ಯಲಬುರ್ಗಾ: ನಶಿಸುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಗಮನ ಹರಿಸಬೇಕಿದೆ ಎಂದು ಜನಪದ ಹಾಸ್ಯ ಕಲಾವಿದ ಹಾಗೂ ಶಿಕ್ಷಕ ಜೀವನಸಾಬ್ ಬಿನ್ನಾಳ ಹೇಳಿದರು.
ಪಟ್ಟಣದ ಎಸ್.ಎ. ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಶನಿವಾರ ನಡೆದ ಜನಪದ ಕಲೆ ಮತ್ತು ನಾಟಕ ರಂಗಭೂಮಿ ಕಲೆ ಎಂಬ ವಿಷಯಗಳ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾನಪದ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಿಗುವಷ್ಟು ಜಾನಪದ ಕಲೆಗಳು ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲ. ಹೀಗಾಗಿ ನಶಿಸುತ್ತಿರುವ ಜಾನಪದ ಸಂಸ್ಕೃತಿಯನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಬೇರೆ ದೇಶಗಳಲ್ಲಿ ಜಾನಪದ ಕಲೆಗಳು ವಿರಳ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಜಾನಪದ, ಸಂಸ್ಕೃತಿಗಳು ಕಾಣಸಿಗುವುದಿಲ್ಲ. ಅಲ್ಲಿ ಏನಿದ್ದರೂ ಶ್ರೀಮಂತಿಕೆ ಕಾಣಬಹುದು. ವಿದ್ಯಾರ್ಥಿಗಳು ಜಾನಪದ ಕಲೆಗಳತ್ತ ಒಲವು ಬೆಳೆಸಿಕೊಂಡಾಗ ಮಾತ್ರ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕಲೆಗಳು, ನಾಟಕಗಳನ್ನು ಜನತೆ ಕಲಿತು ಅಭಿನಯಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ ನಿರ್ಲಕ್ಷÂಕ್ಕೊಳಗಾಗಿವೆ ಎಂದು ವಿಷಾದಿಸಿದರು.
ನಮ್ಮ ನಾಡಿನ ಜಾನಪದ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ, ಸಂಗೀತ, ಸಂಪ್ರದಾಯಗಳಿಗೆ ಸರ್ವಶ್ರೇಷ್ಠ ಸ್ಥಾನವಿದ್ದು, ಇಂದಿನ ಪಾಶ್ಚಾತ್ಯ, ಸಂಸ್ಕೃತಿಯ ಭರಾಟೆಯಲ್ಲೂ ತನ್ನ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ. ವಿದ್ಯಾರ್ಥಿಗಳು ಈ ಸುಂದರ ಜಾನಪದ ಕಲೆಗಳನ್ನು ಉಳಿಸಿ-ಬೆಳೆಸಬೇಕೆಂದು ಮನವಿ ಮಾಡಿದರು. ಗ್ರಾಮೀಣ ಸಂಸ್ಕೃತಿ, ಸೊಗಡು ರಂಜನಿಯವಲ್ಲ. ಬಾಂಧವ್ಯ ಬೆಸೆಯುವ ಪರಸ್ಪರ ಕೊಂಡಿಯಾಗಿದೆ. ಬೀಸುವ ಕುಟ್ಟುವ, ಹಂತಿಪದ, ಸುಗ್ಗಿಹಾಡು ಸೇರಿದಂತೆ ಗ್ರಾಮೀಣ ಪ್ರಕಾಶನದ ದೈನಂದಿನ ಜೀವನದ ಬದುಕು ಬಿಂಬಿಸುವ ಕಲೆಯಾಗಿದೆ ಎಂದು ಹೇಳಿದರು. ಚಿಂದೋಡಿ ಕೆಬಿಆರ್ ಡ್ರಾಮಾ ನಾಟಕ ಕಂಪನಿ ಮಾಲೀಕ ಶ್ರೀಕಂಠಯ್ಯ ಚಿಂದೋಡಿ ಮಾತನಾಡಿ, ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಕಲೆಯ ಮೂಲಕ ಪುರಾತನ ಇತಿಹಾಸದ ರಂಗಭೂಮಿ ಕಲೆ, ದೊಡ್ಡಾಟ, ಬಯಲಾಟ, ಕಲೆಗಳು, ನಿರ್ಲಕ್ಷ Âಕ್ಕೆ ಒಳಗಾಗುತ್ತಿವೆ. ಪ್ರಾಚಿನ ಕಲೆಯನ್ನು ಪ್ರದರ್ಶಿಸಿ ಉಳಿಸಿ, ಬೆಳೆಸಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಹಿರಿಯ ಸಾಹಿತಿ ಎ.ಎಂ. ಮದರಿ ಹಾಗೂ ಸಂಸ್ಥೆಯ ಅಧ್ಯಕ್ಷ ಎಸ್.ಎ. ನಿಂಗೋಜಿ ಸಭೆ ಅಧ್ಯಕ್ಷತೆ ಮಾತನಾಡಿದರು. ಬಿಇಡಿ ಕಾಲೇಜ ಪ್ರಾಚಾರ್ಯ ರವಿ ನಿಂಗೋಜಿ, ಗೋಪಾಲರಾವ್ ಬಿನ್ನಾಳ, ಗ್ರಾಪಂ ಸದಸ್ಯರಾದ ಮರ್ದಾನಸಾಬ್ ಮುಲ್ಲಾ, ರಾಜು ಉಳ್ಳಾಗಡ್ಡಿ, ಸೆಂಟ್ರಲ್ ಶಾಲೆ ಮುಖ್ಯಗುರು ಸೀಮಾ, ವೀರೇಶ ಹೊನ್ನೂರು, ಭೀಮಪ್ಪ ರ್ಯಾವಣಕಿ ಇತರರು ಇದ್ದರು.