ಈ ವಿಷಯ ಯಾರನ್ನು ರೊಚ್ಚಿಗೇಳಿಸುವುದಕ್ಕಲ್ಲ, ಇನ್ಯಾರನ್ನೋ ಟಿಕೀಸುವುದಕ್ಕಲ್ಲ, ಇದು ಕೇವಲ ಒಂದು ಅನಿಸಿಕೆ.
ಹೌದು…. ಇತ್ತೀಚೆಗೆ ನಾವು ಎಲ್ಲಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಎಂಬ ಹಲವಾರು ವಿಷಯಗಳು ಕಣ್ಣ ಮುಂದೆ ಹಾಗೆ ಬಂದು ಬೇಸರ ತರುತ್ತಿದೆ. ಅದು ಕೆಲಸದ ವಿಷಯದಲ್ಲಿ ಅಲ್ಲ. ನಮ್ಮ ವಿಚಾರಗಳಲ್ಲಿ, ನಮ್ಮ ನಡುವಳಿಕೆಯಲ್ಲಿ, ನಮ್ಮ ಭಾಷೆಯಲ್ಲಿ.
ಮುಖ್ಯವಾಗಿ ಈ ಭಾಷೆ ಎಂಬ ವಿಷಯ ಮನುಷ್ಯ ಸಂವಹನ ನಡೆಸಲು ಬಹಳ ಮುಖ್ಯ. ನಮ್ಮ ಮನೆಯಲ್ಲಿ ನಮ್ಮ ತಾಯಿಯನ್ನು ಬಿಟ್ಟು ಬೇರೊಬ್ಬಳನ್ನು ಅಮ್ಮಾ ಅನ್ನುವುದು ಎಷ್ಟು ಸರಿ. ಸಾಕಿ, ಸಲುಹಿ, ತುತ್ತು ಕೊಟ್ಟವಳನ್ನು ತಿರಸ್ಕರಿಸುವುದು ತಪ್ಪು.ಅನ್ಯ ಭಾಷೆ ಕಲಿಯುವುದು ತಪ್ಪಲ್ಲ. ಜ್ಞಾನಕ್ಕಾಗಿ, ತಿಳುವಳಿಕೆಗಾಗಿ ಅದು ಸರಿಯೇ ಹಾಗಂತ ನಮ್ಮ ನಾಡಲ್ಲೇ ನಮ್ಮ ಭಾಷೆ ಇಲ್ಲದೆ ಇರುವುದು ಯಾವ ನ್ಯಾಯ.
ಚಿಕ್ಕ ಕಂದಮ್ಮಗಳು ತಾವು ಯಾವ ರಾಜ್ಯದವರು, ಮೂಲತಃ ನನ್ನ ಭಾಷೆ ಯಾವುದೇನ್ನುವ ಒಂದು ಸಾಮಾನ್ಯ ಜ್ಞಾನ ಅವರಿಗಿಲ್ಲ ಎಂದಾಗ ತಪ್ಪು ಯಾರದ್ದು? ಹೆತ್ತವರದೋ, ಶಾಲಾ ಮಾಧ್ಯಮಗಳಲ್ಲೋ, ಬದಲಾಗುತ್ತಿರುವ ಸಮಾಜದಲ್ಲೋ ನಾ ಕಾಣೆ.
