Advertisement

ವೈದ್ಯರ ಕೊರತೆ ನೀಗಲಿ, ವೈದ್ಯರ ಸೇವೆ ಉತ್ತಮವಾಗಿ ಸಿಗಲಿ

12:05 AM Dec 13, 2022 | Team Udayavani |

ರಾಜ್ಯದಲ್ಲಿ  ಆರೋಗ್ಯ ಸೌಲಭ್ಯದ ಕೊರತೆಯನ್ನು ನೀಗಿಸುವ ಸಂಬಂಧ ರಾಜ್ಯ ಸರಕಾರ, ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಮುಂದಾಗಿದ್ದು, ಬುಧವಾರ ಉದ್ಘಾಟನೆಯಾಗಲಿವೆ. ಬಹಳಷ್ಟು ದಿನಗಳ ಬಹುನಿರೀಕ್ಷಿತ ಯೋಜನೆಯೊಂದರ ಆರಂಭಕ್ಕೆ ಶುಭ ಮುಹೂರ್ತ ಸಿಕ್ಕಿದೆ.

Advertisement

ಸದ್ಯವೇ ರಾಜ್ಯ ಸರಕಾರ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಿದೆ. ಇದಕ್ಕೆ ಪೂರಕವಾಗಿ ಬುಧವಾರ 114 ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಜನವರಿ ಅಂತ್ಯಕ್ಕೆ ಉಳಿದ ಎಲ್ಲ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುವುದು ಸರಕಾರದ ಗುರಿಯಾಗಿದೆ. ಸರಕಾರದ ಮೂಲಗಳ ಪ್ರಕಾರವೇ ನಮ್ಮ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಒಬ್ಬ ನರ್ಸ್‌, ಒಬ್ಬ ಲ್ಯಾಬ್‌ ಟೆಕ್ನಿಶಿಯನ್‌ ಮತ್ತು ಒಬ್ಬರು ಗ್ರೂಪ್‌ ಡಿ ಸಿಬಂದಿ ಇರಲಿದ್ದಾರೆ. ಬೆಂಗಳೂರಿನ ಪ್ರತೀಯೊಂದು ವಾರ್ಡ್‌ಗಳು ಸೇರಿ ಒಟ್ಟಾರೆಯಾಗಿ 243 ನಮ್ಮ ಕ್ಲಿನಿಕ್‌ಗಳು ಇರಲಿದ್ದು, ಇವುಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಂತೆಯೇ ಕಾರ್ಯ ನಿರ್ವಹಿಸುತ್ತವೆ. ಆರೋಗ್ಯ ಸೇವೆ ನೀಡುವುದರ ಜತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ನಮ್ಮ ಕ್ಲಿನಿಕ್‌ಗಳ ಪ್ರಮುಖ ಆದ್ಯತೆಯಾಗಿದೆ. ಅಂದರೆ ಇತ್ತೀಚೆಗಷ್ಟೇ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಅವರು, ಸಕ್ಕರೆ ಕಾಯಿಲೆ ಕುರಿತಂತೆ ನಮ್ಮ ಕ್ಲಿನಿಕ್‌ಗಳಲ್ಲೇ ಅರಿವು ಮೂಡಿಸಲಾಗುತ್ತದೆ ಎಂದಿದ್ದರು.

1000-1200 ಚದರ ಅಡಿ ವಿಸ್ತೀರ್ಣದ ಸರಕಾರಿ ಕಟ್ಟಡಗಳಲ್ಲಿ ಈ ನಮ್ಮ ಕ್ಲಿನಿಕ್‌ಗಳು ತಲೆ ಎತ್ತಲಿವೆ. ಇವುಗಳಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಆಹಾರ ಪದ್ಧತಿಗಳ ಕುರಿತಂತೆಯೂ ಅರಿವು ನೀಡಲಾಗುತ್ತದೆ. ಹಾಗೆಯೇ ಒಟ್ಟಾರೆಯಾಗಿ 12 ಸೇವೆಗಳನ್ನು ನೀಡಲು ನಮ್ಮ ಕ್ಲಿನಿಕ್‌ ಸಿದ್ಧತೆ ನಡೆಸಿದೆ. ಅಂದರೆ ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕೆ, ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ರೆಫ‌ರಲ್‌ ಸೇವೆಗಳು ಇಲ್ಲಿ ಲಭ್ಯವಾಗಲಿವೆ.

ಒಟ್ಟಾರೆಯಾಗಿ ನೋಡುವುದಾದರೆ ಈ ಯೋಜನೆಯ ಉದ್ಧೇಶ ಅತ್ಯುತ್ತಮವಾಗಿದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು ಇಲ್ಲದೇ ಜನ ಪರಿಪಾಟಲು ಪಡುತ್ತಿದ್ದಾರೆ. ಇಂಥ ಕಡೆಗಳಲ್ಲಿ ಇವುಗಳು ಒಂದು ರೀತಿ ಸಂಜೀವಿನಿಗಳಾಗಲಿವೆ. ಆದರೆ ಈ ಉದ್ದೇಶಕ್ಕೆ ಯಾವುದೇ ಅಡ್ಡಿಯಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದಾಗಿದೆ.

ಅಂದರೆ ಇಂದಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಕೇಳಿಬರುತ್ತಿರುವ ಅತ್ಯಂತ ದೊಡ್ಡ ಸಮಸ್ಯೆಯೇ ವೈದ್ಯರ ಕೊರತೆ. ಅಂದರೆ ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಘಟಕಗಳಿಗೆ ಸರಿಯಾದ ಪ್ರಮಾಣದಲ್ಲಿ ವೈದ್ಯರು ಸಿಗುತ್ತಿಲ್ಲ. ಈಗ ಹೊಸದಾಗಿ 438 ನಮ್ಮ ಕ್ಲಿನಿಕ್‌ಗಳನ್ನು ತೆರೆಯುತ್ತಿರುವುದರಿಂದ ಇವುಗಳಿಗೆ ವೈದ್ಯರನ್ನು ಹೊಂದಿಸುವುದು ದೊಡ್ಡ ಸಾಹಸವೇ ಸರಿ. ಈ ನಿಟ್ಟಿನಲ್ಲಿ ಸರಕಾರ ಪರ್ಯಾಯವಾಗಿ ಯೋಜನೆ ಮಾಡಬೇಕಾಗುತ್ತದೆ. ಅಲ್ಲದೆ ವೇತನ ವಿಚಾರದಲ್ಲಿ ಪಟ್ಟು ಹಿಡಿಯದೇ, ವೈದ್ಯರೊಂದಿಗೆ ಚರ್ಚಿಸಿ ನೇಮಕಾತಿ ಮಾಡಿಕೊಳ್ಳಬೇಕು. ಆಗಷ್ಟೇ ಈ ಯೋಜನೆ ಸಫ‌ಲವಾಗಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.