ಮೂಡಬಿದಿರೆ: ಶಿಕ್ಷಣ, ಪ್ರವಾಸೋದ್ಯಮ, ಧಾರ್ಮಿಕ ಪರಂಪರೆಯ ತಾಣವಾದ ಮೂಡಬಿದಿರೆಯು ಉತ್ತಮ ತ್ಯಾಜ್ಯ ನಿರ್ವಹಣೆಯಲ್ಲಿಯೂ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳುವಂತಾಗಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಯತ್ನಿಸಬೇಕಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಪುರಸಭೆ, ರೋಟರಿ ಕ್ಲಬ್, ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ, ರೋಟರಿ ಕ್ಲಬ್ ಮೂಡಬಿದಿರೆ ಟೆಂಪಲ್ ಟೌನ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಪ್ರಸ್ ಕ್ಲಬ್ ಇವುಗಳ ಸಹಭಾಗಿತ್ವದಲ್ಲಿ ‘ತ್ಯಾಜ್ಯ ನಿರ್ವಹಣೆ- ಒಂದು ಸವಾಲು’ ಎಂಬ ವಿಷಯದ ಕುರಿತು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಮೂಡಬಿದಿರೆಯಲ್ಲಿ ತ್ಯಾಜ್ಯ ವಿಲೇವಾರಿ ಎಂಬುದು ತಲೆಶೂಲೆಯಾಗಿತ್ತು. ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಜನತೆಯ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು.
ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಕೃಷಿ ತಜ್ಞ ಡಾ| ಎಲ್. ಸಿ ಸೋನ್ಸ್, ಅಭಿವೃದ್ಧಿ ನಿಗಮದ ನಿರೀಕ್ಷಕಿ ವಿನಯ, ರೋಟರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಸೋಜಾ, ಉದ್ಯಮಿ ತಿಮ್ಮಯ್ಯ ಶೆಟ್ಟಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಲಾ, ಶಿಕ್ಷಣ ಇಲಾಖೆಯ ದಿನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಪಿ.ಕೆ. ತೋಮಸ್, ಸುರೇಶ್ ಕೋಟ್ಯಾನ್, ಸುಪ್ರಿಯಾ ಡಿ. ಶೆಟ್ಟಿ, ಅಬ್ದುಲ್ ಬಶೀರ್, ‘ಮೂಡಾ’ ಅಧ್ಯಕ್ಷ ಸುರೇಶ್ ಪ್ರಭು, ರೋಟರಿ ಕ್ಲಬ್‌ಅಧ್ಯಕ್ಷ ಶ್ರೀಕಾಂತ್ ಕಾಮತ್, ಬಲರಾಮ್ ಕೆ.ಎಸ್., ಪ್ರಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಪತ್ರಕರ್ತ ಹರೀಶ್ ಆದೂರು, ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಇರುವೈಲು ಗ್ರಾ.ಪಂ ಅಧ್ಯಕ್ಷೆ ನವೀನ ಹಾಗೂ ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ ಉಪಸ್ಥಿತರಿದ್ದರು.
ಪುರಸಭಾ ಕಂದಾಯ ನಿರೀಕ್ಷಕ ಧನಂಜಯ ಸ್ವಾಗತಿಸಿದರು. ಪರಿಸರ ಅಭಿಯಂತರೆ ಶಿಲ್ಪಾ ಪ್ರಸ್ತಾವನೆಗೈದರು. ಉಪನ್ಯಾಸಕ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ವಿಚಾರಗೋಷ್ಠಿಗಳು
‘ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳಿಯ ಆಡಳಿತ ವ್ಯವಸ್ಥೆಯ ಪಾತ್ರ’ ಕುರಿತು ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ| ಬಿ.ಎಸ್.ಶಂಕರ್, ‘ಬಡಾವಣೆ ಕೇಂದ್ರಿತ ಶೂನ್ಯ ತ್ಯಾಜ್ಯ ನಿರ್ವಹಣೆ’ ಬಗ್ಗೆ ಮೈಸೂರಿನ ಶೂನ್ಯ ಕಸ ನಿರ್ವಹಣಾ ತಜ್ಞ ಡಾ| ಕೆ.ಎಸ್. ನಾಗಪತಿ, ‘ಗೃಹ ಹಾಗೂ ಉದ್ದಿಮೆ ಕೇಂದ್ರಿತ ಶೂನ್ಯ ತ್ಯಾಜ್ಯ ನಿರ್ವಹಣ ಮಾದರಿ’ ಬಗ್ಗೆ ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಮುಖ್ಯಸ್ಥ ಶ್ಯಾಮ್ ಸುಂದರ್ ಸುಬ್ಬರಾವ್ ಹಾಗೂ ‘ತ್ಯಾಜ್ಯ ನಿರ್ವಹಣೆ- ಅಕ್ಷಯ ಪಾತ್ರೆ ಮಾದರಿ’ ಕುರಿತು ಇಸ್ಕಾನ್ ಅಕ್ಷಯಪಾತ್ರೆ ಪ್ರತಿಷ್ಠಾನದ ಸಲಹೆಗಾರ ಸಿ.ವಿ ತಿರುಮಲ ಅವರು ವಿಚಾರ ಮಂಡಿಸಿದರು. ತ್ಯಾಜ್ಯ ನಿರ್ವಹಣೆ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.