Advertisement

ಬಸವಣ್ಣನ ಫೋಟೋ ಜತೆ ವಚನ ನಾಮಫಲಕವೂ ಇರಲಿ

01:15 PM Jun 23, 2017 | |

ದಾವಣಗೆರೆ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರದ ಜೊತೆಗೆ ಅವರ ಮೂರು ಪ್ರಮುಖ ವಚನಗಳ ಸಿದ್ಧಾಂತದ ನಾಮಫಲಕ ಅಳವಡಿಸಬೇಕು ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. 

Advertisement

ಬಸವ ಬಳಗ, ಅಜ್ಜಂಪುರ ಶೆಟ್ರಾ ಸೇವಾ ಟ್ರಸ್ಟ್‌, ಕರುಣಾ ಜೀವ ಕಲ್ಯಾಣ ಟ್ರಸ್ಟ್‌, ಗುಂಡಿ ಮಹಾದೇವಪ್ಪ ಟ್ರಸ್ಟ್‌, ಸಂಯುಕ್ತಾಶ್ರಯದಲ್ಲಿ ಗುರುವಾರ ಸರಸ್ವತಿ ನಗರದ ಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಶ್ರೀ ಶರಣೆ ಸತ್ಯಕ್ಕನವರ ಸ್ಮರಣೋತ್ಸವ ಹಾಗೂ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರದ ಜೊತೆಗೆ ಅವರ ಕಳಬೇಡ, ಕೊಲಬೇಡ… ಇವನಾರವ… ಇವನಾರವ… ಹಾಗೂ ದಯಯೇ ಧರ್ಮದ ಮೂಲವಯ್ಯ… ವಚನಗಳ ಸಿದ್ಧಾಂತದ ನಾಮಫಲಕ ಅಳವಡಿಸಬೇಕು ಎಂದು ತಿಳಿಸಿದರು. ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ, ವಚನಗಳ ಸಿದ್ಧಾಂತದ ನಾಮಫಲಕ ಅಳವಡಿಸಿದಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡಬೇಕು.

ಎಲ್ಲರೂ ವಚನಗಳ ಆಶಯ ಅರಿತು ಕೆಲಸ ಮಾಡಬೇಕು. ಯಾವುದೇ ಘೋಷಣೆ ಬರೀ ಘೋಷಣೆ ಆಗಬಾರದು. ಘೋಷಣೆ ಮತ್ತು ಆಚರಣೆ ಒಂದಾಗಬೇಕು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತ್ಛ ಭಾರತದ ಬಗ್ಗೆ ಹೇಳುತ್ತಾರೆ.

ಬಾಹ್ಯ ಕಸವನ್ನ ಸ್ವತ್ಛ ಮಾಡುವ ಜೊತೆಗೆ ಅಂತರಂಗದಲ್ಲಿನ ಕಸವನ್ನೂ ಸ್ವತ್ಛ ಮಾಡಿದಾಗ ಮಾತ್ರ ನಿಜವಾದ ಸ್ವತ್ಛಭಾರತದ ನಿರ್ಮಾಣ ಆಗುತ್ತದೆ. ಸಾತ್ವಿಕರು, ದಾರ್ಶನಿಕರು, ಅನುಭಾವಿಗಳ ಒಡನಾಟ, ಅವರ ಸಂದೇಶದಂತೆ ಬಾಳುವ ಮೂಲಕ ಮನದ ಮಲಿನವನ್ನ ದೂರ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 

Advertisement

ಪ್ರಸ್ತುತ ವಾತಾವರಣದಲ್ಲಿ ಎಲ್ಲೆಡೆ ಭ್ರಷ್ಟಾಚಾರ ಕಂಡು ಬರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲೂ ಭ್ರಷ್ಟತೆ ಬಿಟ್ಟಿಲ್ಲ. ಪ್ರಾಯಶಃ  ಶರಣರ ವಚನ ಸಾಹಿತ್ಯದ ಪರಿಚಯ ಮತ್ತು ಅನುಸಂಧಾನ ಆಗದೇ ಇರುವುದೇ ಅದಕ್ಕೆ ಕಾರಣ. ಶರಣರ ವಚನ ಸಾಹಿತ್ಯದ ಪರಿಚಯ ಮತ್ತು ಅನುಸಂಧಾನದ ಮೂಲಕ ಬಾಹ್ಯದಂತೆ ಅಂತರಂಗದ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. 

