Advertisement
ಅವರಲ್ಲಿ ದಕ್ಷತೆ ಕುಸಿಯುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆ. ಹಾಗಾಗದಂತೆ ನೌಕರರಲ್ಲಿ ಸದಾ ಸೇವಾ ಮನೋಭಾವ ಜಾಗೃತವಾಗಿರುವಂತೆ ಚುರುಕುಗೊಳಿಸಲು ಉಪಕ್ರಮವೆಂಬಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗ ಮಾಡಲಾಗುತ್ತದೆ. ಅಲ್ಲದೆ ಪ್ರಮಾಣಬದ್ಧ ಸಿಬಂದಿ ಹಂಚಿಕೆ, ನೂತನ ಯೋಜನೆಗಳ ಅನುಷ್ಠಾನ, ತುರ್ತು ಪರಿಸ್ಥಿತಿ ನಿರ್ವಹಣೆ ಇತ್ಯಾದಿ ಕಾರಣಗಳಿಂದ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎನ್ನುವುದು ಸ್ಪಷ್ಟ. ಹಾಗೆ ವರ್ಗಾವಣೆಯ ಆದೇಶದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಎದ್ದು ಕಾಣಬೇಕು ಎನ್ನುವುದು ಅಷ್ಟೇ ಮುಖ್ಯ.
ತ ನ್ನ ಅಕ್ಷದ ಮೇಲೆ ನಿರಾತಂಕವಾಗಿ ಸುತ್ತುವ ಚಕ್ರದಂತಿರುವ ವರ್ಗಾವಣೆ ಪ್ರಕ್ರಿಯೆಗೆ ಗುಂಡೂರಾವ್ ಮುಖ್ಯಮಂತ್ರಿಯಾಗಿರುವಾಗ ಭಾರೀ ಬದಲಾವಣೆ ತರಲಾಯಿತು. ಸರಕಾರಿ ನೌಕರರ ವರ್ಗಾವಣೆಯ ಅಧಿಕಾರವನ್ನು ಇಲಾಖಾ ಮುಖ್ಯಸ್ಥರಿಂದ ಆಯಾ ಇಲಾಖಾ ಸಚಿವರಿಗೆ ವರ್ಗಾಯಿಸಲಾಯಿತು. ಸಚಿವರು ಸರಕಾರದ ಭಾಗವೇ ಆದರೂ ಅವರು ಚುನಾಯಿತ ಪ್ರತಿನಿಧಿಯಾಗಿದ್ದು ಅವರ ಪೂರ್ವಾಶ್ರಮ ರಾಜಕೀಯವೇ. ಅವರಿಗೆ ದತ್ತವಾದ ಅಧಿಕಾರ ನಿಧಾನವಾಗಿ ಶಿಥಿಲವಾಗತೊಡಗಿತು. ಮುಂದಿನ ಸರಕಾರಗಳು ಅಧಿಕಾರಕ್ಕೆ ಬಂದಾಗ ನೌಕರರ ವರ್ಗಾವಣೆಯಲ್ಲಿ ಇನ್ನೂ ಹೆಚ್ಚಿನ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಲಾಯಿತು. ಅಲ್ಲಿಂದ ನೌಕರರ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕುಂಠಿತವಾಯಿತು. ಪರಿಣಾಮ ವಾಗಿ ನೌಕರಶಾಹಿಯ ದಕ್ಷತೆಯೂ ಕುಸಿಯಿತು ಎಂದು ಹೇಳಿದರೆ ಅವಸರದ ಹೇಳಿಕೆಯಾಗಲಾರದು. ಸಾಲದೆಂಬಂತೆ ಸರಕಾರ ಕಲ್ಪಿಸಿದ ಕೌನ್ಸೆಲಿಂಗ್ ವ್ಯವಸ್ಥೆ ಮೊದಲ ಒಂದೆರಡು ವರ್ಷ ಸರಿಯಾಗಿ ನಡೆದರೂ, ಅನಂತರ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಹಠಾತ್ ಬ್ಲಾಕ್ ಮಾಡುವ ಹಾಗೂ ಬೇಕೆಂದಾಗ ಓಪನ್ ಮಾಡುವ ಸರ್ಕಸ್ ನಡೆಯುತ್ತಿದೆ ಎಂಬ ದೂರಿದೆ.
