Advertisement

ಕಬ್ಬಿನ ಎಫ್‌ಆರ್‌ಪಿ ದರ ಹೊಲದಲ್ಲೇ ನಿಗದಿಯಾಗಲಿ: ಶಾಂತಕುಮಾರ

06:18 PM Feb 01, 2022 | Team Udayavani |

ಬೈಲಹೊಂಗಲ: ಕಬ್ಬು ವಿಳಂಬವಾಗಿ ಕಟಾವು ಮಾಡುವುದು, ಕಟಾವು ಕೂಲಿ ಕಾರ್ಮಿಕರು ಹೆಚ್ಚಿನ ಲಗಾಣಿಗಾಗಿ ರೈತರನ್ನು ಒತ್ತಾಯಿಸುವುದು ತಪ್ಪಿಸಲು ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

Advertisement

ಸೊಗಲ ಕ್ಷೇತ್ರದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆ ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸುತ್ತಿರುವುದು, ಹಿಂದಿನ ವರ್ಷದ ಸಕ್ಕರೆ ಇಳುವರಿ ಪರಿಗಣಿಸಿ ಇದರ ಆಧಾರದಲ್ಲಿ ಎಫ್‌ಆರ್‌ಪಿ ದರ ನೀಡುತ್ತಿರುವುದು ಅವೈಜ್ಞಾನಿಕ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಮಾನದಂಡ ಬದಲಾಗಬೇಕು ಎಂದರು.

ಆಕಸ್ಮಿಕ ಬೆಂಕಿ, ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಸುಟ್ಟು ಹೋಗುವ ಕಬ್ಬು ಕಾರ್ಖಾನೆಗೆ ಸರಬರಾಜು ಆದಾಗ ಕಬ್ಬಿನ ಹಣದಲ್ಲಿ ಶೇ.25 ಕಡಿತ ಮಾಡಿ ಹಣ ಕೊಡುವ ಮೂಲಕ ರೈತರಿಗೆ ವಂಚಿಸಲಾಗುತ್ತಿದೆ. ಈ ನಿಯಮ ರದ್ದುಗೊಳಿಸಬೇಕು. ನೀರಿನ ಬಳಕೆ, ವ್ಯವಸಾಯದ ಶ್ರಮ ಕಡಿಮೆ ಮಾಡಲು ಇಳುವರಿ ಹೆಚ್ಚಿಸಲು ಕಬ್ಬು ಬೆಳೆಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಹಿಂದಿನ ಪದ್ಧತಿಯಂತೆ ಶೇ.90 ಸಹಾಯಧನ ಕೊಡುವ ಪದ್ಧತಿ ಮುಂದುವರಿಯಬೇಕು ಎಂದರು.

ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬನ್ನು ಕಡ್ಡಾಯವಾಗಿ ಜೇಷ್ಠತೆ ಆಧಾರದಲ್ಲಿ ಕಟಾವು ಮಾಡಿ ನುರಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕು. ಉಲ್ಲಂಘಿಸುವ ಕಾರ್ಖಾನೆಗೆ ದಂಡ ವಿಧಿಸುವ ಕಾನೂನು ಜಾರಿಯಾಗಬೇಕು. ರೈತರಿಗೆ ಕಬ್ಬಿನ ಹಣ ವಿಳಂಬವಾಗಿ ಪಾವತಿಸುವ ಕಾರ್ಖಾನೆಗಳು ಶೇ.15 ಬಡ್ಡಿ ಸೇರಿಸಿ ಕೊಡುವಂತೆ ಕಠಿಣ ಆದೇಶ ಹೂರಡಿಸಬೇಕು. ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‌ನಿಂದ ಬರುವ ಲಾಭ ಕಬ್ಬು ಸರಬರಾಜು ರೈತರಿಗೆ ಹಂಚಿಕೆ ಮಾಡುವ ನಿಯಮ ಜಾರಿಗೆ ಬರಬೇಕು. ಕಬ್ಬು ಬೆಳೆಗೆ ಗೊಣ್ಣೆಹುಳು ಬಾಧೆ ತಪ್ಪಿಸಲು ವಿಶ್ವವಿದ್ಯಾನಿಲಯಗಳು ಸಂಶೋಧನೆ ನಡೆಸಲು ಗಂಭೀರವಾಗಿ ಚಿಂತಿಸಬೇಕೆಂದು ