Advertisement
ನವದೆಹಲಿ:ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆಯ ನಡುವೆ ಕಾಳಗ ಮುಂದುವರಿದಿರುವಂತೆಯೇ ನವದೆಹಲಿಯಲ್ಲಿ ಮಹತ್ವದ ಐದನೇ ಆವೃತ್ತಿಯ ಅಮೆರಿಕ ಮತ್ತು ಭಾರತದ ರಕ್ಷಣೆ ಹಾಗೂ ವಿದೇಶಾಂಗ ಸಚಿವ ಸಭೆ ನಡೆದಿದೆ.
ದ್ವಿಪಕ್ಷೀಯ ಬಾಂಧವ್ಯ ದೃಢವಾಗಿ ಮುಂದುವರಿಯಬೇಕು. ಇಂಡೋ-ಫೆಸಿಫಿಕ್ ವಲಯದಲ್ಲಿ ಮುಕ್ತ ಮತ್ತು ಭೀತಿ ರಹಿತ ವಾತಾವರಣ ಸೃಷ್ಟಿಯಾಗಬೇಕು ಎಂದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಹಿಂದೂ ಮಹಾಸಾಗರ, ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಅವರ ಮಾತುಗಳು ಮಹತ್ವ ಪಡೆದಿದೆ.
ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಮೆರಿಕದ ಪರವಾಗಿ ರಕ್ಷಣಾ ಸಚಿವ ಲೊಲೊಯ್ಡ ಆ್ಯಸ್ಟಿನ್ ಮತ್ತು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಇದ್ದರು.
ಪ್ರಧಾನಿ ಮೋದಿ ಭೇಟಿ ಬಳಿಕ:
ಭಾರತದ ಪ್ರಧಾನಿ ಮೋದಿಯವರು ಜೂನ್‌ನಲ್ಲಿ ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಂಡು ಅಧ್ಯಕ್ಷ ಜೋ ಬೈಡೆನ್ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಎರಡು ದೇಶಗಳ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಇಂಡೋ-ಫೆಸಿಫಿಕ್ ವಲಯ, ದಕ್ಷಿಣ ಏಷ್ಯಾ, ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆಯ ನಡುವಿನ ಯುದ್ಧ, ಉಕ್ರೇನ್ ಹಾಗೂ ರಷ್ಯಾ ನಡುವಿನ ನಿಲ್ಲದ ಕಾಳಗ. ಅದರಿಂದಾಗಿ ಜಗತ್ತಿನ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪ್ರಧಾನವಾಗಿ ಚರ್ಚೆ ನಡೆಸಲಾಗಿದೆ ಎಂದು ಎರಡೂ ದೇಶಗಳು ಹೇಳಿಕೆಯಲ್ಲಿ ತಿಳಿಸಿವೆ. ಎರಡೂ ದೇಶಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಬಾಂಧವ್ಯಗಳು ವೃದ್ಧಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಭೆಯಲ್ಲಿ ತಿಳಿಸಿದ್ದಾರೆ.
ಜಂಟಿಯಾಗಿ ಶಸ್ತ್ರಾಸ್ತ್ರ ಸಾಗಣೆ ವಾಹನ ಉತ್ಪಾದನೆ
ಭಾರತ ಮತ್ತು ಅಮೆರಿಕ ಜಂಟಿಯಾಗಿ ಶಸ್ತ್ರಾಸ್ತ್ರ ಸಾಗಣೆ ವಾಹನ ಉತ್ಪಾದನೆ ಮಾಡಲಿವೆ ಎಂದು ಆ ದೇಶದ ರಕ್ಷಣಾ ಸಚಿವ ಲೊಲೊಯ್ಡ ಆ್ಯಸ್ಟಿನ್ ಘೋಷಿಸಿದ್ದಾರೆ. ಅಮೆರಿಕ ಮತ್ತು ಭಾರತ ನಡುವಿನ ರಕ್ಷಣೆ ಮತ್ತು ವಿದೇಶಾಂಗ ಸಚಿವರ “2+2′ ಮಾತುಕತೆ ನಡೆದ ಬಳಿಕ ಅಮೆರಿಕ ರಕ್ಷಣಾ ಸಚಿವ ಲೊಲೊಯ್ಡ ಆ್ಯಸ್ಟಿನ್ ಪತ್ರಕರ್ತರ ಜತೆಗೆ ಮಾತನಾಡಿದರು. ಇದಲ್ಲದೆ, ಎರಡೂ ದೇಶಗಳು ಉದ್ದೇಶಿದ ಎಂಕ್ಯೂ-9ಬಿ ಡ್ರೋನ್‌ಗಳನ್ನು ಜಂಟಿಯಾಗಿ ತಯಾರಿಸುವ ಬಗ್ಗೆ ನಂತರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಖಲಿಸ್ತಾನ ಚಿತಾವಣೆ ಬಗ್ಗೆ ಪ್ರಸ್ತಾಪ
2+2 ಮಾತುಕತೆ ವೇಳೆ ಕೆನಡಾದಲ್ಲಿ ಖಲಿಸ್ತಾನ ಉಗ್ರರು ಭಾರತದ ವಿರುದ್ಧ ನಡೆಸುತ್ತಿರುವ ಚಿತಾವಣೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾಟ್ರಾ ನವದೆಹಲಿಯಲ್ಲಿ ಹೇಳಿದ್ದಾರೆ. ಇದರ ಜತೆಗೆ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಇತರ ಭಾಗಗಳಲ್ಲಿ ಭಾರತದ ದೂತಾವಾಸದ ಮೇಲೆ ನಡೆಸಲಾಗಿರುವ ದಾಳಿಯನ್ನೂ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಯಿತು ಎಂದು ಕ್ವಾಟ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.