ಕಲಬುರಗಿ: ಕೋವಿಡ್ ಒಂದನೇ ಹಾಗೂ ಎರಡನೇ ಅಲೆಯಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದ್ದು, ಅನೇಕ ಕಡೆಗಳಲ್ಲಿ ಜೀವ ಹಾನಿಯೂ ಆಗಿವೆ. ಆದ್ದರಿಂದ ಮೂರನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತಾ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಅಲೆ ವ್ಯಾಪಕವಾಗಿದ್ದು, ತೀವ್ರತೆ ಬಗ್ಗೆ ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಹೇಳಿವೆ. ಅಲ್ಲದೇ ಮೂರನೇ ಅಲೆ ಈಗ ಕಾಲಿಟ್ಟಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಬೂಬು ಹೇಳದೇ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಜಿಲ್ಲೆಯಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಳದ ಜತೆಗೆ ಆಕ್ಸಿಜನ್ ಸಮರ್ಪಕ ಪೂರೈಕೆಗೆ ಕಠಿಣ ನಿಲುವು ತಳೆಯಬೇಕು. 45 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಕೊಡಬೇಕು. ಪ್ರಮುಖವಾಗಿ 12ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕಬೇಕೆಂದು ಆಗ್ರಹಿಸಿದರು.
ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲ. ಆಡಳಿತ ಪಕ್ಷದ ಶಾಸಕರ್ಯಾರೂ ಕೊರೊನಾ ಕುರಿತು ಸಲಹೆ-ಸೂಚನೆ ನೀಡುತ್ತಿಲ್ಲ. ಅವರೆಲ್ಲ ತಮ್ಮದೇ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ವಿರೋಧ ಪಕ್ಷದವರಾದ ನಾವು ಏನಾದರೂ ಸಲಹೆ ನೀಡಿದರೇ, ಜನಪರ ವಿಷಯಗಳನ್ನು ಈಡೇರಿಸುವಂತೆ ಆಗ್ರಹಿಸಿದರೆ ಗಮನವನ್ನೇ ನೀಡುತ್ತಿಲ್ಲ. ಜಿಲ್ಲಾಡಳಿತವೂ ಯಾವುದೇ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹೀಗಾದರೆ ಜನತೆ ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಬೇಕು. ಆದ್ದರಿಂದ ಜಿಲ್ಲಾಡಳಿತ ಎಚ್ಚೆತ್ತು ಅಗತ್ಯ ಎಲ್ಲ ಸಿದ್ಧತೆಗೆ ಮುಂದಾಗಬೇಕು ಎಂದರು.
ಕೋವಿಡ್ ಲ್ಯಾಬ್ ಕಾರ್ಯಾರಂಭದ ಜತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ, ಟ್ರಾಮಾ ಸೆಂಟರ್ ಸ್ಥಾಪಿಸಿ, ಈಗಾಗಲೇ ತೆಗೆದು ಹಾಕಲಾಗಿದ್ದ ಆರೋಗ್ಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ಪುನರ್ ನೇಮಕ ಮಾಡಿಕೊಳ್ಳಬೇಕು. 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಬಹುದು ಎಂಬುದಾಗಿ ಡ್ರಗ್ಸ್ ಕಂಟ್ರೋಲರ್ ಅಥಾರಿಟಿ ಹಾಗೂ ಸಿಡಿಎಸ್ ಸಿಒ ಶಿಫಾರಸು ಮಾಡಿದ್ದರೂ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಲಸಿಕೆ ನೀಡಲು ಮುಂದಾಗಿರುವುದು ಸರಿಯಲ್ಲ. ಇದು ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಹಾಂತಪ್ಪ ಸಂಗಾವಿ, ಶಿವಾನಂದ ಹೊನಗುಂಟಿ ಮುಂತಾದವರಿದ್ದರು.
ಕೋವಿಡ್‌ದಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ನೀಡಿದ ಚೆಕ್‌ಗಳು ಬೌನ್ಸ್ ಆಗಿವೆ. ಇದು ಸರ್ಕಾರದ ದಿವಾಳಿತನ ನಿರೂಪಿಸುತ್ತದೆ. ಜಿಲ್ಲೆಯಲ್ಲಿ ಕೋವಿಡ್‌ದಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಹಾಗೂ ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಎನ್ನುವ ಕುರಿತು ಶ್ವೇತ ಪತ್ರ ಹೊರಡಿಸಲಿ.
-ಡಾ| ಶರಣಪ್ರಕಾಶ ಪಾಟೀಲ ಮಾಜಿ ಸಚಿವ