Advertisement
ರಾಮ ಎಂಬ ಅದ್ಬುತ ವ್ಯಕ್ತಿತ್ವವನ್ನು ಜಗತ್ತಿನ ಮುಂದಿಟ್ಟ ಹಿಂದಿನ ಕೈ ವಾಲ್ಮೀಕಿ. ರಾಮನಂಥ ಆದರ್ಶ ವ್ಯಕ್ತಿ ಭಾರತೀಯ ಪುರಾಣ ಕಾವ್ಯಗಳಲ್ಲೂ ಮತ್ತು ಜಗತ್ತಿನ ಯಾವ ಕಾವ್ಯಗಳಲ್ಲೂ ಸಿಗುವುದಿಲ್ಲ ಎಂಬುದು ವಿಶೇಷ. ರಾಮನನ್ನು, ಸೀತೆಯನ್ನು ಅವರ ಸುತ್ತಣ ಧರ್ಮ ಅಧರ್ಮಗಳ ಸೂತ್ರ ಗಳನ್ನು ಅಷ್ಟೇ ಬಿಡಿ ಬಿಡಿಯಾಗಿ ಬಿಚ್ಚಿಟ್ಟ ಕೈ ಹಿಂದಿನ ವ್ಯಕ್ತಿತ್ವ ಅದೆಷ್ಟು ಶಿಖರ ಪ್ರಾಯವಾಗಿರಬಹುದು! ನಮ್ಮ ನಮ್ಮ ಮನಸ್ಸು, ಅಭಿರುಚಿ ಯಂತೆಯೇ ಅಕ್ಷರಗಳು ಮೂಡುತ್ತವೆ. ವಾಲ್ಮೀಕಿ ಯಾರು ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳಿವೆ. ನಾವು ಯಾವತ್ತೂ ಹಾಗೆ, ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಹುಡುಕುವುದೇ ಜಾಸ್ತಿ. ಹಾಗಾಗಿ ವಾಲ್ಮೀಕಿ ಯಾರು ಎಂಬುದರ ಬಗೆಗಿನ ವಿಷಯ ಬಿಟ್ಟು ಇಲ್ಲದಿರುವುದರ ಬಗ್ಗೆ ಯೋಚಿಸುತ್ತೇವೆ. ಪುರಾಣ ಕಾವ್ಯಗಳೇ ಒದಗಿಸಿಕೊಟ್ಟಿರುವ ಮಾಹಿತಿಯಂತೆ ವಾಲ್ಮೀಕಿ ಯಾರು ಎಂಬುದರ ಮಾಹಿತಿ ಹೀಗಿದೆ.
Related Articles
ಹೌದು, ಪ್ರತಿಯೊಬ್ಬರಲ್ಲೂ ಎಳವೆಯ ರತ್ನಾಕರ, ಯೌವ್ವನ ಕಾಲದ ಬೇಡ ಮತ್ತು ಬದುಕಿನ ಅರ್ಥ ಕಂಡುಕೊಂಡ ವಾಲ್ಮೀಕಿ ಈ ಮೂವರೂ ಇರುತ್ತಾರೆ. ಎಷ್ಟೋ ಜನ ಎಳವೆಯ ರತ್ನಾಕರನಂತೆ ಉಳಿದು ಬಿಟ್ಟರೆ, ಬಹುತೇಕರು ಬೇಡನ ರೂಪದಲ್ಲೇ ಉಳಿದು ಹೋಗುತ್ತಾರೆ. ಆದರೆ ತಮ್ಮೊಳಗೆ ಇರುವ ವಾಲ್ಮೀಕಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಹಾಗೆ ಮಾಡಿದವರು ಬದುಕು ಗೆದ್ದು ಹೋಗಿದ್ದಾರೆ. ವಾಲ್ಮೀಕಿಯಾಗುವುದೆಂದರೆ ಕೇವಲ ತಪಸ್ಸಿಗೆ ಕೂರುವು ದಲ್ಲ. ಬದುಕನ್ನೇ ತಪಸ್ಸಿನಂತೆ ಕಳೆಯುವುದು. ತಮ್ಮನ್ನು, ತಮ್ಮ ಅಡ್ಡದಾರಿಗಳನ್ನು ಬಿಟ್ಟು ಬದುಕಿನ ಒಳ್ಳೆಯ ಹೆದ್ದಾರಿಗೆ ಬಂದು ಸೇರುವುದು. ವಾಲ್ಮೀಕಿಗೆ ಬೇಡನ ಸಾಹಚರ್ಯ ಸಿಗುತ್ತದೆ ಮತ್ತು ನಾರದನ ಸಾಹಚರ್ಯವೂ ಸಿಗುತ್ತದೆ. ಅವರೆಡರಿಂದ ಅವರು ಪ್ರಭಾವಿತರಾದಂತೆ ನಮ್ಮ ಜೀವನದಲ್ಲೂ ಸಹಚರ್ಯಗಳು ಸಿಗು ತ್ತವೆ. ಅದರಂತೆ ನಾವು ಬೆಳೆಯುತ್ತೇವೆ. ರತ್ನಾಕರ ದಾರಿ ತಪ್ಪಿದಂತೆ ಪ್ರತಿಯೊಬ್ಬ ಮನುಷ್ಯನು ಅಂತಹ ಹಂತದಲ್ಲಿರುತ್ತಾನೆ. ನಾವು ಎಲ್ಲಿ ಹೋಗಿ ಸೇರುವುದರಿಂದ ಏನಾಗುತ್ತೇವೆ ಎಂಬುದನ್ನು ನಮಗೆ ಇನ್ಯಾರೋ ಎಚ್ಚರಿಸಿದಾಗಲೇ ಅರಿವಾಗುವುದು.