Related Articles
Advertisement
ಹಾಗೆ ನೇಮಕಗೊಂಡ ನೌಕರ, ನೌಕರಿಗೆ ಸೇರುವಾಗ ಸಂವಿಧಾನ ಪ್ರಭು-ರಾಜ್ಯದ ಸಂದರ್ಭದಲ್ಲಾದರೆ ರಾಜ್ಯಪಾಲರಿಗೆ ತಾನು ಭಾರತೀಯ ಸಂವಿಧಾನದಲ್ಲಿ ನಂಬಿಕೆಯುಳ್ಳವ (Oath of alliagience to Indian Constitution) ನಾಗಿದ್ದೇನೆ ಎಂಬ ಲಿಖೀತ ಪ್ರತಿಜ್ಞಾ ವಿಧಿಯನ್ನು ಸಲ್ಲಿಸತಕ್ಕದ್ದು. ರಾಜ್ಯಪಾಲರ ಇಚ್ಛೆಯಂತೆ ಸರಕಾರದ ಧೋರಣೆಯನ್ನು ಅನುಷ್ಠಾನಿ ಸುವುದು ನೌಕರಶಾಹಿಯ ಕರ್ತವ್ಯ. ಸೇವಾ ನಿಯಮಾ ವಳಿಯಂತೆ ಇಲಾಖೆ, ನೌಕರರನ್ನು ನಿಯಂತ್ರಿಸುತ್ತದೆ. ಹಾಗಾಗಿ ಸರಕಾರಿ ನೌಕರ ಸರಕಾರದ ನೇರ ಸ್ವಾಮ್ಯತೆಯಲ್ಲಿರುತ್ತಾನೆ. ವರ್ಗಾವಣೆಯು ಇಲಾಖಾ ಕಾರ್ಯ ಚಟುವಟಿಕೆಗಳಲ್ಲಿ ಒಂದು.
ವಸ್ತುಸ್ಥಿತಿ ಹೀಗಿರುವಾಗ ಸರಕಾರಿ ನೌಕರ ವರ್ಗಾವಣೆಗೆ ಸಚಿವ/ಶಾಸಕರ ಒಪ್ಪಿಗೆ ಯಾ ಅನು ಮೋದನೆ ಬೇಕೇ? ಅದರಲ್ಲಿಯೂ ಈ ವರ್ಗಾವಣೆಗಳು ಸರಕಾರವೇ ರೂಪಿಸಿದ ಮಾರ್ಗಸೂಚಿಯಂತೆ ಕಾರ್ಯ ರೂಪಕ್ಕೆ ಬರಬೇಕಾದದ್ದಷ್ಟೇ! ಈ ಮಾರ್ಗಸೂಚಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗಿಗಳಾದ ಸಚಿವರು ಅದರ ಅನುಷ್ಠಾನದಲ್ಲಿ ಭಾಗಿಗಳಾಗುವುದು ಸಂವಿಧಾನದ ಆಶಯಕ್ಕೆ ವಿರೋಧವಲ್ಲವೇ! ಸರಕಾರಿ ನೌಕರರ ವರ್ಗಾವಣೆಯ ಹೊಣೆ ಇಲಾಖೆಗಳಿಗೆ ಸೀಮಿತಗೊಳಿಸುವುದು ವಿಹಿತ.
ಇಲಾಖಾ ಮುಖ್ಯಸ್ಥರಲ್ಲಿ ನೌಕರರ ವರ್ಗವಾರು ಸೇವಾ ವಿವರಗಳಿರುತ್ತವೆ. ಹಾಗೆ ಯೋಜನೆಗಳ ಪ್ರಾಶಸ್ತವೂ ಇಲಾಖೆಗೆ ತಿಳಿದಿರುತ್ತದೆ ಮತ್ತು ಸಮರ್ಪಕವಾಗಿ ಅನುಷ್ಠಾನಿಸುವ ಜವಾಬ್ದಾರಿ ಹೊಂದಿರುತ್ತದೆ. ಆ ಪ್ರಕಾರ ನೌಕರರ ವರ್ಗಾವಣೆಯನ್ನು ಮಾರ್ಗಸೂಚಿಯಂತೆ ಕಾರ್ಯಗತಗೊಳಿಸುವ ಜವಾಬ್ದಾರಿ ಇಲಾಖೆಗೆ ಸೀಮಿತಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತಮ. ರಾಜಕೀಯ ನುಸುಳದಂತೆ ಆಡಳಿತ ನಡೆಸುವುದು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಅಂಶ.
