ಮಹಾನಗರ: ಸ್ಮಾರ್ಟ್‌ಸಿಟಿ, ಜಲಸಿರಿ, ಗೈಲ್, ಪಾಲಿಕೆ ಸಹಿತ ವಿವಿಧ ಆಯಾಮದಿಂದ ನಗರದಲ್ಲಿ ಅಭಿವೃದ್ಧಿ ಕಾಮ ಗಾರಿಗಳು ನಡೆಯುತ್ತಿವೆ. ಆದರೆ ಮಳೆಗಾಲ ಹತ್ತಿರವಾಗುತ್ತಿರುವಂತೆ ಈ ಕಾಮಗಾರಿಗಳನ್ನು ತುರ್ತಾಗಿ ಮುಗಿಸುವ ಮಹತ್ತರ ಹೊಣೆಗಾರಿಕೆ ಪಾಲಿಕೆಗಿದೆ!
ಕೆಲವೊಂದು ಕಾಮಗಾರಿಗಳು ದೀರ್ಘ ಕಾಲದ ಯೋಜನೆ. ಇನ್ನೂ ಕೆಲವೊಂದು ವೇಗ ಪಡೆದುಕೊಂಡು ತುರ್ತಾಗಿ ಆಗಬೇಕಾದ ಅನಿವಾರ್ಯವಿದೆ. ಅಪೂರ್ಣ ಕಾಮಗಾರಿಗಳು ಪೂರ್ಣಗೊಂಡು ಮಳೆಗಾಲದಲ್ಲಿ ಉಂಟಾಗ ಬಹುದಾದ ಅಪಾಯ ತಡೆಯಬೇಕಿದೆ. ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ಕಡೆಗೆ ಸಾಗುವ ರಸ್ತೆಯಲ್ಲಿ ಅಂಡರ್ ಪಾಸ್ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಇನ್ನೂ ಸಾರ್ವಜನಿಕರಿಗೆ ಮುಕ್ತ ವಾಗಿಲ್ಲ. ಇಲ್ಲೇ ಪಕ್ಕದಲ್ಲಿ ಪುರಭವನ ಎದುರಿನ ಗಾಂಧಿ ಪಾರ್ಕ್ ಮೂಲ ಸ್ವರೂಪ ಕಳೆದುಕೊಂಡಿದ್ದು, ಪಾರ್ಕ್‌ಗೆ ಮರುಜೀವ ನೀಡುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಪ್ರದೇಶ ಅಗೆಯಲಾಗಿದ್ದು, ಇನ್ನೂ ಮಿನಿ ರಂಗ ಮಂದಿರ ಸಹಿತ ಪಾರ್ಕ್ ನಿರ್ಮಾಣವಾಗಬೇಕಿದೆ. ಮಳೆಗಾಲಕ್ಕೂ ಮುನ್ನ ಮೊದಲನೇ ಹಂತದ ಕೆಲಸ ಪೂರ್ಣಗೊಳ್ಳಬೇಕು. ಇಲ್ಲವಾದರೆ ಈಗಾಗಲೇ ಅಗೆದ ಮಣ್ಣಿನಿಂದ ಕೆಸರುಮಯವಾಗುವ ಸಾಧ್ಯತೆ ಇದೆ.
ಸಾರ್ವಜನಿಕರಿಗೆ ಆತಂಕ
ಉರ್ವ-ಅಶೋಕನಗರ ರಸ್ತೆಯಿಂದ ಹೊಗೆಬೈಲಿಗೆ ತೆರಳುವ ರಾಜಕಾಲುವೆಗೆ ಅಡ್ಡಲಾಗಿ ಕಟ್ಟಿರುವ ಶಿಥಿಲಗೊಂಡಿದ್ದ ಸೇತುವೆ ಪುನಃ ನಿರ್ಮಾಣ ಕಾರ್ಯ ಮತ್ತಷ್ಟು ವೇಗ ಪಡೆದುಕೊಳ್ಳಬೇಕಿದೆ. ಕಾಮಗಾರಿ ನಿಧಾನವಾದ ಪರಿಣಾಮ ಇದೀಗ ಸಾರ್ವ ಜನಿಕರಿಗೆ ಮಳೆಗಾಲದಲ್ಲಿ ಮತ್ತೂಂದು ಸಮಸ್ಯೆ ಎದುರಾಗಬಹುದಾ? ಎಂಬ ಆತಂಕ ಎದುರಾಗಿದೆ. ಇನ್ನು, ನಗರದ ಸೆಂಟ್ರಲ್ ಮಾರುಕಟ್ಟೆ ನೆಲಸಮ ಕಾಮಗಾರಿ ಕೆಲ ದಿನಗಳ ಹಿಂದೆಯಷ್ಟೇ ಪೂರ್ಣಗೊಂಡಿದ್ದು, ಮಳೆಗಾಲ ಆರಂಭಕ್ಕೂ ಮುನ್ನ ಕಟ್ಟಡ ತ್ಯಾಜ್ಯ ವಿಲೇವಾರಿ ತುರ್ತಾಗಿ ಆಗಬೇಕಿದೆ.
