ನಾನಾ ತೊಂದರೆಗಳ ಹೊರತಾಗಿಯೂ ಯುದ್ಧಗ್ರಸ್ಥ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಆಪರೇಷನ್ ಗಂಗಾ ಹೆಸರಲ್ಲಿ ಕೇಂದ್ರವೇ ಅಲ್ಲಿಂದ ಭಾರತೀಯರು ಮತ್ತು ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡುತ್ತಿದೆ. ಉಕ್ರೇನ್ ಜತೆ ಗಡಿ ಹಂಚಿಕೊಂಡಿರುವ ಪೋಲೆಂಡ್, ರೋಮೆನಿಯಾ, ಹಂಗೇರಿಗಳಿಗೆೆ ಬರುವಂತೆ ಹೇಳಿರುವ ಸರಕಾರ ಅಲ್ಲಿಂದ ಏರ್‌ಲಿಫ್ಟ್ ಮಾಡುತ್ತಿದೆ.
ಉಕ್ರೇನ್‌ಗೆ ಉದ್ಯೋಗಕ್ಕಾಗಿ ತೆರಳಿರುವವರಿಗಿಂತ ವೈದ್ಯಕೀಯ ಶಿಕ್ಷಣ ಕಲಿಯುವ ಸಲುವಾಗಿ ಹೋಗಿರುವರೇ ಹೆಚ್ಚಿದ್ದಾರೆ. ಸದ್ಯ ಅಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ವಾಪಸ್ ಯಾವಾಗ ಅಲ್ಲಿಗೆ ಹೋಗುತ್ತೇವೆ ಎಂಬ ಬಗ್ಗೆ ಅರಿವಿಲ್ಲ. ಅಲ್ಲದೆ ಈಗಾಗಲೇ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಧಾನ ಮಾತುಕತೆ ಶುರುವಾಗಿದ್ದರೂ ಈ ಪ್ರಕ್ರಿಯೆಗಳು ಮುಗಿದು, ಎಲ್ಲ ಸರಿಹೋಗಲು ಕನಿಷ್ಠ 6 ತಿಂಗಳಾದರೂ ಬೇಕು. ಅಲ್ಲದೆ ಖಾರ್ಕಿವ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈ ನಗರವೇ ರಷ್ಯಾ ಪಡೆಗಳ ದಾಳಿಗೆ ಹೆಚ್ಚು ತುತ್ತಾಗಿದೆ. ಹೀಗಾಗಿ ವಾಪಸ್ ಹೋಗುವುದು ಯಾವಾಗ ಎಂಬ ಸ್ಪಷ್ಟ ಕಲ್ಪನೆ ಇಲ್ಲ ಎಂದೇ ಹೇಳಬಹುದು.
ಸದ್ಯ ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳನ್ನು ಅವರವರ ಮನೆಗಳಿಗೆ ತಲುಪಿಸುವ ಕೆಲಸ ಆದ್ಯತೆ ಮೇರೆಗೆ ಆಗಬೇಕು. ಜತೆಗೆ ಈ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯದ ಬಗ್ಗೆ ಅವರ ಪೋಷಕರು ಚಿಂತಿತ ರಾಗಿದ್ದಾರೆ. ಉಕ್ರೇನ್‌ನಂಥ ಸಣ್ಣ ರಾಷ್ಟ್ರಗಳಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಶಿಕ್ಷಣ ದೊರಕುತ್ತದೆ ಎಂಬ ಕಾರಣಕ್ಕೆ ಅನಿವಾರ್ಯವೆಂಬಂತೆ ಅಲ್ಲಿನ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.
ಇಲ್ಲಿ ಎರಡು ಪ್ರಮುಖ ಆಯಾಮಗಳಿದ್ದು, ಮೊದಲನೆಯದಾಗಿ ಈಗ ಮರಳಿ ಬಂದಿರುವ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಪೂರಕ ಅವಕಾಶ ಕಲ್ಪಿಸುವುದು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಭಾರತೀಯ ವಿದ್ಯಾರ್ಥಿಗಳ ಹಿತರಕ್ಷಣೆಗೆ ಸೂಕ್ತ ಮಾರ್ಗೋಪಾಯವನ್ನು ರೂಪಿಸಬೇಕಾಗಿದೆ. ಇನ್ನೊಂದು ಪ್ರಮುಖ ಆಯಾಮವೆಂದರೆ, ಕಡಿಮೆ ವೆಚ್ಚದ ಶಿಕ್ಷಣದ ಉದ್ದೇಶದಿಂದ ವಿದೇಶದ ಮೊರೆ ಹೋಗುವುದನ್ನು ತಪ್ಪಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಮಧ್ಯಮ ವರ್ಗ ನಮ್ಮ ದೇಶದಲ್ಲಿಯೇ ಗುಣಮಟ್ಟದ ಶಿಕ್ಷಣ ಪಡೆಯುವಂಥ ವಾತಾವರಣವನ್ನು ಸೃಷ್ಟಿಸಬೇಕಿದೆ.
ಈ ವಿಚಾರದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ, ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಇವರ ಕಲಿಕೆ ಅರ್ಧಕ್ಕೆ ನಿಲ್ಲದಂತೆ ನೋಡಿಕೊಳ್ಳುತ್ತೇವೆ ಎಂದಿರುವುದು ಶುಭಸೂಚಕ.
ಉಕ್ರೇನ್‌ನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಯಾವುದೇ ಪದವಿಯನ್ನು ಕಲಿತ ವಿದ್ಯಾರ್ಥಿಗಳಿಗೆ ಇಲ್ಲಿ ವ್ಯವಸ್ಥೆ ಮಾಡುವುದು ಸುಲಭವಾಗಬಹುದು. ಆದರೆ ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವವರಿಗೆ ಇಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕೆಂಬ ಬಗ್ಗೆ ಪ್ರಧಾನಿ ಮೋದಿ ಜತೆ ಸಿಎಂ ಬೊಮ್ಮಾಯಿ ಮಾತನಾಡಲಿದ್ದಾರೆ ಎಂದಿದ್ದಾರೆ.
ತುರ್ತು ಅಗತ್ಯ ಬಿದ್ದಲ್ಲಿ ಆ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಶಿಕ್ಷಣ ಮುಂದುವರೆಸುವ ಅವಕಾಶ ಕಲ್ಪಿಸುವುದು ಅಥವಾ ಯುದ್ಧದ ಕಾರ್ಮೋಡ ಕರಗಿದ ಅನಂತರ ಮರಳಿ ಆ ದೇಶಕ್ಕೆ ತೆರಳಲು ಪೂರಕ ವಾತಾವರಣ ಕಲ್ಪಿಸುವುದು ಅಗತ್ಯವಾಗಿದೆ.