Advertisement

ನಮ್ಮ ರಕ್ತದೊತ್ತಡ ಅಳೆಯೋಣ ನಿಯಂತ್ರಿಸೋಣ ಮತ್ತು ದೀರ್ಘ‌ಕಾಲ ಬದುಕೋಣ

06:54 PM May 23, 2020 | Sriram |

ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾವನ್ನಪ್ಪುವ ವಯಸ್ಕರ ಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಂದಿಯ ಸಾವಿಗೆ ಕಾರಣ ರಕ್ತನಾಳ ಸಂಬಂಧಿ ಹೃದ್ರೋಗಗಳು (ಮುಖ್ಯವಾಗಿ ಮೆಯೊಕಾರ್ಡಿಯಲ್‌ ಇನ್‌ಫಾಕ್ಷìನ್ಸ್‌ ಮತ್ತು ಲಕ್ವಾ ). 40 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ತೀವ್ರ ಅಂಗ ಊನಕ್ಕೆ ಪ್ರಧಾನ ಕಾರಣವಾಗುತ್ತಿರುವುದು ಮೆಯೊಕಾರ್ಡಿಯಲ್‌ ಇನ್‌ಫಾಕ್ಷನ್ಸ್‌ ಮತ್ತು ಲಕ್ವಾಗಳೇ ಆಗಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳನ್ನು ತಡೆಗಟ್ಟಬಹುದಾಗಿರುತ್ತದೆ. ಮೆಯೊಕಾರ್ಡಿಯಲ್‌ ಇನ್‌ಫಾಕ್ಷನ್ಸ್‌ ಮತ್ತು ಲಕ್ವಾ ಉಂಟಾಗುವ ಅಪಾಯವನ್ನು ಹೆಚ್ಚಿಸುವ ಕಾರಣಗಳಲ್ಲಿ ಮುಖ್ಯವಾದುದು ಮತ್ತು ಹೆಚ್ಚಿರುವುದು ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡ ನಿರ್ವಹಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದ್ದರೂ ಇದೊಂದು ಗಂಭೀರ ಸಮಸ್ಯೆಯಾಗಿಯೇ ಏಕೆ ಉಳಿದಿದೆ ಎಂದರೆ, ಅಧಿಕ ರಕ್ತದೊತ್ತಡ ಹೊಂದಿರುವವರು ಅದರ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿರುವುದಿಲ್ಲ. ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಈ ಲೇಖನದಲ್ಲಿ ಅಧಿಕ ರಕ್ತದೊತ್ತಡದ ಬಗೆಗೆ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

Advertisement

ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎಂದರೇನು?
ಹೃದಯದಿಂದ ದೇಹದ ಇತರ ಅಂಗಾಂಗಗಳಿಗೆ ರಕ್ತವನ್ನು ಒಯ್ಯುವ ಮಹಾಪಧಮನಿಯ ಒಳಭಿತ್ತಿಯ ಮೇಲೆ ರಕ್ತವು ನಡೆಸುವ ಬಲಪ್ರಯೋಗವನ್ನು ರಕ್ತದೊತ್ತಡ ಎನ್ನಲಾಗುತ್ತದೆ.

ಅಧಿಕ ರಕ್ತದೊತ್ತಡವು ಎಷ್ಟು ಸಾಮಾನ್ಯವಾಗಿದೆ?
ಅನೇಕ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ಕಂಡುಬಂದಿರುವಂತೆ, ಪ್ರತೀ ನಾಲ್ವರಲ್ಲಿ ಒಬ್ಬರಿಗೆ (ಶೇ.25) ಅಧಿಕ ರಕ್ತದೊತ್ತಡವು ಕಾಣಿಸಿಕೊಳ್ಳುತ್ತದೆ. ವಯಸ್ಸಿನೊಂದಿಗೆ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಹಿರಿಯ ವಯಸ್ಸಿನವರಲ್ಲಿ (65 ವರ್ಷಕ್ಕಿಂತ ಮೇಲ್ಪಟ್ಟವರು) ಅರ್ಧಾಂಶ ಮಂದಿ ಅಧಿಕ ರಕ್ತದೊತ್ತಡ ಹೊಂದಿರುತ್ತಾರೆ.

ಸಿಸ್ಟೋಲಿಕ್‌ ಮತ್ತು ಡಯಾಸ್ಟೋಲಿಕ್‌ ರಕ್ತದೊತ್ತಡ ಎಂದರೇನು?
ರಕ್ತದೊತ್ತಡವನ್ನು ಎರಡು ಸಂಖ್ಯೆಗಳ ಮೂಲಕ ದಾಖಲಿಸಲಾಗುತ್ತದೆ – ಉದಾ.: 140/90. ಇಲ್ಲಿ ಅಧಿಕ ಮೌಲ್ಯದ ಸಂಖ್ಯೆ (140) “ಸಿಸ್ಟೋಲಿಕ್‌’ ಒತ್ತಡವಾಗಿದ್ದು, “ಗರಿಷ್ಠ’ ಒತ್ತಡ ಎಂದೂ ಗುರುತಿಸಲಾಗುತ್ತದೆ; ಕಡಿಮೆ ಮೌಲ್ಯದ ಸಂಖ್ಯೆ (90)ಯು “ಡಯಾಸ್ಟೋಲಿಕ್‌’ ಒತ್ತಡವಾಗಿದ್ದು, “ಕನಿಷ್ಠ’ ಎಂಬುದಾಗಿಯೂ ಗುರುತಿಸಲ್ಪಡುತ್ತದೆ. ರಕ್ತವನ್ನು ದೇಹದ ಅಂಗಾಂಗಗಳಿಗೆ ರವಾನಿಸುವುದಕ್ಕಾಗಿ ಹೃದಯವು ಸಂಕುಚನ ಹೊಂದಿದಾಗ ಉಂಟಾಗುವ ಒತ್ತಡವು “ಸಿಸ್ಟೋಲಿಕ್‌’ ಒತ್ತಡ. ರಕ್ತವು ಮತ್ತೆ ತುಂಬಿಕೊಳ್ಳುವುದಕ್ಕಾಗಿ ಹೃದಯದ ಈ ಸಂಕುಚನವು ಸಡಿಲಿಕೆಯಾದಾಗ ಉಂಟಾಗುವ ಒತ್ತಡವು “ಡಯಾಸ್ಟೋಲಿಕ್‌’ ಒತ್ತಡ.

ಅಧಿಕ ರಕ್ತದೊತ್ತಡಕ್ಕೆ
ಕಾರಣಗಳೇನು?
ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಬಹುತೇಕ ಮಂದಿ (ಶೇ.95ರಷ್ಟು ) “ಪ್ರಾಥಮಿಕ’ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ಇದರರ್ಥವೆಂದರೆ, ಅಧಿಕ ರಕ್ತದೊತ್ತಡದ ಕಾರಣ ತಿಳಿದಿರುವುದಿಲ್ಲ. ಇದು ಮುಖ್ಯವಾಗಿ ಆನುವಂಶಿಕವಾಗಿ (ವಂಶವಾಹಿ ಸಂಬಂಧಿ) ರುತ್ತದೆಯಲ್ಲದೆ ಬೊಜ್ಜು, ದೀರ್ಘ‌ಕಾಲ ಅಧಿಕ ಉಪ್ಪಿನಂಶ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆ ಇತ್ಯಾದಿಗಳಿಗೆ ಸಂಬಂಧಿಸಿರುತ್ತದೆ. ಸಾಮಾನ್ಯವಾಗಿ ಇದು 30 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಯಾವುದೇ ವಯಸ್ಸಿನಲ್ಲಿ ಉಂಟಾಗುವ ಸಾಧ್ಯತೆಯಿರುತ್ತದೆ. ತಾಯ್ತಂದೆಯರಿಬ್ಬರೂ ಅಧಿಕ ರಕ್ತದೊತ್ತಡ ಹೊಂದಿದ್ದರೆ ಮಗ ಅಥವಾ ಮಗಳಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಜೀವನಪರ್ಯಂತ ಅಪಾಯ ಸೂಚ್ಯಂಕ ಶೇ.70ಕ್ಕಿಂತ ಹೆಚ್ಚು. ಹೆತ್ತವರಲ್ಲಿ ಯಾರಾದರೂ ಒಬ್ಬರಿಗೆ ಅಧಿಕ ರಕ್ತದೊತ್ತಡ ಇದ್ದರೆ ಈ ಅಪಾಯ ಸೂಚ್ಯಂಕ ಸುಮಾರು ಶೇ.30 ಆಗಿದ್ದರೆ ಸಹಜ ರಕ್ತದೊತ್ತಡ ಹೊಂದಿರುವವರ ಮಕ್ಕಳಲ್ಲಿ ಈ ಅಪಾಯ ಸೂಚ್ಯಂಕ ಸುಮಾರು ಶೇ.15. ಸುಮಾರು ಶೇ.5ರಷ್ಟು ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡವು ಇನ್ನೊಂದು ಕಾಯಿಲೆಯ ಪರಿಣಾಮವಾಗಿ ಉಂಟಾಗುತ್ತದೆ (ದ್ವಿತೀಯಕ ಅಧಿಕ ರಕ್ತದೊತ್ತಡ). ಈ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ಒದಗಿಸಿದರೆ ಅಧಿಕ ರಕ್ತದೊತ್ತಡವೂ ಗುಣವಾಗುತ್ತದೆ. ದ್ವಿತೀಯಕ ಅಧಿಕ ರಕ್ತದೊತ್ತಡದ ಬಹುಸಾಮಾನ್ಯ ಕಾರಣಗಳು ಎಂದರೆ ಮೂತ್ರಪಿಂಡ ಕಾಯಿಲೆಗಳು, ಸ್ಲಿàಪ್‌ ಏಪ್ನಿಯಾ ಸಿಂಡ್ರೋಮ್‌ ಮತ್ತು ರೀನಲ್‌ ಆರ್ಟರಿ ಸ್ಟಿನೋಸಿಸ್‌. ಇತರ ಅಪರೂಪದ ಕಾರಣಗಳೆಂದರೆ, ಪ್ರೈಮರಿ ಹೈಪರ್‌ ಆಲ್ಡೊಸ್ಟೀರೋನಿಸ್‌¾, ಫೀಕ್ರೊಮೊಸೈಟೊಮಾ, ಕಶಿಂಗ್‌ ಸಿಂಡ್ರೋಮ್‌, ಅಭಿದಮನಿಯ ಕೊಆರ್ಕ್‌ಟೇಶನ್‌ ಇತ್ಯಾದಿ.

Advertisement

ಅಧಿಕ ರಕ್ತದೊತ್ತಡದ ಅಪಾಯಗಳು
ಅಧಿಕ ರಕ್ತದೊತ್ತಡವು ಹೃದ್ರೋಗಗಳು ಮತ್ತು ಲಕ್ವಾದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹೃದಯಾಘಾತ, ಹಠಾತ್‌ ಸಾವು, ಮೂತ್ರಪಿಂಡ ಹಾನಿ, ಕಾಲುಗಳಲ್ಲಿರುವ ಅಪಧಮನಿಗಳಲ್ಲಿ ರಕ್ತದ ಹರಿವಿಗೆ ಅಡಚಣೆ ಇತ್ಯಾದಿ ಸಮಸ್ಯೆಗಳನ್ನೂ ಅಧಿಕ ರಕ್ತದೊತ್ತಡವು ವೃದ್ಧಿಸುತ್ತದೆ. ಸಿಸ್ಟೋಲಿಕ್‌ ಒತ್ತಡದಲ್ಲಿ ಪ್ರತೀ 20 ಎಂಎಂಎಚ್‌ಜಿ ಹೆಚ್ಚಳ ಅಥವಾ ಡಯಾಸ್ಟೋಲಿಕ್‌ ಒತ್ತಡದಲ್ಲಿ ಪ್ರತೀ 10 ಎಂಎಂಎಚ್‌ಜಿ ಹೆಚ್ಚಳದೊಂದಿಗೆ ಲಕ್ವಾ ಅಥವಾ ಹೃದಯಾಘಾತದಿಂದ ಸಾವಿನ ಪ್ರಮಾಣ ದುಪ್ಪಟ್ಟಾಗುತ್ತದೆ.

