Advertisement

ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿ

09:03 PM Apr 03, 2021 | Team Udayavani |

ಕಾರಟಗಿ : ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ನಡೆಸಿದ ಹೋರಾಟಕ್ಕೆ ಸರ್ಕಾರ 6 ತಿಂಗಳು ಸಮಯಾವಕಾಶ ಕೇಳಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ. ನಮ್ಮ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದೇವೆ. ಆದರೆ ಸರಕಾರ ಮಾತು ತಪ್ಪಿದಲ್ಲಿ ಸೆಪ್ಟೆಂಬರ್‌ 19ರಿಂದ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಿಗೆ ಆಗ್ರಹಿಸಿ ನಡೆದ ಹೋರಾಟಕ್ಕೆ ಸಹಕರಿಸಿದ ಸಮಾಜ ಬಾಂಧವರಿಗೆ ಶರಣು ಶರಣಾರ್ಥಿ ಸಂದೇಶ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುಧ್ಯಯಕ್ಕೆ 27ವರ್ಷದ ಹಿಂದೆ ಹುಟ್ಟು ಹಾಕಿದ ಈ ಹೋರಾಟ ಈಗ ಅಂತಿಮ ಘಟ್ಟ ತಲುಪಿದೆ. ಅಲ್ಲದೆ 2ಎಗಾಗಿ ಇದು ಅಂತಿಮ ಹೋರಾಟವಾಗಿದೆ ಎಂದರು.

2ಎಗಾಗಿ ನಡೆದ ಹೋರಾಟದಲ್ಲಿ ಈ ಬಾರಿ ಸಮಾಜದ 10 ಲಕ್ಷ ಜನರನ್ನು ಸೇರಿಸಲಾಗಿತ್ತು. ಒಂದು ವೇಳೆ 6 ತಿಂಗಳ ನಂತರ ಈಡೇರಿದಿದ್ದರೆ ಮುಂದಿನ ಅಂತಿಮ ಹೋರಾಟದಲ್ಲಿ ರಾಜ್ಯದ 20 ಲಕ್ಷ ಜನ ಬೆಂಗಳೂರಿಗೆ ದಾಪುಗಾಲು ಇಡುವ ಪರಿಸ್ಥಿತಿ ಬಂದರೂ ಬರಬಹುದು. ಯಾವುದಕ್ಕೂ ಸಮಾಜ ಬಾಂಧವರು ಸಿದ್ಧರಾಗಿರಬೇಕು. 2ಎ ಮೀಸಲು ಹೋರಾಟವನ್ನು ಪಂಚಮಸಾಲಿ ಸಮಾಜದ ಇತಿಹಾಸದಲ್ಲಿ ಐತಿಹಾಸಿಕ ಹೋರಾಟವಾಗಿಸಿದ ರಾಜ್ಯದ ಸಮಸ್ತ ಪಂಚಮಸಾಲಿ ಸಮಾಜಕ್ಕೆ ಕೃತಜ್ಞತೆ ಅರ್ಪಿಸುವ ಕಾರಣಕ್ಕೆ ನೇರವಾಗಿ ಮಠಕ್ಕೆ ಹೋಗದೇ ನಿಮ್ಮ ಬಳಿ ಬಂದಿದ್ದೇನೆ. ಇನ್ನು ಹೋರಾಟ ತಾತ್ವಿಕ ಅಂತ್ಯ ಕಾಣಬೇಕಿದೆ. ನಿಮ್ಮ ಸಹಕಾರ ಸದಾಕಾಲ ಹೀಗೆ ಇರಲಿ ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ಹೋರಾಟದ ಸಂದರ್ಭದಲ್ಲಿ ಹಲವರು ಅದರಲ್ಲಿ ಸಮಾಜದವರೇ ಅಡ್ಡಿಪಡಿಸುತ್ತಿದ್ದರು. ಅದನ್ನೆಲ್ಲ ಮೆಟ್ಟಿನಿಂತು ನಮ್ಮ ಬೆಂಬಲಕ್ಕೆ ನಿಂತ ಸಮಾಜ ಬಾಂಧವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಹೋರಾಟ ಯಶಸ್ವಿಯಾಗುವವರೆಗೂ ನಾನು ವಿರಮಿಸುವುದಿಲ್ಲ ಎಂದು ಭರವಸೆ ನೀಡಿದರು. ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಪ್ರಮುಖರು ಮಾತನಾಡಿದರು. ಹರಿಹರ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಮುಖಂಡರಾದ ಕಳಕನಗೌಡ ಪಾಟೀಲ್‌, ನಾಗರಾಳ, ಬಸಲಿಂಗಪ್ಪ ಭೂತೆ, ಪಂಚಮಸಾಲಿ ಸಮಾಜದ ಕಾರಟಗಿ ತಾಲೂಕಾಧ್ಯಕ್ಷ ಚನ್ನಬಸಪ್ಪ ಸುಂಕದ, ಸಣ್ಣ ಸೂಗಪ್ಪ, ಗುಂಡಪ್ಪ ಕುಳಗಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next