ಹಾಲಿ ಇರುವ ವ್ಯವಸ್ಥೆಯಂತೆ ಬಹುಮತ ಗಳಿಸಿದ ರಾಜಕೀಯ ಪಕ್ಷ ಆಡಳಿತಕ್ಕೆ ಬರುತ್ತಲೇ ನೌಕರರ ವರ್ಗಾವರ್ಗಿ ಗರಿಕೆದರಿಕೊಳ್ಳುತ್ತದೆ. ಈ ವಿದ್ಯಮಾನ ಸಾರ್ವಜನಿಕ ಹಿತಾಸಕ್ತಿಗೆ ವಿರೋಧವಾದ ನಡೆ. ನೌಕರರ ವರ್ಗಾವಣೆ, ಮಾರ್ಗಸೂಚಿಯಂತೆ ನಡೆಯು ತ್ತಿರಬೇಕು. ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಇರಕೂಡದು. ಇತ್ತೀಚೆಗಿನ ವರ್ಷಗಳಲ್ಲಿ ಆಡಳಿತಕ್ಕೆ ಬರುವ ರಾಜಕೀಯ ಪಕ್ಷಗಳು ಆಡಳಿತದಲ್ಲಿ ರಾಜಕೀಯವನ್ನು ಬೆರೆಸುವ ಕಾನೂನು ರೂಪಿಸುವುದು ದುರದೃಷ್ಟದ ಸಂಗತಿ.
ಒಂದು ಉದಾಹರಣೆ: ಈಗ ಶಾಸಕ/ಸಂಸದರಿಗೆ ಆಪ್ತ ಸಹಾಯಕರನ್ನಾಗಿ ಸರಕಾರಿ ನೌಕರರನ್ನು ನೇಮಿಸುವ ಕಾನೂನಿದೆ. ಅವರಿಗೆ ಬೇಕಾದವರನ್ನು ಆಯ್ಕೆ ಮಾಡುವ ಅವಕಾಶವೂ ಇದೆ. ಅಂಥ ಬೇಡಿಕೆ ಬಂದಾಗ ಸಿಬಂದಿಯನ್ನು ಇಲಾಖೆ ಯಿಂದ ವರ್ಗ ಮಾಡಲಾಗುತ್ತದೆ. ಅವರು ಈ ಚುನಾಯಿತ ಪ್ರತಿನಿಧಿಗಳ ಆಪ್ತ ಸಹಾಯಕರಾಗಿರುವಷ್ಟು ಕಾಲ ಅವರ ಆಜ್ಞಾನುವರ್ತಿಯಾಗಿರ ಬೇಕಷ್ಟೇ! ಶಾಸಕ/ಸಂಸದರಲ್ಲಿ ಅನೇಕರು ವಿಪಕ್ಷದವರಿರುತ್ತಾರೆ. ಅವರು ಸರಕಾರದ ನಡೆಯನ್ನು ವಿರೋಧಿಸುತ್ತಲೇ ಇರುತ್ತಾರೆ. ಇವರ ವಿರೋಧದ ಚಟುವಟಿಕೆಗಳಲ್ಲಿ ಈ ಆಪ್ತ ಸಹಾಯಕರನ್ನು ಬಳಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸರಕಾರಿ ನೌಕರನೇ ಸರಕಾರದ ಧೋರಣೆಯ ವಿರುದ್ಧದ ಚಟುವಟಿಕೆಯಲ್ಲಿ ಭಾಗ ವಹಿಸುತ್ತಿರುವುದು ಕಾನೂನಾತ್ಮಕ ಸಹ್ಯವಾಗುವುದಾದರೆ ಇದೆಂಥ ವಿಪರ್ಯಾಸ.
ಶಾಸಕ/ಸಂಸದರು ಖಾಸಗಿ ವ್ಯಕ್ತಿಗಳನ್ನು ಆಪ್ತ ಸಹಾಯಕರಾಗಿ ತೆಗೆದುಕೊಳ್ಳಲಿ. ವೆಚ್ಚವನ್ನು ಸರಕಾರ ಭರಿಸಲಿ. ಇಲ್ಲಿ ವಿಷಯ ಸೂಕ್ಷ್ಮ, ಪರಿಣಾಮ ಗಂಭೀರ. ದುರದೃಷ್ಟ ವೇನೆಂದರೆ ಭಾರತದಲ್ಲಿ ಸಾರ್ವಜನಿಕರು ಇಂಥ ಸಾಂವಿಧಾನಿಕ ವಿರೋಧ ವನ್ನು ಗಮನಿಸಿ ಪ್ರತಿಕ್ರಿಯಿಸುವುದಿಲ್ಲ. ಏನೇ ಇರಲಿ, ನೌಕರಶಾಹಿಯ ವರ್ಗಾವಣೆ ಯಾವತ್ತೂ ರಾಜಕೀಯ ಮುಕ್ತವಾಗಿರಲಿ. ಈ ಬಗ್ಗೆ ಸಾರ್ವಜನಿಕರು, ಸಾರ್ವಜನಿಕ ಹಿತದೃಷ್ಟಿಯಿಂದ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ.
ಬೇಳೂರು ರಾಘವ ಶೆಟ್ಟಿ