ರಕ್ತದೊತ್ತಡವನ್ನು ಯಾವಾಗ
ಪರೀಕ್ಷಿಸಿಕೊಳ್ಳಬೇಕು?
ಆರೋಗ್ಯವಂತರು ಮತ್ತು ಅಧಿಕ ರಕ್ತದೊತ್ತಡ ಹೊಂದಿದವರು- ಎರಡೂ ವರ್ಗದವರಲ್ಲಿ ರಕ್ತದೊತ್ತಡವು ಸದಾ ಏರುಪೇರು ಆಗುತ್ತಿರುತ್ತದೆ. ಆದ್ದರಿಂದ ರಕ್ತದೊತ್ತಡದ ಬಗ್ಗೆ ನಿಖರವಾದ ನಿರ್ಧಾರಕ್ಕೆ ಬರಲು ಸಾಮಾನ್ಯವಾಗಿ ಅನೇಕ ಮಾಪನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾಪನಗಳನ್ನು ವ್ಯಕ್ತಿಯು ವಿಶ್ರಾಂತವಾಗಿದ್ದಾಗ ನಡೆಸಬೇಕು. ವ್ಯಕ್ತಿಯು ಹೆದರಿದ್ದಾಗ, ಗಲಿಬಿಲಿಗೊಂಡಿದ್ದಾಗ, ಆತಂಕಗೊಂಡಿದ್ದಾಗ ಅಥವಾ ವ್ಯಾಯಾಮ ಮಾಡುತ್ತಿದ್ದರೆ (ಉದಾ.: ಓಡುವುದು, ತೂಕ ಎತ್ತುವುದು ಇತ್ಯಾದಿ) ರಕ್ತದೊತ್ತಡವು ತೀರಾ ಹೆಚ್ಚಿರುತ್ತದೆ. ಆದರೆ ಇದು “ನಿಜವಾದ’ ರಕ್ತದ ಒತ್ತಡವಲ್ಲ. ಈ ಅಧಿಕ ರಕ್ತದೊತ್ತಡಕ್ಕೆ ಯಾವುದೇ ರೀತಿಯ ಚಿಕಿತ್ಸೆ ಬೇಕಿಲ್ಲ; ಸ್ವಲ್ಪ ಸಮಯದ ಬಳಿಕ ಅದು ತಾನಾಗಿ ಸಹಜ ಸ್ಥಿತಿಗೆ ಮರಳುತ್ತದೆ.

24 ತಾಸುಗಳ ರಕ್ತದೊತ್ತಡ
ನಿಗಾ ಅಂದರೇನು?
ಸಮಗ್ರ 24 ತಾಸುಗಳ ಅವಧಿಯಲ್ಲಿ ವ್ಯಕ್ತಿಯ ರಕ್ತದೊತ್ತಡವನ್ನು ಪ್ರತೀ 15-30 ನಿಮಿಷಗಳಿಗೆ ಒಮ್ಮೆ ಅಳೆದು ದಾಖಲಿಸುವ ಪುಟ್ಟ ಎಲೆಕ್ಟ್ರಾನಿಕ್‌ ಸಾಧನವನ್ನು ಉಪಯೋಗಿಸಿ 24 ತಾಸುಗಳ ರಕ್ತದೊತ್ತಡ ನಿಗಾ ವಹಿಸಲಾಗುತ್ತದೆ. ಈ ಉಪಕರಣದಲ್ಲಿ ಒಂದು ಪಟ್ಟಿ ಇದ್ದು, ಇದನ್ನು ವ್ಯಕ್ತಿಯ ತೋಳಿನ ಸುತ್ತ ಸುತ್ತಲಾಗುತ್ತದೆ. ಉಪಕರಣ ಈ ಪಟ್ಟಿಗೆ ಸಂಪರ್ಕ ಹೊಂದಿದ್ದು, ಇದನ್ನು ಬೆಲ್ಟ್ ನಲ್ಲಿ  ಇರಿಸಲಾಗುತ್ತದೆ ಅಥವಾ ಭುಜಕ್ಕೆ ನೇತು ಹಾಕಲಾಗುತ್ತದೆ.