ಗೈಲ್-ಜಲಸಿರಿ ಕಾಮಗಾರಿ; ರಸ್ತೆ, ಫುಟ್‌ಪಾತ್ ಅಧ್ವಾನ
ನಗರದ ವಿವಿಧ ಕಡೆಗಳಲ್ಲಿ ಗೈಲ್ ಮತ್ತು ಜಲಸಿರಿ ಕಾಮಗಾರಿಗಳು ನಡೆಯುತ್ತಿದೆ. ಅದರಲ್ಲಿಯೂ ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಬಸ್ ನಿಲ್ದಾಣ ಬಳಿ ಜಲಸಿರಿ ಪೈಪ್‌ಲೈನ್ ಉದ್ದೇಶಕ್ಕೆ ಕಾಂಕ್ರಿಟ್ ರಸ್ತೆ ಅಗೆಯಲಾಗಿದೆ. ನಗರದಲ್ಲಿ ಬುಧವಾರ ಬೆಳಗ್ಗೆ ಮಳೆ ಬಂದ ಪರಿಣಾಮ ಸುತ್ತಲಿನ ರಸ್ತೆಯುದ್ದ ಮಣ್ಣು ಹರಡಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಭಾಗದಲ್ಲಿ ಮತ್ತಷ್ಟು ಕಡೆಗಳಲ್ಲಿ ರಸ್ತೆ ಅಗೆದಿದ್ದು, ಕಾಮಗಾರಿ ವೇಗ ಪಡೆಯಬೇಕಿದೆ.
ಮಾರ್ನಮಿಕಟ್ಟ ಬಳಿ ಎರಡು ಕಡೆಗಳಲ್ಲಿ ಗೈಲ್ ಗ್ಯಾಸ್ ಲೈನ್ ಉದ್ದೇಶಕ್ಕೆ ಸುಮಾರು 6 ಅಡಿ ಗುಂಡಿ ತೋಡಲಾಗಿದೆ. ಪಕ್ಕದಲ್ಲಿಯೇ ಮಣ್ಣಿನ ರಾಶಿ ಹಾಕಲಾಗಿದ್ದು, ಗುಂಡಿ ತುಂಬಾ ನೀರು ನಿಂತಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕುದ್ರೋಳಿ, ಬಿಜೈ, ಲಾಲ್ ಬಾಗ್, ಸೆಂಟ್ರಲ್ ಮಾರುಕಟ್ಟೆ ಸಹಿತ ವಿವಿಧ ಕಡೆಗಳಲ್ಲಿ ಕಾಮಗಾರಿ ಉದ್ದೇಶಕ್ಕೆ ಅಗೆದ ರಸ್ತೆ ಇನ್ನೂ ಹದಗೊಳಿಸಲಿಲ್ಲ. ಪರಿಣಾಮ ಅಲ್ಲಲ್ಲಿ ಹೊಂಡ-ಗುಂಡಿಯಾಗಿ ಮಾರ್ಪಾಡಾಗಿದೆ.
ಚರಂಡಿಯ ಹೂಳು ಮತ್ತೆ ಚರಂಡಿಗೆ
ಮಳೆಗಾಲದ ವೇಳೆ ಕೃತಕ ನೆರೆ ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ನಗರದ ಹಲವು ಕಡೆಗಳಲ್ಲಿ ರಾಜಕಾಲುವೆಗಳ ಹೂಳು ತೆಗೆಯಲಾಗಿದೆ. ಆದರೆ ತೆಗೆದ ಹೂಳನ್ನು ವಿಲೇವಾರಿ ಮಾಡದ ಪರಿಣಾಮ ಮತ್ತೆ ಅಪಾಯ ಎದುರಾಗುವ ಸಂಭವವಿದೆ. ಕೊಟ್ಟಾರಚೌಕಿ ಪ್ರತೀ ಬಾರಿ ನೆರೆಗೆ ತುತ್ತಾಗುವ ಪ್ರದೇಶ. ಸಣ್ಣ ಮಳೆ ಬಂದರೆ ಸಾಕು ಕೃತಕ ನೆರೆ ಆವರಿಸಿ, ಸುತ್ತಮುತ್ತಲಿನ ಮನೆ ಗಳಿಗೆ, ಅಂಗಡಿಗಳಿಗೆ ನೀರು ನುಗ್ಗುತ್ತದೆ. ಹೀಗಿರುವಾಗ ಈ ಪ್ರದೇಶದ ರಾಜಕಾಲುವೆಯಲ್ಲಿದ್ದ ಹೂಳೆತ್ತಲಾಗಿದ್ದು, ಆ ಹೂಳನ್ನು ಅಲ್ಲೇ ಪಕ್ಕದ ರಸ್ತೆಯಲ್ಲಿ ರಾಶಿ ಹಾಕಲಾಗಿದೆ. ಮಳೆ ಬಂದಾಗ ಇದು ಮತ್ತೆ ರಾಜಕಾಲುವೆಗೆ ಬಿದ್ದು, ಮಳೆ ನೀರು ಹರಿಯಲು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.