ಮೈಸೂರು: ಉಪ್ಪಾರ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಮೌಡ್ಯದಿಂದ ಹೊರಬರುವ ನಿಟ್ಟಿನಲ್ಲಿ ವೈಚಾರಿಕ ಅರಿವು ಬೆಳೆಸಬೇಕಾದ ಅಗತ್ಯವಿದೆ ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ಮೈಸೂರು ಜಿಲ್ಲಾ ಉಪ್ಪಾರ ಸಮಾಜದಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ, ಸಾಧಕರಿಗೆ, ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಉಪ್ಪಾರ ಸಮಾಜವು ಅತ್ಯಂತ ಹಿಂದುಳಿದಿದ್ದು, ನಂಜನಗೂಡು, ಚಾ.ನಗರ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಾಸವಾಗಿರುವ ಉಪ್ಪಾರ ಸಮಾಜದ ಹಲವು ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲೇ ವಾಸಿಸುತ್ತಿದ್ದಾರೆ.
ಆದ್ದರಿಂದ ಉಪ್ಪಾರ ಸಮಾಜದವರು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕಿದ್ದು, ಈ ಹಿನ್ನೆಲೆಯಲ್ಲಿ ಉಪ್ಪಾರ ಸಮಾಜ ಮೌಡ್ಯಗಳಿಂದ ಹೊರಬರಬೇಕಿದೆ. ಇದಕ್ಕಾಗಿ ಅಧಿಕಾರಿಗಳು, ಸಂಘ ಸಂಸ್ಥೆಗಳು ಪ್ರಯತ್ನಿಸಬೇಕಿದೆ ಎಂದರು.
ದಲಿತ, ಹಿಂದುಳಿದ ಸಮುದಾಯಕ್ಕೆ ಅಂಬೇಡ್ಕರ್ ಆದರ್ಶವಾಗಿದ್ದು, ಶೋಷಿತರ ಅಭಿವೃದ್ಧಿಗೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಪರಿಕಲ್ಪನೆ ನೀಡಿದ್ದಾರೆ. ಅಲ್ಲದೇ ಪುರುಷೋತ್ತಮಾನಂದಪುರಿ ಸ್ವಾಮೀಜಿ ಉಪ್ಪಾರ ಜನಾಂಗ ಒಗ್ಗೂಡಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾ ಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗಗಳ ಸಚಿವನಾಗಿದ್ದು, ಸಮುದಾಯ ಮಾತ್ರವಲ್ಲದೆ ಎಲ್ಲಾ ವರ್ಗಗಳ ಅಭಿವೃದ್ಧಿಗೂ ಶ್ರಮಿಸುತ್ತೇನೆ. ಉತ್ತರ ಕರ್ನಾಟಕದ ಭಾಗದ ಜನರು ಅತ್ಯಂತ ಹಿಂದುಳಿದಿದ್ದು, ಆ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಯತೀಂದ್ರ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಚಿತ್ರದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀ, ಮಂಡ್ಯದ ಅಯ್ಯನ ಸರಗೂರು ಮಠದ ಚಿನ್ನಸ್ವಾಮೀಜಿ, ಕೆಪಿಸಿಸಿ ಸದಸ್ಯ ಶ್ರೀಕಾಂತ್‌ರಾವ್, ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ, ಜಿ.ಪಂ.ಸದಸ್ಯ ಲತಾ ಸಿದ್ದಶೆಟ್ಟಿ, ಮಾಜಿ ಸದಸ್ಯೆ ಕಾವೇರಮ್ಮ ಇತರರಿದ್ದರು.