ಅಧಿಕ ರಕ್ತದೊತ್ತಡದ
ಚಿಹ್ನೆಗಳೇನು?
ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಅನುಭವಕ್ಕೆ ಬರುವುದಿಲ್ಲ ಮತ್ತು ಯಾವುದೇ ರೀತಿಯ ಅನನುಕೂಲತೆ/ ಕಿರಿಕಿರಿಗಳನ್ನು ಉಂಟು ಮಾಡುವುದಿಲ್ಲ. ಯಾವುದೇ ರೀತಿಯ ಅನನುಕೂಲ ಉಂಟಾದರೂ ಅದು ಅಧಿಕ ರಕ್ತದೊತ್ತಡದಿಂದಾಗಿರುವ ಸಂಕೀರ್ಣತೆಗಳಿಂದ ಆಗುತ್ತದೆ; ಅದೂ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಎಷ್ಟೋ ವರ್ಷಗಳ ಬಳಿಕ. ತಲೆನೋವು, ತಲೆ ಸುತ್ತುವಿಕೆ, ಕಿವಿ ಮೊರೆತ, ಮುಖ ಬಿಳಿಚಿಕೊಳ್ಳುವುದು ಇತ್ಯಾದಿಗಳನ್ನು ರೋಗಿಗಳು ಅನುಭವಿಸಬಹುದು. ಅಪರೂಪವಾಗಿ ಅಧಿಕ ರಕ್ತದೊತ್ತಡವು ಮೂಗಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಈ ತಂತ್ರವನ್ನು ಅನುಸರಿಸುವುದು ಮೂಲಕ ವೈದ್ಯರ ಕ್ಲಿನಿಕ್‌ನ ಪರಿಸರವು ವ್ಯಕ್ತಿಯ ಮೇಲೆ ಉಂಟು ಮಾಡಬಹುದಾದ ಒತ್ತಡ ಸಹಿತ ಯಾವುದೇ ವಿಧವಾದ ಒತ್ತಡ, ಅಂಜಿಕೆಗಳು ಪರಿಣಾಮ ಬೀರದಂತಹ ಹಲವು ರಕ್ತದೊತ್ತಡ ಮಾಪನ ಅಂಕಿ ಅಂಶಗಳನ್ನು ಕಲೆ ಹಾಕಲು ಸಾಧ್ಯವಾಗುತ್ತದೆ. ಆ ಮೂಲಕ ಕೆಲಸದ ದಿನ, ಕೆಲಸದ ಸ್ಥಳ, ಮನೆ ಮತ್ತು ನಿದ್ದೆಯ ಸಂದರ್ಭ- ಹೀಗೆ ಹಲವು ಸಹಜ ಸನ್ನಿವೇಶಗಳನ್ನು ಒಳಗೊಂಡ ವ್ಯಕ್ತಿಯ ರಕ್ತದೊತ್ತಡದ ಸಂಪೂರ್ಣ ವಿವರವನ್ನು ಪಡೆಯಲು ಸಾಧ್ಯವಾಗುತ್ತದೆ.

ರಕ್ತದೊತ್ತಡದ ಸಹಜ ಮೌಲ್ಯಗಳು ಯಾವುವು?
ಇತ್ತೀಚೆಗಿನ ಜೆಎನ್‌ಸಿ-8 ಮಾರ್ಗದರ್ಶಿ ಸೂತ್ರಗಳ ಪ್ರಕಾರ ≥140 ಎಂಎಂಎಚ್‌ಜಿ ಸಿಸ್ಟಾಲಿಕ್‌ ಪ್ರಮಾಣ ಮತ್ತು ≥90 ಎಂಎಂಎಚ್‌ಜಿ ಡಯಾಸ್ಟಾಲಿಕ್‌ ಪ್ರಮಾಣವನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ.

ಅಧಿಕ ರಕ್ತದೊತ್ತಡ ಪತ್ತೆ ಹಚ್ಚುವುದು ಹೇಗೆ?
ವೈದ್ಯರು ತಮ್ಮ ಕ್ಲಿನಿಕ್‌ನಲ್ಲಿ ನಡೆಸಿದ ಮಾಪನಗಳ ಆಧಾರದಲ್ಲಿ ಅಧಿಕ ರಕ್ತದೊತ್ತಡವನ್ನು ಪತ್ತೆ ಹಚ್ಚುತ್ತಾರೆ. ಸಾಮಾನ್ಯವಾಗಿ ವೈದ್ಯರ ಜತೆಗಿನ 2-3 ಬಾರಿಯ ಭೇಟಿ ಸಂದರ್ಭದಲ್ಲಿ ಪುನರಾವರ್ತಿತ ಮಾಪನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಧಿಕ ರಕ್ತದೊತ್ತಡದ ಪತ್ತೆಗೆ ಸಾಮಾನ್ಯವಾಗಿ ಒಂದೇ ಬಾರಿಯ ಮಾಪನ ಸಾಕಾಗುವುದಿಲ್ಲ.

ಅಧಿಕ ರಕ್ತದೊತ್ತಡವನ್ನು ಗುಣಪಡಿಸಬಹುದೇ?
ಅಧಿಕ ರಕ್ತದೊತ್ತಡವನ್ನು ಗುಣಪಡಿಸಲಾಗದು ಎಂಬುದು ವಾಸ್ತವ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಯನ್ನು ಗುಣಪಡಿಸಲಾಗದು. ಆದರೆ, ಅಧಿಕ ರಕ್ತದೊತ್ತಡ ತಡೆ (ರಕ್ತದೊತ್ತಡ ಕಡಿಮೆಗೊಳಿಸುವ) ಔಷಧಗಳ ನಿರಂತರ ಮತ್ತು ನಿಯಮಿತ ಬಳಕೆ, ದೇಹತೂಕವನ್ನು ಇಳಿಸಿಕೊಳ್ಳುವುದು ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವಂತಹ ಔಷಧೇತರ ವಿಧಾನಗಳ ಮೂಲಕ ರಕ್ತದೊತ್ತಡವನ್ನು ಸಹಜ ಮಟ್ಟಕ್ಕೆ ಇಳಿಸಿಕೊಳ್ಳುವುದು ಸಾಧ್ಯ.

