ಚಿತ್ತಾಪುರ: ತಾಲೂಕಿನಿಂದ ಕೇವಲ 10ಕಿ.ಮೀ ಅಂತರದಲ್ಲಿರುವ ರಾವೂರ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಿರುವುದಕ್ಕೆ ಗ್ರಾಮಸ್ಥರ ವಿರೋಧವಿದ್ದು, ಯತಾಸ್ಥಿತಿ ಚಿತ್ತಾಪುರ ತಾಲೂಕಿನಲ್ಲಿಯೇ ಮುಂದುವರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಗಿರಿಧರ ವೈಷ್ಣವ ಆಗ್ರಹಿಸಿದ್ದಾರೆ.
ಚಿತ್ತಾಪುರ ತಾಲೂಕಿನಿಂದ ಹೆಚ್ಚುವರಿಯಾಗಿ ಕಾಳಗಿ ತಾಲೂಕಿಗೆ ಒಟ್ಟು 13 ಗ್ರಾಮ ಮತ್ತು ಶಹಾಬಾದತಾಲೂಕಿಗೆ ಒಟ್ಟು 8 ಗ್ರಾಮ ಸೇರ್ಪಡೆ ಮಾಡುವ ಕುರಿತುಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಕರೆದ ಸಭೆಯಲ್ಲಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ಅವರು, ಈಗ್ರಾಮಗಳು ಭೌಗೋಳಿಕವಾಗಿ ಚಿತ್ತಾಪುರ ತಾಲೂಕಿಗೆ ಅತಿ ಸಮೀಪವಾಗುತ್ತಿವೆ. ಆದ್ದರಿಂದ ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡುವ ಕ್ರಮ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿನಿತ್ಯ ರಾವೂರ ಗ್ರಾಮದ ಚಿತ್ತಾಪುರಕ್ಕೆ ಶಿಕ್ಷಣಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮತ್ತು ನ್ಯಾಯಾಲಯ, ಕಚೇರಿಗಳಿಗೆ ಹೋಗಿ ಬರಲು ಉತ್ತಮ ರಸ್ತೆಗಳು ಇದ್ದು, ವ್ಯವಹಾರ ನಡೆಸಲು ಅನುಕೂಲಕರವಾಗಿದೆ. ಹೀಗಾಗಿ ಸರ್ಕಾರ ಹೊರಡಿಸಿದ ಅಧಿಸೂಚನೆ ಅವೈಜ್ಞಾನಿಕದಿಂದ ಕೂಡಿದೆ ಎಂದರು.
ತಾಲೂಕಿನ ಗ್ರಾಮಗಳನ್ನು ಶಹಾಬಾದ ಮತ್ತು ಕಾಳಗಿ ಹೊಸ ತಾಲೂಕಿಗೆ ಸೇರ್ಪಡೆ ಮಾಡುವ ವಿಷಯವನ್ನು ಕೇವಲ ಆಯಾ ಊರಿನ ಗಣ್ಯ ವ್ಯಕ್ತಿಗಳಿಗೆ ಮಾತ್ರ ತಿಳಿಸಿದ್ದಾರೆ. ಹೊರತು ಗ್ರಾಮಸ್ಥರ ಅಭಿಪ್ರಾಯ, ಸಲಹೆ ಪಡೆದಿಲ್ಲ. ಗ್ರಾಮ ಪಂಚಾಯತಿಗಳಿಂದ ಡಂಗೂರ ಮೂಲಕ ಸಾರ್ವಜನಿಕರ ಸಭೆ ಕರೆದಿಲ್ಲ. ಹೀಗಾಗಿ ಈ ಸಭೆ ಕರೆದಿರುವುದೇ ಅವೈಜ್ಞಾನಿಕವಾಗಿದೆ ಎಂದರು.
ಮುಖಂಡರಾದ ಅಜೀಜ್ ಸೇಠ್, ಶ್ರೀನಿವಾಸ ಸಗರ, ಗುರುನಾಥ ಗುದಗಲ್, ಸೂರ್ಯಕಾಂತ ಕಟ್ಟಿಮನಿ, ಹಸನ್ ಪಟೇಲ್, ರಾಮಚಂದ್ರ ಪಂಚಾಳ, ಮಹೇಬೂಬ ಖಾನ್‌ದರಿ, ಶಂಕರ ಕಟಕೆ, ಯುನುಸ್ ಪ್ಯಾರೆ, ಅಮೀರ ಹುಸೇನ್, ಖದೀರ ಪಾಶಾ, ಇಸ್ಮಾಯಿಲ್ ಖಾನ್, ಸೋಮಶೇಖರ ನಡುವಿನಕೇರಿ, ಸುರೇಶ ಪಂಚಾಳ, ಮಂಜುನಾಥ ಕಟಕೆ, ಶಿವಯೋಗಿ ರಾವೂರ ಇತರರು ಇದ್ದರು.