Advertisement

ದೇಶೀಯ ಸಾಮರ್ಥ್ಯ ಬಲಿಷ್ಠಗೊಳಿಸೋಣ: ಮೋದಿ

09:31 AM Jul 23, 2020 | mahesh |

ಹೊಸದಿಲ್ಲಿ: ಇತ್ತೀಚಿನ ಅನುಭವವು ನಮಗೊಂದು ಪಾಠವನ್ನು ಕಲಿಸಿಕೊಟ್ಟಿದೆ. ಇಲ್ಲಿಯವರೆಗೆ ಜಾಗತಿಕ ಆರ್ಥಿಕತೆಯು ಹೆಚ್ಚು ದಕ್ಷತೆ ಮತ್ತು ಅತ್ಯುತ್ಕೃಷ್ಟತೆಯನ್ನೇ ಕೇಂದ್ರೀಕರಿಸಿತ್ತು. ದಕ್ಷತೆ ಬೇಕು ನಿಜ. ಆದರೆ ಅದರಷ್ಟೇ ಮುಖ್ಯವಾದ ಮತ್ತೂಂದು ವಿಚಾರವನ್ನು ನಾವು ನಿರ್ಲಕ್ಷಿಸಿದ್ದೆವು. ಅದೇನೆಂದರೆ, ಬಾಹ್ಯ ಆಘಾತದಿಂದ ಪುಟಿದೇಳುವಂಥ ಸಾಮರ್ಥ್ಯ. ದೇಶೀಯ ಸಾಮರ್ಥ್ಯ ಬಲಿಷ್ಠವಾಗಿದ್ದರೆ ಜಾಗತಿಕ ಆರ್ಥಿಕತೆಯನ್ನು ಪುಟಿದೇಳುವಂತೆ ಮಾಡಲು ಸಾಧ್ಯವಿದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

Advertisement

ಹೀಗೆಂದು ಕರೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ. ಅಮೆರಿಕ-ಭಾರತ ಉದ್ದಿಮೆ ಮಂಡಳಿಯ 45ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಇಂಡಿಯಾ ಐಡಿಯಾಸ್‌ ವರ್ಚುವಲ್‌ ಶೃಂಗದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಜತೆಗೆ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅಮೆರಿಕದ ಬೆಂಬಲವನ್ನೂ ಕೋರಿದ್ದಾರೆ.

ಹೂಡಿಕೆಗೆ ಆಹ್ವಾನ: ಆರೋಗ್ಯ, ಇಂಧನ, ಮೂಲಸೌಕರ್ಯ, ನಾಗರಿಕ ವಿಮಾನಯಾನ, ರಕ್ಷಣೆ, ಬಾಹ್ಯಾಕಾಶ, ಹಣಕಾಸು ಮತ್ತು ವಿಮೆ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ. 2019-20ರಲ್ಲಿ 74 ಶತಕೋಟಿ ಡಾಲರ್‌ ವಿದೇಶಿ ನೇರ ಬಂಡವಾಳ ಹರಿದುಬಂದಿದೆ. ಕೊರೊನಾ ಸೋಂಕಿನ ಸಂಕಷ್ಟದ ಮಧ್ಯೆಯೂ ಭಾರತ 20 ಶತಕೋಟಿ ಡಾಲರ್‌ಗೂ ಅಧಿಕ ಬಂಡವಾಳವನ್ನು ಆಕರ್ಷಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next