ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಬಾಗಲಕೋಟೆ ನಗರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನವನಗರ ನಿರ್ಮಾಣಗೊಂಡಿದ್ದು, ನಿಯೋಜಿತ ಯೋಜನೆ ಪೂರ್ಣಗೊಳ್ಳುವರೆಗೂ ನವನಗರವನ್ನು ನಗರಸಭೆಗೆ ಹಸ್ತಾಂತರಿಸಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವನಗರ ಸಧ್ಯ ಬಿಟಿಡಿಎ ಅಧೀನದಲ್ಲಿದ್ದು, ಅದು ಅಲ್ಲಿಯೇ ಮುಂದುವರಿಯಬೇಕು. ಅಲ್ಲದೇ ಮುಳುಗಡೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 527 ಮೀಟರ್‌ವರೆಗೆ ಮುಳುಗಡೆ ಘೋಷಣೆಗೆ ಆಡಳಿತಾತ್ಮಕ ಅನುಮೋದನೆ ಕೊಡಲಾಗಿತ್ತು.
ಆದರೆ ಕಾಂಗ್ರೆಸ್ ಸರ್ಕಾರ ಅದನ್ನು 525 ಮೀಟರ್‌ಗೆ ಇಳಿಸಿದೆ. ಮುಂದೆ ನೀರಿನ ಪಕ್ಕದಲ್ಲೇ ಜನರು ವಾಸ ಮಾಡುವ ಪರಿಸ್ಥಿತಿ ಬರಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂದು ಟೀಕಿಸಿದರು.
ಯೋಜನೆ ಪೂರ್ಣ: ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುವ ಜತೆಗೆ ಈ ಭಾಗದ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ನೀಡುವುದಾಗಿ ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿ, ಕೃಷ್ಣೆಯ ಮೇಲೆ ಆಣೆ ಪ್ರಮಾಣ ಮಾಡಿದ್ದರು. ಆದರೆ ಈವರೆಗೆ ಯೋಜನೆಗಳು ಪೂರ್ಣಗೊಂಡಿಲ್ಲ.
ವಾರ್ಷಿಕ 10 ಸಾವಿರ ಕೋಟಿಯನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ, ಈ ಭಾಗದ ನೀರಾವರಿ ಯೋಜನೆಗಳನ್ನು ಬದ್ಧತೆ ಮೇಲೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು. ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ನಾರಾಯಣಸಾ ಬಾಂಡಗೆ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಮಮದಾಪುರ, ರಾಜು ರೇವಣಕರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ| ಮಾರುತೇಶ ಆರ್ (ಲವಳಸರ), ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜು ಮುದೇನೂರ ಮತ್ತಿತರರು ಹಾಜರಿದ್ದರು.