ಮಂಗಳೂರು: ನಗರದ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ನಿಷ್ಕಲ್ ರಾವ್ ಹಾಗೂ ನಿಶ್ಚಿತ್ ರಾವ್ ಅವರು ಸಂಗ್ರಹಿಸಿದ ತುಳು ಲಿಪಿಯ ಪ್ರಥಮ ಗ್ರಂಥ “ಶ್ರೀಹರಿಸ್ತುತಿ’ಯನ್ನು ರವಿವಾರ ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ತುಳು ಭಾಷೆಯಲ್ಲಿ ಈ ರೀತಿಯ ಪ್ರಯತ್ನ ನಡೆದಿರುವುದು ಪ್ರಶಂಸನೀಯ. ಮಕ್ಕಳಿಬ್ಬರ ಈ ಪ್ರಯತ್ನವನ್ನು ಮೆಚ್ಚಬೇಕು. ಈ ಸಾಧನೆ ಹೆಮ್ಮರವಾಗಿ ಬೆಳೆಯಲಿ. ತುಳು ಲಿಪಿಯಲ್ಲಿ ಮತ್ತಷ್ಟು ಧರ್ಮಗ್ರಂಥಗಳು ಮುದ್ರಣಗೊಳ್ಳಲಿ ಎಂದು ಹಾರೈಸಿದರು.
ಕೃತಿ ರಚನೆಗೆ ಮಾರ್ಗದರ್ಶನ ನೀಡಿದ ವಿದ್ವಾನ್ ಡಾ| ಕದ್ರಿ ಪ್ರಭಾಕರ ಅಡಿಗ ಅವರು ಕೃತಿ ಪರಿಚಯ ಮಾಡಿದರು. ವೇದ ಹಿಂದೂ ಧರ್ಮದ ಮೂಲವಾಗಿದೆ. ನಮ್ಮೊಳಗಿನ ದಾನವತ್ವವನ್ನು ದೂರ ಮಾಡಿ ಸನ್ಮಾರ್ಗದಲ್ಲಿ ನಡೆಸುವವನು ದೇವರು. ಬಾಲಕ ನಿಷ್ಕಲ್ ರಾವ್ ಅವರು ದೇವರ ಸ್ತುತಿಯನ್ನು ತುಳು ಲಿಪಿಯಲ್ಲಿ ರಚಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಇ-ಬುಕ್ ಬಿಡುಗಡೆಗೊಳಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಡಾ| ಪದ್ಮನಾಭ ಕೇಕುಣ್ಣಾಯ, ಮೀರಾ, ಅತುಲ್ ರಾವ್, ನಿಷ್ಕಲ್ ರಾವ್, ನಿಶ್ಚಿತ್ ರಾವ್ ವೇದಿಕೆಯಲ್ಲಿದ್ದರು.
ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲ ದಯಾನಂದ ಕಟೀಲು ಕಾರ್ಯಕ್ರಮ ನಿರ್ವಹಿಸಿದರು.