ಚಿಕಿತ್ಸೆಯ ಮೂಲಕ ಅಧಿಕ ರಕ್ತದೊತ್ತಡವನ್ನು
ಯಾವ ಮಟ್ಟಕ್ಕೆ ಇಳಿಸಿಕೊಳ್ಳಬೇಕು?
ಎಲ್ಲ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡ ಇಳಿಕೆಯ ಗುರಿ 140/90 ಎಂಎಂಎಚ್‌ಜಿ ಆಗಿರಬೇಕು. 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರಲ್ಲಿ ರಕ್ತದೊತ್ತಡ ಇಳಿಕೆಯ ಗುರಿ 150/90 ಎಂಎಂಎಚ್‌ಜಿ ಆಗಿರುತ್ತದೆ. ಮಧುಮೇಹಿಗಳು ಅಥವಾ ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ತೊಂದರೆ ಹೊಂದಿರುವ ರೋಗಿಗಳಲ್ಲಿ ಈ ಗುರಿಯು ಇನ್ನಷ್ಟು ಕಡಿಮೆ (130/80 ಎಂಎಂಎಚ್‌ಜಿ ಆಗಿರುತ್ತದೆ.

ಚಿಕಿತ್ಸೆ ಇಲ್ಲದೆಯೇ ರಕ್ತದೊತ್ತಡವನ್ನು ಇಳಿಸಿಕೊಳ್ಳುವುದು ಹೇಗೆ?

ಔಷಧಗಳ ಹೊರತಾಗಿ ಅನೇಕ ಚಿಕಿತ್ಸಾ ವಿಧಾನಗಳಿಂದ ಸ್ವಲ್ಪ ಮಟ್ಟಿಗೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ರಕ್ತದೊತ್ತಡ ಇಳಿಸುವ ಔಷಧಗಳನ್ನು ಉಪಯೋಗಿಸುತ್ತಿದ್ದರೂ ಎಲ್ಲ ಬಗೆಯ ಅಧಿಕ ರಕ್ತದೊತ್ತಡ ರೋಗಿಗಳಿಗೂ ಈ ಚಿಕಿತ್ಸಾ ವಿಧಾನಗಳು ಪ್ರಯೋಜನಕಾರಿಯಾಗಿವೆ. ಇವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
– ಬೊಜ್ಜು ಹೊಂದಿರುವ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ದೇಹತೂಕವನ್ನು ಇಳಿಸಿಕೊಳ್ಳುವುದು ಔಷಧಗಳ ಹೊರತಾಗಿ ರಕ್ತದೊತ್ತಡ ಇಳಿಸಿಕೊಳ್ಳಲು ಇರುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ತುಲನಾತ್ಮಕವಾಗಿ ಅತಿ ಕನಿಷ್ಠ (ಉದಾ.: 5 ಕೆಜಿ) ದಷ್ಟು ದೇಹತೂಕ ಇಳಿಕೆಯೂ ಅಧಿಕ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಹೃದಯಾಘಾತ ಮತ್ತು ಲಕ್ವಾದಂತಹ ಕಾಯಿಲೆಗಳಿಗೆ ಸಂಬಂಧ ಹೊಂದಿರುವ ಅಪಾಯಾಂಶಗಳನ್ನು (ಉದಾ.: ಕೊಲೆಸ್ಟರಾಲ್‌ ಮತ್ತು ಸಕ್ಕರೆಯ ಮಟ್ಟಗಳು) ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
– ತರಕಾರಿಗಳು, ಹಣ್ಣುಹಂಪಲು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹೈನು ಉತ್ಪನ್ನಗಳು (ಡಿಎಎಸ್‌ಎಚ್‌- ಡ್ಯಾಶ್‌ ಡಯಟ್‌ ಎಂದು ಕರೆಯಲಾಗುತ್ತದೆ) ಇರುವ ಆಹಾರಾಭ್ಯಾಸ ಅಧಿಕ ರಕ್ತದೊತ್ತಡವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ.
– ಮದ್ಯಪಾನಕ್ಕೆ ಮಿತಿ ಹಾಕಿಕೊಳ್ಳುವುದು ಮತ್ತು ಧೂಮಪಾನದಿಂದ ದೂರ ಇರುವುದು ಈ ಚಟಗಳನ್ನು ಹೊಂದಿರುವ ರೋಗಿಗಳಲ್ಲಿ ರಕ್ತದೊತ್ತಡ ಇಳಿಸುವುದಕ್ಕೆ ಸಹಾಯ ಮಾಡುತ್ತದೆ.
– ವ್ಯಾಯಾಮ (ವಾರದ ಬಹುತೇಕ ದಿನಗಳಲ್ಲಿ ಅರ್ಧ ತಾಸು ಕಾಲ ಬಿರುಸಾದ ನಡಿಗೆ ಅಥವಾ ಸೈಕಲ್‌ ಸವಾರಿ) ವೂ ಕೂಡ ಅಧಿಕ ರಕ್ತದೊತ್ತಡ ಇಳಿಸಿಕೊಳ್ಳಲು ನೆರವಾಗಬಲ್ಲುವುದು.

