Advertisement

ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಿರಲಿ

09:47 PM Mar 03, 2020 | Lakshmi GovindaRaj |

ತುಮಕೂರು: ಬೇಸಿಗೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

Advertisement

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬತ್ತಿದ್ದು, ಜನರಿಗೆ ಕುಡಿಯವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಬೇಸಿಗೆ ಸಮೀಪಿಸಿರುವುದರಿಂದ ಸಮಸ್ಯೆ ಇರುವ ಕಡೆ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೋಬಳಿಗೆ ಒಬ್ಬರಂತೆ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿದ್ದು, ನಿಯೋಜಿತ ಅಧಿಕಾರಿಗಳು ನಿಗದಿಪಡಿಸಿರುವ ಹೋಬಳಿಗಳಿಗೆ ಭೇಟಿ ನೀಡಿ ಟ್ಯಾಂಕರ್‌ ಮೂಲಕ ನೀರು ಒದಗಿಸುತ್ತಿರುವುದನ್ನು ದೃಢಪಡಿಸಿಕೊಳ್ಳಬೇಕು. ನೋಡಲ್‌ ಅಧಿಕಾರಿಗಳು ದೂರವಾಣಿ ಸಂಖ್ಯೆಯನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಬೇಕು.

ಕೈಗೊಂಡ ಕ್ರಮದ ಬಗ್ಗೆ ಪ್ರತಿ ಶುಕ್ರವಾರ ಜಿಲ್ಲಾ ಪಂಚಾಯಿತಿಗೆ ವರದಿ ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಶುಭಾ ಕಲ್ಯಾಣ್‌ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಜಂಟಿ ಸಭೆ ಏರ್ಪಡಿಸಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಭಾವ ಉಂಟಾಗುವ ಸಮಸ್ಯಾತ್ಮಕ ಗ್ರಾಮ ಗುರುತಿಸಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸಲು ಕ್ರಮವಹಿಸಬೇಕು ಎಂದರು.

ಪ್ರತಿದಿನ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸುತ್ತಿರುವ ಮಾಹಿತಿ ಛಾಯಾಚಿತ್ರದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಹೋಬಳಿ ಮಟ್ಟದ ನೋಡಲ್‌ ಅಧಿಕಾರಿಗಳ ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ಹಾಕಬೇಕು. ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು.

Advertisement

ಗ್ರಾಮೀಣ ಜನರಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸುವ ಹಾಗೂ ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು, ಎಲ್ಲಾ ಹೋಬಳಿಗಳ ಜಿಲ್ಲಾಮಟ್ಟದ ನೋಡಲ್‌ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲೂಕು ತಹಶೀಲ್ದಾರರೊಂದಿಗೆ ವೀಡಿಯೋ ಸಂವಾದ ನಡೆಸಿ ಮಾಹಿತಿ ನೀಡಿದರು.

ಜಿಲ್ಲಾಮಟ್ಟದ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಹೋಬಳಿಗಳ ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲೂಕು ತಹಶೀಲ್ದಾರರು ಹಾಜರಿದ್ದರು.

ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಸಿ: ಬರಪೀಡಿತ ತಾಲೂಕುಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಸಬೇಕು. ನಂತರ ಸಭೆಯ ನಡಾವಳಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ ಅನುಮೋದನೆ ಪಡೆದು ಸಿಆರ್‌ಎಫ್ ನಿಧಿಯಲ್ಲಿರುವ ಅನುದಾನ ಭರಿಸಿ ಕುಡಿಯುವ ನೀರು ಒದಗಿಸಲು ಕ್ರಮವಹಿಸಬೇಕು. ಉಳಿದ ಶಿರಾ, ಚಿ.ನಾ.ಹಳ್ಳಿ ಹಾಗೂ ತಿಪಟೂರು ಸೇರಿ 3 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳ 14ನೇ ಹಣಕಾಸು ಯೋಜನೆಯಡಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಬೇಕೆಂದು ಡಿಸಿ ಡಾ.ಕೆ.ರಾಕೇಶ್‌ ಕುಮಾರ್‌ ಹೇಳಿದ್ದಾರೆ.

ಕಳೆದ 2019ರ ಅಕ್ಟೋಬರ್‌ನಲ್ಲಿ ಸರ್ಕಾರ ಜಿಲ್ಲೆಯ ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ತುಮಕೂರು ಹಾಗೂ ತುರುವೇಕೆರೆ ಸೇರಿ ಒಟ್ಟು 7 ತಾಲೂಕು ಬರಪೀಡಿತವೆಂದು ಘೋಷಿಸಲಾಗಿತ್ತು. ಈ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದ ತಕ್ಷಣ ಗ್ರಾಮೀಣ ಪ್ರದೇಶದ ಜನರಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
-ಡಾ.ಕೆ.ರಾಕೇಶ್‌ ಕುಮಾರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next