ಸಾಮಾಜಿಕ ಜಾಲತಾಣಗಳಲ್ಲಿ, ಮನರಂಜನ ಕಾರ್ಯಕ್ರಮಗಳಲ್ಲಿ, ಸುದ್ದಿ ಪತ್ರಿಕೆಗಳಲ್ಲಿ, ಸಂಘಟನೆಗಳಲ್ಲಿ ಈ ಒಂದು ವಿಚಾರದ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆದರು ಕೂಡ, ನಮ್ಮ ಕರ್ನಾಟಕ ಬದಲಾಗುತ್ತಿಲ್ಲ. ನಮ್ಮ ಕರ್ನಾಟಕದಲ್ಲಿ ಕನ್ನಡಕ್ಕೆ ನೀಡಬೇಕಾದಂತಹ ಸ್ಥಾನಮಾನ ಮತ್ತು ಗೌರವವನ್ನು ನಾವೇ ನಮ್ಮ ಕೈಯಾರೆ ಹಾಳುಮಾಡುತ್ತಿದ್ದೇವೆ ಅಂದಾಗ ಇನ್ನೊಬ್ಬರನ್ನು ದೂರುವುದು, ಅವರು ಕನ್ನಡವನ್ನು ಕಲಿಯುತ್ತಿಲ್ಲ, ಬಳಸುತ್ತಿಲ್ಲ, ಅವರು ಸರಿ ಇಲ್ಲಾ ಎನ್ನುವ ಮೊದಲು ನಾವು ಕನ್ನಡವನ್ನು ಅವರೊಂದಿಗೆ ಮಾತನಾಡಬೇಕು, ಅರ್ಥೈಸಬೇಕು. ನಾವೇ ಬೇರೊಂದು ಭಾಷೆಯಲ್ಲಿ ಮಾತನಾಡಿ ಅವರಿಗೆ ಬೈಯುವುದರಲ್ಲಿ ಯಾವುದೇ ಅರ್ಥವಿಲ್ಲ. ಮೊದಲು ನಾವು ಸರಿಯಾಗಬೇಕು. ನಾವೇ ನಮ್ಮ ಅಮ್ಮನನ್ನು ಅಮ್ಮ ಎಂದು ಪರಿಚಯಿಸದಿದ್ದರೆ ಇನ್ನೊಬ್ಬರಿಗೆ ತಿಳಿಯುವುದಾದರೂ ಹೇಗೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೇರೆಯೇ ಭಾಷೆ. ಕಾರಣ ಕೇಳಿದರೆ ಬದ್ಕೊಕೆ, ತಿಳ್ಕೊಳ್ಳೋಕೆ, ಬೇರೆ ಭಾಷೆ ಬೇಕೇ ಬೇಕು ರೀ.. ಇಲ್ಲಾ ಅಂದ್ರೇ ಜೀವನ ಮಾಡಕಾಗುತ್ತಾ, ಕಾಲಕ್ಕೆ ತಕ್ಕಂತೆ ನಾವು ಬದ್ಲಾಗ್ಬೇಕು.. ಈ ರೀತಿಯ ಮಾತುಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದೆ.
ಪುಸ್ತಕ ಓದಿ ಕನ್ನಡ ಕಲಿತವ್ರು ನಾವೆಲ್ಲ. ರೀ ನಾವು ಹುಟ್ಟತಾನೆ ಕನ್ನಡ ನಾ ಅರ್ದು ಕುಡಿªದೀವಿ ಎನ್ನುವವರು ತಮ್ಮ ಮಕ್ಕಳಿಗೆ ಬೇರೊಂದು ಭಾಷೆಯ ಬಗ್ಗೆ ಹಿತವಚನ ನೀಡುವವರು ಇದ್ದಾರೆ. ಈ ರೀತಿ ಜನರೇ ಎಲ್ಲೆಡೆ ತುಂಬ್ಕೊಂಡಿರೋ ನಮ್ಮ ನಾಡಲ್ಲಿ ನಾವು ಹೊರಗಿನವರೇ ತಾನೇ..ಬಸ್ ಟಿಕೆಟ್, ಮಳಿಗೆಯ ಪಟ್ಟಿ, ಪಠ್ಯ-ಪುಸ್ತಕ ಹೀಗೆ ಚಿಕ್ಕ-ಪುಟ್ಟ ವಿಷಯಗಳಲ್ಲಿ ಕನ್ನಡ ಉಳಿದಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಅದಕ್ಕಾಗಿ ಮೊದಲು ನಾವು ಬದಲಾಗಿ, ಇನ್ನೊಬ್ಬರನ್ನು ಬದಲಾಯಿಸಲು ಯತ್ನಿಸೋಣ…..
-ವಿದ್ಯಾ
ಉಡುಪಿ