ಅಧಿಕ ರಕ್ತದೊತ್ತಡ ತಡೆ ಔಷಧಗಳ ಉಪಯೋಗ ಹೇಗೆ?
ಅಧಿಕ ರಕ್ತದೊತ್ತಡ ತಡೆ ಔಷಧ ಚಿಕಿತ್ಸೆಯ ಕಾರ್ಯತಂತ್ರವನ್ನು ಆಯಾ ರೋಗಿಗೆ ನಿರ್ದಿಷ್ಟವಾಗಿ ವೈದ್ಯರು ಯೋಜಿಸುತ್ತಾರೆ. ರೋಗಿ ಹೊಂದಿರುವ ಸಹ ಕಾಯಿಲೆಗಳು (ರಕ್ತನಾಳ ಸಂಬಂಧಿ ಹೃದ್ರೋಗಗಳು, ಮೂತ್ರಜನಕಾಂಗ ರೋಗಗಳು, ಮಧುಮೇಹ, ಅಸ್ತಮಾ), ಹಿಂದೆ ಉಪಯೋಗಿಸುತ್ತಿದ್ದ ಔಷಧಗಳು ಹಾಗೂ ಇತರ ಅಂಶಗಳಾದ ವಯಸ್ಸು, ಲಿಂಗ, ಜೀವನಶೈಲಿ ಇತ್ಯಾದಿಗಳನ್ನು ಆಧರಿಸಿ ಲಭ್ಯವಿರುವ ಅತ್ಯುತ್ತಮ ಔಷಧಗಳನ್ನು ಆಯ್ದುಕೊಳ್ಳಲಾಗುತ್ತದೆ. ಇದನ್ನು ಇನ್ನಷ್ಟು ವಿವರಿಸಿ ಹೇಳಬೇಕೆಂದರೆ, ಆಯಾ ರೋಗಿಯ ಆವಶ್ಯಕತೆಗಳಿಗೆ ಅನುಸಾರವಾಗಿ ಔಷಧ ಯೋಜನೆಯನ್ನು ಹೆಣೆಯಲಾಗುತ್ತದೆ. ಸ್ಥೂಲವಾಗಿ ಹೇಳುವುದಾದರೆ, ಅಧಿಕ ರಕ್ತದೊತ್ತಡ ತಡೆ ಔಷಧ ಸೇವನೆಯು ಜೀವನಪರ್ಯಂತ ಇರುತ್ತದೆ. ಯಾವುದೇ ಕಾರಣಗಳಿಂದ ಔಷಧ ಸೇವನೆ ನಿಂತುಹೋದರೆ ಅಧಿಕ ರಕ್ತದೊತ್ತಡವು ಮರಳಿ ಕಾಣಿಸಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ ತಡೆ ಔಷಧದ ಗರಿಷ್ಠ ಪರಿಣಾಮವು ಅನುಭವಕ್ಕೆ ಬರಬೇಕಾದರೆ ಅದನ್ನು ಸತತವಾಗಿ 3ರಿಂದ 4 ವಾರಗಳ ಕಾಲ ಉಪಯೋಗಿಸಬೇಕಾಗುತ್ತದೆ. ಆದ್ದರಿಂದ ಒಂದು ವಾರದ ಚಿಕಿತ್ಸೆಯ ಆಧಾರದಲ್ಲಿ ಔಷಧವೊಂದರ ಪರಿಣಾಮಕಾರಿತ್ವವನ್ನು ನಿರ್ಧರಿಸಲಾಗದು. ಆದ್ದರಿಂದಲೇ ವೈದ್ಯರು ಔಷಧದ ಡೊಸೇಜ್‌ ಹೆಚ್ಚಿಸಲು ಅಥವಾ ಇನ್ನೊಂದು ಔಷಧವನ್ನು ಉಪಯೋಗಿಸುವ ತರಾತುರಿಯ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ.

