ಜೀವನ ಎನ್ನುವುದು ಸದಾ ಏಳುಬೀಳುಗಳಿಂದ ಕೂಡಿದ ಒಂದು ಸುಂದರವಾದ ಅಂಗಳ. ಈ ಅಂಗಳದಲ್ಲಿ ನಾವು ಸದಾ ಕ್ರಿಯಾಶೀಲರಾಗಿ, ಚೇತ ನಾಯುಕ್ತವಾಗಿ ಆಡಲೇ ಬೇಕಾಗುತ್ತದೆ. ಜೀವನವೆನ್ನುವ ಆಟದಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತವನ್ನು ಕಾಯ್ದುಕೊಳ್ಳಬೇಕು. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತಾಗ ಆಟದಿಂದ ಹಿಂದೆ ಸರಿಯುವುದು, ತನ್ನ ಜೀವನ ಮುಗಿದೇ ಹೋಯಿತು, ತಾನು ಹುಟ್ಟಿದ್ದೇ ವ್ಯರ್ಥ, ಏನೂ ಸಾಧಿಸದಿದ್ದ ಮೇಲೆ ಬದುಕಿದ್ದು ಪ್ರಯೋಜನವೇನು? ಎನ್ನುವಂತಹ ವೃಥಾ ಪ್ರಲಾಪ ಸರಿಯಲ್ಲ.
ಜೀವನ ಎನ್ನುವುದು ದೇವರು ನಮಗೆ ನೀಡಿದ ಅತ್ಯಮೂಲ್ಯವಾದ ಕಾಣಿಕೆ. ಸೋತಾಗ ಕುಗ್ಗದೆ ಆ ಸೋಲಿಗೆ ಕಾರಣ ವೇನು? ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸೋತಾಗ ಕುಗ್ಗ ಬಾರದು. ಹಲವು ಬಾರಿ ಸೋತರೂ ಗೆಲುವಿನ ದಾರಿಯ ಚಿಕ್ಕ ಬೆಳಕು ನಮಗೆ ಗೋಚರಿಸಿಯೇ ಗೋಚರಿಸುತ್ತದೆ. ಆ ಚಿಕ್ಕ ಬೆಳಕೇ ಇಡೀ ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಇದಕ್ಕಾಗಿ ಆತ್ಮವಿಶ್ವಾಸ, ಸಾಧಿಸುವೆನೆಂಬ ಛಲ, ನಮ್ಮನ್ನು ನಾವೇ ಮೇಲೆತ್ತುವ ಮನೋ ಬಲವನ್ನು ಮೈಗೂಡಿಸಿಕೊಳ್ಳಬೇಕು. ಇವುಗಳು ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ.
ವರ್ಧಮಾನ ಮಹಾವೀರ ಮಹಾ ಜ್ಞಾನಿಯಾಗಲು 12 ವರ್ಷಗಳ ಕಾಲ ತಪಸ್ಸು ಮಾಡಬೇಕಾಯಿತು. ಹಾಗೆಯೇ ಗೆಲುವು ಎನ್ನುವುದು ರಾತ್ರಿ ಕಳೆಯುವು ದರೊಳಗೆ ಸಿಗುವಂಥದ್ದಲ್ಲ. ಜೀವನದಲ್ಲಿ ಗೆಲುವು ಸಾಧಿಸಲು ಕಠಿನ ಪರಿಶ್ರಮ ಅಗತ್ಯ. ದೃಢ ಚಿತ್ತ ಆವಶ್ಯಕ. ಅರ್ಜುನ ಹೇಗೆ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಸಫಲತೆಯನ್ನು ಸಾಧಿಸಿ ಬಿಲ್ವಿದ್ಯೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸುತ್ತಾನೋ ಹಾಗೆ ನಾವು ಗುರಿಯೆಡೆಗೆ ದೃಢಸಂಕಲ್ಪ ಹೊಂದಬೇಕು. “ಸೋಲು’ ನಮ್ಮ ಜೀವನವನ್ನು ಮುಗಿಸುವಂತಾಗ ಬಾರದು, ಮುಳುಗಿಸುವಂತಾಗ ಬಾರದು. ಜೀವನದಲ್ಲಿ ಸತತ ಸೋಲನ್ನು ಅನುಭವಿಸಿದಾಗಲೂ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳದೇ ಆಶಾವಾದಿಗಳಾಗಿರೋಣ. ನೀರಿನಲ್ಲಿ ಮುಳುಗುತ್ತಿರುವವನಿಗೆ ಚಿಕ್ಕ ಹುಲ್ಲು ಕಡ್ಡಿ ಹೇಗೆ ಆಸರೆಯಾಗಬಲ್ಲುದೋ ಹಾಗೆಯೇ ಸೋತವನಿಗೆ ಗೆಲುವಿನ ಚಿಕ್ಕ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ ಅದನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಆ ಚಿಕ್ಕ ಅವಕಾಶವೇ ಬಹುದೊಡ್ಡ “ಗೆಲುವಿನ’ ಮೆಟ್ಟಿಲಾಗಬಹುದು. ಜೀವನದಲ್ಲಿ ಸೋತಾಗ ನಮ್ಮ ಪ್ರಯತ್ನವನ್ನು ನಿಲ್ಲಿಸದೇ ನಮ್ಮ ಜೀವನ ಇಷ್ಟೇ, ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ನಿರಾಶಾವಾದವನ್ನು ಹೊಂದದೇ “ಸಾಧಿಸಿದರೆ ಸಬಲ ನುಂಗಬಹುದು’ ಎಂಬಂತೆ ಸತತ ಪ್ರಯತ್ನ ಪಡೋಣ. ಪ್ರಯತ್ನವನ್ನು ಪಡದೆ, ಕಠಿನ ಪರಿಶ್ರಮವಿಲ್ಲದೆ ಸುಲಭವಾಗಿ ಗೆಲುವು ಸಿಗಬೇಕೆಂದರೆ ಅದು ಹೇಗೆ ಸಾಧ್ಯವಾಗುತ್ತದೆ?
ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ
ಗೆಲುವು ಕೂಡ ಅಷ್ಟೆ. ನೀವು ನಿಮ್ಮ ಜೀವನದ ಯಾವುದೇ ಸವಾಲು ಅಥವಾ ಗುರಿಯಲ್ಲಿ ಏಕ ಪ್ರಯತ್ನದಲ್ಲಿ ಗೆಲುವು ಸಾಧಿಸಿರುತ್ತೀರಿ ಎಂದುಕೊಳ್ಳಿ. ಆದರೆ ಆ ಗೆಲುವಿನ ನೈಜ ಸವಿಯನ್ನು ಸಂಭ್ರಮಿಸಲು ನಿಮಗೆ ಸಾಧ್ಯವಾಗದು. ಅದರ ಸಂತಸ, ಸಂಭ್ರಮವೇನಿ ದ್ದರೂ ಕ್ಷಣಿಕ ಮಾತ್ರ. ಈ ಹಿಂದೆ ಸೋಲನ್ನು ಅನುಭವಿಸಿದಾತನಿಗಷ್ಟೇ ಗೆಲುವಿನ ನಿಜವಾದ ರುಚಿ ತಿಳಿಯುತ್ತದೆ. ಹಾಗೆಯೇ ಜೀವನ ಎಂಬ ಪರೀಕ್ಷೆಯಲ್ಲೂ ಕೂಡ. ಒಂದಿಷ್ಟು ಅಡೆತಡೆ, ಸಮಸ್ಯೆ, ಸವಾಲುಗಳು ನಮ್ಮ ಜೀವನದಲ್ಲಿ ಎದುರಾದಾಗ ಮಾತ್ರವೇ ಜೀವನದ ನಿಜವಾದ ಬೆಲೆ ಅರ್ಥವಾಗುತ್ತದೆ. ಸೋತ ಬಳಿಕ ಪಡೆದ ಗೆಲುವು ಮನುಷ್ಯನನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಗೆಲುವಿನ ನಿಜವಾದ ಬೆಲೆ, ಮೌಲ್ಯ ತಿಳಿದ ವ್ಯಕ್ತಿ ಅದಕ್ಕಾಗಿ ಪಟ್ಟ ಶ್ರಮ, ಹೋರಾಟ, ಸವೆಸಿದ ಹಾದಿ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ. ಆ ಮೂಲಕ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಇನ್ನೊಬ್ಬರಿಗೆ ಮಾದರಿಯಾಗುತ್ತಾನೆ.
ಜೀವನದಲ್ಲಿ ಯಶಸ್ಸು ಸಂಪಾದಿಸಿದ ಮೇಲೆ, ಗೆಲುವು ಸಾಧಿಸಿದ ಮೇಲೆ ಅಹಂಕಾರ ಪಡಬಾರದು. ಅಹಂಕಾರ ಪಟ್ಟರೆ ಇಡೀ ವ್ಯಕ್ತಿತ್ವವೇ ನಾಶವಾಗಿ ಹೋಗುತ್ತದೆ. ಜೀವನದಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ಜೀವನ ಎನ್ನುವ ಅಂಗಳದಲ್ಲಿ ಯಶಸ್ವಿಯಾಗಿ ಆಡೋಣ, ಗೆಲುವು ಸಂಪಾದಿಸೋಣ.
-ಭಾಗ್ಯಶ್ರೀ, ಹಾಲಾಡಿ