ಬಾಹ್ಯದಲ್ಲಿ ಕಾವಿ ಧರಿಸಿ, ಹಣೆಗೆ ವಿಭೂತಿ ಹಚ್ಚಿದ ಕಾರಣಕ್ಕೆ ಯಾರೂ ಶರಣರು, ಜಂಗಮರಾಗಲಿಕ್ಕೆ ಸಾಧ್ಯವಿಲ್ಲ. ಅಂತರಂಗದಲ್ಲೂ ಶರಣರಾಗಬೇಕು. ಅರಿಯುವ ಸದಾಚಾರ ಉಳ್ಳವರೇ ನಿಜವಾದ ಶರಣರು ಮತ್ತು ಜಂಗಮರಾಗಲಿಕ್ಕೆ ಸಾಧ್ಯ. 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಅಂತರಂಗದ ಶುದ್ಧತೆಯ ಮಾರ್ಗೋಪಾಯ ತಿಳಿಸಿದ್ದರು. ದಿನ ನಿತ್ಯ ಬೀದಿ ಕಸ ಗುಡಿಸುತ್ತಿದ್ದ ಈಗಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಜಂಬೂರಿನ ಸತ್ಯಕ್ಕ ಸತ್ಯಕ್ಕೆ ತನ್ನ ಕಾಯಕ ಶ್ರದ್ಧೆಯಿಂದ ಬೆಳಕಾದರು.

ಕಸ ಹೊಡೆಯುವುದು ಮಹಾನ್‌ ಕೆಲಸ. ಕೀಳಿರಿಮೆ ಬಿಟ್ಟು ಕಾಯಕಯೋಗಿಗಳಾಗಬೇಕು ಎಂಬ ಸಂದೇಶ ನೀಡಲು ಸತ್ಯಕ್ಕನವರ ಸ್ಮರಣೋತ್ಸವದಲ್ಲಿ 40 ಜನ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಸಮ್ಮುಖ ವಹಿಸಿದ್ದ ಬಸವ ಬಳಗದ ವಿ. ಸಿದ್ದರಾಮ ಶರಣರು, ಬೀದಿ ಕಸ ಗುಡಿಸುತ್ತಿದ್ದ ಸತ್ಯಕ್ಕ ಮಹಾನ್‌ ಕಾಯಕ ಜೀವಿ.

ಪ್ರಾಮಾಣಿಕ, ಸತ್ಯದ ಪ್ರತೀಕ. ಪೌರ ಕಾರ್ಮಿಕರು ಸತ್ಯಕ್ಕನವರ ಸ್ಮರಣೋತ್ಸವ ಆಚರಿಸುವಂತಾಗಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಸತ್ಯಕ್ಕನವರ ಸ್ಮರಣೋತ್ಸವದಲ್ಲಿ 40 ಜನ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುಗೆ ಅಂಶ. 

ಯಾವುದೇ ಕೆಲಸವೇ ಆಗಲಿ ಅದರ ಮೂಲಕ ಕೈಲಾಸ ಕಾಣುವಂತಾಗಬೇಕು ಎಂದರು. ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿ, ಬಸವಾದಿ ಶರಣರ ವಚನ, ಸಂದೇಶ ಪಾಲನೆಯಿಂದ ಎಲ್ಲಾ ಒಳ್ಳೆಯದಾಗುತ್ತದೆ. ಇಂದಿನ ಆಧುನಿಕ ಕಾಲದ ಅನುಗುಣವಾಗಿ ಬಸವಾದಿ ಶರಣರ ವಚನ, ಸಂದೇಶಗಳನ್ನು ಹೆಚ್ಚು ಪ್ರಚುರಪಡಿಸಬೇಕು ಎಂದು ಅಭಿಪ್ರಾಯಪಟ್ಟರು. 

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ, ಗುಂಡಿ ಮಹಾದೇವಪ್ಪ ಟ್ರಸ್ಟ್‌ನ ಪುಷ್ಪಾ ಗುಂಡಿ ಸಿದ್ದೇಶ್‌ ಇತರರು ಇದ್ದರು. ಬಸವ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. 40 ಜನ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next