ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್-19ರ ಜನಾಂದೋಲನ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ರೇಣುಕಾದೇವಿ ಹಾಗೂ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೋವಿಡ್-19ರ ಜನಾಂದೋಲನ ಅಭಿಯಾನದ ಜಾಗೃತಿ ವಾಹನಗಳ ಜಾಥಾ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಎಚ್. ರೇಣುಕಾದೇವಿ ಅವರು, ನಾನು ಮತ್ತು ನನ್ನ ಸಹೊದ್ಯೋಗಿಗಳಿಗೆ ಮಾರಣಾಂತಿಕ ಕೋವಿಡ್ ವೈರಾಣು ಹರಡುವುದನ್ನು ತಡೆಯಲು ಸದಾ ಎಚ್ಚರಿಕೆಯಿಂದ ಎಲ್ಲ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇನೆ. ಯಾವಾಗಲೂ ಹಾಗೂ ಸಾರ್ವಜನಿಕರೊಡನೆ ಇರುವಾಗ ಮುಖ ಕವಚ ಧರಿಸುತ್ತೇನೆ. ಕನಿಷ್ಟ ಆರು ಅಡಿ ಅಂತರ ಕಾಯ್ದುಕೊಳ್ಳುತ್ತೇನೆ. ಆಗಾಗ, ಸೋಪು ಮತ್ತು ನೀರಿನಿಂದ ಕೈತೊಳೆಯುತ್ತೇನೆ. ಒಟ್ಟಾಗಿ ಕೋವಿಡ್-19ರ ವಿರುದ್ಧ ಹೊರಾಟದಲ್ಲಿ ಜಯ ಗಳಿಸೋಣ ಎಂಬ ಪ್ರತಿಜ್ಞಾ ವಿಧಿ ಭೋದಿಸಿದರು.
ಜಿಲ್ಲಾ ನ್ಯಾಯಾಲಯದ ಆವರಣದಿಂದ ವಕೀಲರು ಹಾಗೂ ಅಧಿಕಾರಿಗಳು ನಾಲ್ಕು ತಂಡಗಳಾಗಿ ನಗರದ ವಿವಿಧ ಬಿದಿಗಳಲ್ಲಿ ಕಾಲ್ನಡಿಗೆ ಜಾಥಾದಲ್ಲಿ ತೆರಳಿ ಕೋವಿಡ್ ಅರಿವು ಮೂಡಿಸಿದರು. ಪ್ರತಿ ತಂಡದಲ್ಲಿ ಪ್ರಾಧಿಕಾರದಿಂದ ನಿಯೋಜಿತ ಒಬ್ಬ ಪೆನಲ್ ನ್ಯಾಯವಾದಿಯನ್ನು ಮುಖ್ಯಸ್ಥರನ್ನಾಗಿಸಿದ್ದು, ಪ್ರತಿ ತಂಡದಲ್ಲಿ 7 ಜನ ಪೆನಲ್ ನ್ಯಾಯವಾದಿಗಳು, 5 ಜನ ಅರೇ ನ್ಯಾಯಿಕ ಸ್ವಯಂ ಸೇವಕರು, 5 ಜನ ಆರೋಗ್ಯ ಇಲಾಖೆ ಸಿಬ್ಬಂದಿ, ಇಬ್ಬರುಪೊಲೀಸರನ್ನು ಒಳಗೊಂಡ ತಂಡಗಳು ನಗರದಲ್ಲಿ ವಾಹನದ ಮೂಲಕ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜಾಗೃತಿ ಮೂಡಿಸಿದವು. ಜೊತೆಗೆ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸಲಾಯಿತು.
ನಗರದ ಬಸ್ ನಿಲ್ದಾಣದಲ್ಲಿ ಪೆನಲ್ ನ್ಯಾಯವಾದಿಗಳಾದ ಪಿ.ಎಂ. ಬೆನ್ನೂರ ನೇತೃತ್ವದ ತಂಡ, ನಗರದ ಕೃಷಿ ಮಾರುಕಟ್ಟೆಯಲ್ಲಿಪೆನಲ್ ನ್ಯಾಯವಾದಿಗಳಾದ ಡಿ.ಎನ್. ನಾಯ್ಡು ತಂಡ, ನಗರದ ತರಕಾರಿ ಮಾರುಕಟ್ಟೆಯಲ್ಲಿ ಪೆನಲ್ ನ್ಯಾಯವಾದಿಗಳಾದ ಎಂ.ಎಚ್. ವಾಲಿಕಾರ, ನಗರದ ರೈಲ್ವೆ ನಿಲ್ದಾಣ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ್ ಕಚೇರಿಗಳಲ್ಲಿ ಪೆನಲ್ ನ್ಯಾಯವಾದಿಗಳಾದ ಸಿ.ಜೆ.ನೆಗಳೂರ ನೇತೃತ್ವದ ತಂಡ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಕೈ ತೊಳೆದುಕೊಳ್ಳುವ ಕುರಿತಂತೆ ಪ್ರಾಯೋಗಿಕ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ಇಲ್ಲದೇ ಓಡಾಡುವರಿಗೆ ಮಾಸ್ಕ್ ನೀಡಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೋವಿಡ್‌ನಿಂದ ದೂರ ಉಳಿಯುವಂತೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕಿರಣ ಕೆ., ಹಿರಿಯ ಸಿವಿಲ್ ನ್ಯಾಯಾಧಿಧೀಶರು ಹಾಗೂ ಸಿಜೆಎಂ ಎ.ವಿ. ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ವಿ.ಆರ್.ಗುಡಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ಲಕ್ಷ್ಮೀ ಎನ್.ಗರಗ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನಾಸಿರಾ ಬಾನು, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಪ್ರಭಾರ ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಯಾನಂದ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೆನ್ನೂರ, ವಿವಿಧ ವಕೀಲರು, ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾರಣಾಂತಿಕ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸದಾ ಎಚ್ಚರಿಕೆಯಿಂದ ಎಲ್ಲ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವಾಗಲೂ ಹಾಗೂ ಸಾರ್ವಜನಿಕರೊಡನೆ ಇರುವಾಗ ಮುಖ ಕವಚ ಧರಿಸಿ ಕನಿಷ್ಟ ಆರು ಅಡಿ ಅಂತರಕಾಯ್ದುಕೊಳ್ಳಬೇಕು. ಆಗಾಗ ಸೋಪು ಮತ್ತು ನೀರಿನಿಂದ ಕೈತೊಳೆಯಬೇಕು. ಪ್ರತಿಯೊಬ್ಬರೂ ಕೋವಿಡ್-19ರ ವಿರುದ್ಧ ಹೋರಾಡಿ ಜಯ ಗಳಿಸೋಣ.
–ಎಸ್.ಎಚ್. ರೇಣುಕಾದೇವಿ, ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧಿಧೀಶರು