗೆಯಲು ನಿರ್ಧರಿಸಲಾಯಿತು. ತಲಾ 600 ರೂ.ನಂತೆ 100ಕ್ಕೂ ಹೆಚ್ಚು ಡಿಡಿ ಪಡೆದು ಮರಳು ನೀಡುವಂತೆ ಕೋರಿದರೂ ಸ್ಪಂದಿಸದ ಕಾರಣ ನ.19ರಂದು ಮರಳು ತೆಗೆಯಲು ಮುಂದಾದಾಗ ನಾನು ಸೇರಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದರು.
ಜಿಲ್ಲಾಡಳಿತಕ್ಕೆ ತಾಕತ್ತಿದ್ದರೆ ಬೆಂಗಳೂರಿಗೆ ಅಕ್ರಮವಾಗಿ ಸಾಗಣೆಯಾಗುತ್ತಿರುವ ಮರಳನ್ನು ತಡೆಯಲಿ. ಅಮಾಯಕರಿಗೆ ತೊಂದರೆ ನೀಡಿದರೆ ಕ್ರಾಂತಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಶಾಸಕರು, ಸಂಸದರ ಸಭೆ ಈವರೆಗೆ ನಡೆಸಿಲ್ಲ. ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಇಂಥವರು ನನಗೆ ನೀತಿ ಪಾಠ ಮಾಡುತ್ತಾರೆ. ನಾನು ಅವರಿಗಿಂತ ಮೊದಲೇ ಸಚಿವನಾಗಿದ್ದೆ. ಶ್ರೀನಿವಾಸ್ ತಮ್ಮ ವೈಯಕ್ತಿಕ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಅವಹೇಳನಕಾರಿ ವ್ಯಂಗ್ಯ ಮಾಡಿದ್ದು, ಅದರ ವಿರುದ್ಧದೂರು ನೀಡುತ್ತೇನೆ.
– ಎಂ.ಪಿ.ರೇಣುಕಾಚಾರ್ಯ, ಶಾಸಕ