Advertisement
ವಾಲ್ಮೀಕಿ ಏನು ಹೇಳಿದ್ದಾರೆ?ಅವರನ್ನು ಮತ್ತು ಅವರ ಬರಹವನ್ನು ಸೂಕ್ಷ್ಮವಾಗಿ ಗಮನಿ ಸಿದ್ದೇ ಆದಲ್ಲಿ ಖಂಡಿತ ವಾಲ್ಮೀಕಿಯವರಲ್ಲಿ ನಿಮಗೊಬ್ಬ ಅದ್ಭುತ ಕವಿ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ಸರ್ವತೋಮುಖೀ ಚಿಂತಕ ಕಾಣಸಿಗುತ್ತಾರೆ. ದಾರಿ ತಪ್ಪಿ ಹೋದ ಬಾಳನ್ನು ನಾವೇ ತಿದ್ದಿಕೊಳ್ಳಬೇಕೇ ಹೊರತು ಉಪದೇಶಿಸಿ ಹೋದವರು ನಿತ್ಯ ತಿದ್ದಲಾರರು. ನಮ್ಮ ನಮ್ಮ ಒಳ್ಳೆಯದಕ್ಕೆ ಮತ್ತು ಕೆಟ್ಟದಕ್ಕೆ ನಾವೇ ಹೊಣೆಗಾರರು, ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಜವಾಬ್ದಾರಿಗಳಿವೆ ಅವು ಗಳನ್ನು ನ್ಯಾಯಯುತ ಮಾರ್ಗದಲ್ಲಿಯೇ ನಿರ್ವಹಿಸಬೇಕು. ಕೊಂದು ಬದುಕುವುದು ಬದುಕೇ ಅಲ್ಲ, ಇನ್ನೊಬ್ಬರನ್ನು ಉಳಿಸಿ ಬದುಕುವುದು ಬದುಕು. ನಮಗೆ ಸಿಗುವ ಸಹಚರ್ಯಗಳೇ ನಮ್ಮನ್ನು ಬೆಳೆಸುತ್ತವೆ. ಯಾವುದು ನಿಮ್ಮದಾಗಬೇಕು ಎಂಬುದರ ನಿರ್ಧಾರ ನಿಮ್ಮದೇ ಆಗಿರುತ್ತದೆ. ಅದರಂತೆ ನೀವಾಗುತ್ತೀರಿ ಅನ್ನುತ್ತದೆ ಅವರ ಬದುಕು. ವಾಲ್ಮೀಕಿಯವರು ಹುತ್ತದೊಳಗೆ ಹುದುಗಿ ಹೋದಂತೆ ತಮ್ಮೊಳಗೆ ತಾವು ಹೊಕ್ಕುಬಿಟ್ಟರು. ತಮ್ಮನ್ನು ತಾವು ಅರಿತರು. ಅದನ್ನು ಆಚೆ ಬಂದು ಹಂಚಿದರು. ನಾವು ಹುತ್ತ ಮೆತ್ತಿಕೊಳ್ಳಲು ಕೂಡ ಸಿದ್ಧರಿಲ್ಲ ಮತ್ತು ಅದರಿಂದ ಆಚೆ ಬರಲು ಕೂಡ ಸಿದ್ಧರಿಲ್ಲ. ಮನುಷ್ಯ ತನ್ನನ್ನು ತಾನು ವಿಶ್ಲೇಷಿಸಿಕೊಳ್ಳದಿದ್ದರೆ ಆತನಿಗೆ ಬಾಳಿನ ಸಿದ್ಧಿಯಾಗುವುದಾದರೂ ಹೇಗೆ? ಎನ್ನುತ್ತದೆ ಅವರ ಬಾಳು. ಕ್ರೌಂಚ ಪಕ್ಷಿಗಳ ವಿರಹದ ಕಾರುಣ್ಯ ವಾಲ್ಮೀಕಿಯವರಲ್ಲಿ ಒಂದು ಬದಲಾವಣೆ ತಂದಿತು. ಕರುಣೆ ಕಾವ್ಯವಾಯಿತು. ಬದುಕಿನ ಕ್ರೌರ್ಯಗಳ ಜಾಗದಲ್ಲಿ ಕರುಣೆ ಬಂದು ಕೂರಬೇಕಿದೆ. ಅವರು ತೋರಿದ ಕರುಣೆ, ಅವರೊಳಗಿನ ಕವಿಯನ್ನು ಜಾಗೃತಗೊಳಿಸಿತು. ಕವಿಯಾಗಿ ವಾಲ್ಮೀಕಿಯನ್ನು ನೋಡುವುದಾದರೆ, ಅಂತಹ ಅಪರೂಪದ ಕವಿಯನ್ನು ಈ ನೆಲವು ಮತ್ತೂಮ್ಮೆ ನೋಡಲಿಲ್ಲ. ರಾಮಾಯಣದಂತಹ ಕಾವ್ಯ ಜಗತ್ತಿನಲ್ಲಿ ಮತ್ತೂಂದಿಲ್ಲ. ಇನ್ನೊಂದು ಹುಟ್ಟಿಬರಲಿಲ್ಲ. ಘಟನೆಗಳನ್ನು ಒಂದರೊಳಗೊಂದು ಹೆಣೆಯುತ್ತಾ ಹೋಗುವ ಅವರ ಶೈಲಿ, ರಸ ಪೂರಕವಾಗಿ ಹಾಡುವಂತೆ ಕಟ್ಟಿದ ಅವರ ಶ್ಲೋಕಗಳು, ಪಾತ್ರಗಳನ್ನು ವ್ಯವಸ್ಥಿವಾಗಿ ರೂಪಿಸಿದ ಪರಿ ಇಂದಿಗೂ ಯಾರಿಗೂ ಸಿದ್ಧಿಸಿಲ್ಲ! ರಾಮಾಯಣ ಭಾರತದಲ್ಲಿ ಹುಟ್ಟಿ ವಿಶ್ವಮಾನ್ಯವಾಗಿದೆ. ಬಹು ತೇಕ ದೇಶಗಳಲ್ಲಿ ಅದನ್ನು ಇಂದಿಗೂ ಹಾಡಿಕೊಳ್ಳಲಾಗುತ್ತಿದೆ. ಮಲೇಷ್ಯಾದ ರಾಷ್ಟ್ರಾಧ್ಯಕ್ಷರು ಸೆರಿಪಾದುಕಾಧೂಲಿಯ ಮೇಲೆ ಅಂದರೆ ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿಯೇ ಅಧಿಕಾರ ಸ್ವೀಕರಿಸುತ್ತಾರೆ. ಥಾಯ್ಲೆಂಡಿನ ರಾಜ ವಂಶದಲ್ಲಿ ರಾಜರುಗಳಿಗೆ ರಾಮ ಎಂದೇ ಗೌರವದಿಂದ ಕಾಣುತ್ತಾರೆ. ಅಷ್ಟೇ ಅಲ್ಲದೆ ಲಕ್ಷೊàಪಲಪಕ್ಷ ಜನರ ಬದುಕನ್ನು ರೂಪಿಸಿದೆ. ಒಬ್ಬ ಶಿವಾಜಿ, ನರೇಂದ್ರನೊಳಗಿನ ಒಬ್ಬ ವಿವೇಕಾನಂದ, ಮೋಹನದಾಸನೊಳಗಿನ ಒಬ್ಬ ಗಾಂಧೀಜಿ ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಅದೆಷ್ಟೊ ಸಹಸ್ರ ವರ್ಷಗಳಿಂದ ಹಿಡಿದು ಇಂದಿಗೂ ಅದು ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ರಾಮಾಯಣದಲ್ಲಿ ಜನ ತಮ್ಮ ಬಾಳನ್ನು ನೋಡಿಕೊಳ್ಳಬೇಕು. ಇಲ್ಲಿ ಪ್ರತಿಯೊಬ್ಬರಿಗೂ ಒಂದು ಪಾಠವಿದೆ. ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜಿಕ ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತದೆ. ಮಗನೆಂದರೆ ಶ್ರೀರಾಮನಂತೆ, ತಮ್ಮನೆಂದರೆ ಲಕ್ಷ್ಮಣನಂತೆ, ಹೆಂಡತಿಯೆಂದರೆ ಸೀತೆಯಂತಿರಬೇಕು ಎಂಬ ಆದರ್ಶ ರೂಪಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಗಂಡನ ಸುಖದಲ್ಲಿ ಅಷ್ಟೇ ಅಲ್ಲದೇ ದುಃಖದಲ್ಲೂ ಆತನ ಸಹಧರ್ಮಿಣಿಯೇ ಪಾಲುದಾರಳು ಎಂಬುದು ತಿಳಿಯುತ್ತದೆ. ಇಲ್ಲಿ ಅವನು ಮತ್ತು ಅವಳು ಇಬ್ಬರೂ ಸಮಾನ ಅನ್ನುವುದಿದೆ. ಪರನಾರಿಯ ಮೇಲೆ ಕಣ್ಣು ಹಾಕಿದರೆ ಒದಗುವ ಕೇಡು ಇಂದಿನ ವಿದ್ಯಮಾನಗಳಿಗೆ ತಕ್ಕ ಪಾಠದಂತಿದೆ. ಒಂಟಿ ಮಹಿಳೆ ತಂದೆಯ ನೆರಳಿಲ್ಲದೇ ತಾನೆ ಮಗುವನ್ನು ಸಾಕುವ ಪುರುಷನಿಗೆ ಹಂಗಿಲ್ಲದೆ ಬದುಕಬಲ್ಲೆ ಎಂಬ ಮಹಿಳೆಯ ಆಂತರ್ಯವನ್ನು ಸೀತೆಯ ಮೂಲಕ ತೋರಿಸಿದ್ದಾರೆ. ಯಾವತ್ತೂ ಅಧರ್ಮದ ಮುಂದೆ ಧರ್ಮ, ಅಸತ್ಯದ ಮುಂದೆ ಸತ್ಯ ಗೆಲ್ಲುತ್ತದೆ ಅನ್ನುತ್ತದೆ ರಾಮಾಯಾಣ. ರಾಮರಾಜ್ಯದ ಕಲ್ಪನೆ ಬಂದಿದ್ದೆ ನಮಗೆ ಇಲ್ಲಿಂದ. ವಾಲ್ಮೀಕಿಯವರು ಒಂದು ಆದರ್ಶ ರಾಜ್ಯ ಹೇಗಿರಬೇಕು ಎಂಬುದನ್ನು ರಾಮನ ರಾಜ್ಯದ ಮೂಲಕ ಹೇಳುತ್ತಾರೆ. ತಾವೇ ಬರೆದ ಕಾವ್ಯದಲ್ಲಿ ತಾವು ಕೂಡ ಪಾತ್ರವಾಗಿ ನಿಲ್ಲುವ ಅವರ ಶೈಲಿಗೆ ಅದೆಷ್ಟು ಶ್ರೇಷ್ಠತೆ ಇರಬೇಕು? ವಾಲ್ಮೀಕಿಯವರು ಮತ್ತು ಅವರ ಕಾವ್ಯ ಯಾವತ್ತೂ ಕೂಡ ಪ್ರಸ್ತುತವಾಗುವಂಥದ್ದು. ಇಂದಿನ ಸಮಾಜಕ್ಕೆ ವಿಚಾರಗಳು ಎಂದಿಗಿಂತ ಇಂದು ಹೆಚ್ಚು ಬೇಕಾಗಿವೆ. ಅವರ ಜನ್ಮ ದಿನ ಆಚರಿಸುವ ಜೊತೆ ಜೊತೆಗೆ ಅವರ ನೀಡಿದ ವಿಚಾರಗಳಿಗೆ ಜೊತೆಯಾಗಬೇಕಿದೆ. ಸದಾಶಿವ್ ಸೊರಟೂರು