ಅಧಿಕ ರಕ್ತದೊತ್ತಡ ತಡೆ ಔಷಧವನ್ನು ದಿನ ಬಿಟ್ಟು ದಿನ ಅಥವಾ ವಾರದಲ್ಲಿ 2-3 ಬಾರಿ ತೆಗೆದುಕೊಳ್ಳುವುದು ಸರಿಯೇ? ಅಲ್ಲ. ಬಹುತೇಕ ಅಧಿಕ ರಕ್ತದೊತ್ತಡ ತಡೆ ಔಷಧಗಳ ಪರಿಣಾಮವು 24 ತಾಸುಗಳಿಗಿಂತ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳುತ್ತದೆ.

ರಕ್ತದೊತ್ತಡವು ಹೆಚ್ಚಿದರೆ ಹೆಚ್ಚುವರಿ ಅಧಿಕ
ರಕ್ತದೊತ್ತಡ ತಡೆ ಔಷಧ ಮಾತ್ರೆ ಸೇವಿಸಬಹುದೇ?
ಇಲ್ಲ. ರಕ್ತದೊತ್ತಡವು ಹೆಚ್ಚು ತೋರಿಬಂದಾಗ ಹೆಚ್ಚುವರಿ ಮಾತ್ರೆ ಸೇವಿಸುವುದು ಅಥವಾ ನೀವಾಗಿ ಡೊಸೇಜ್‌ ಹೆಚ್ಚಿಸಿಕೊಳ್ಳುವುದು ತಪ್ಪು ಮತ್ತು ಇಂಥ ದುಸ್ಸಾಹಸಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು. ಔಷಧ ವಿಚಾರವಾಗಿ ಯಾವುದೇ ಸಂಶಯ, ಮಾಹಿತಿ, ಪ್ರಶ್ನೆಗಳಿದ್ದರೂ ನಿಮ್ಮ ವೈದ್ಯರ ಜತೆಗೆ ಸಮಾಲೋಚನೆ ನಡೆಸಿಯೇ ಮುಂದುವರಿಯಬೇಕು.

ಅಧಿಕ ರಕ್ತದೊತ್ತಡವುಳ್ಳ ವ್ಯಕ್ತಿಯು ಎಷ್ಟು ಬಾರಿ
ವೈದ್ಯರನ್ನು ಭೇಟಿ ಮಾಡಬೇಕು?
ಆರಂಭದಲ್ಲಿ ಪ್ರತೀ ಕೆಲವು ವಾರಗಳಿಗೆ ಒಮ್ಮೆ ವೈದ್ಯರನ್ನು ಸಂದರ್ಶಿಸಬೇಕು. ತಮ್ಮ ರಕ್ತದೊತ್ತಡವನ್ನು ಚೆನ್ನಾಗಿ ನಿಯಂತ್ರಣದಲ್ಲಿ ಇರಿಸಿಕೊಂಡವರು ಪ್ರತೀ ಆರು ತಿಂಗಳಿಗೆ ಒಮ್ಮೆ ವೈದ್ಯರನ್ನು ಭೇಟಿ ಮಾಡಬೇಕು. ಇತರ ತೊಂದರೆಗಳನ್ನು ಎದುರಿಸುವವರು (ಅಧಿಕ ಕೊಲೆಸ್ಟರಾಲ್‌, ಮಧುಮೇಹ, ಮೂತ್ರಜನಕಾಂಗ ಕಾಯಿಲೆಗಳು, ಹೃದ್ರೋಗ ಅಥವಾ ಲಕ್ವಾದಂತಹ ತೊಂದರೆಗಳು) ಪ್ರತೀ 2 ಅಥವಾ 3 ತಿಂಗಳಿಗೆ ಒಮ್ಮೆ ವೈದ್ಯರಲ್ಲಿಗೆ ಭೇಟಿ ನೀಡಬೇಕು.

-ಡಾ| ರಾಘವೇಂದ್ರ ರಾವ್‌,
ಅಸೋಸಿಯೇಟ್‌ ಪ್ರೊಫೆಸರ್‌
ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next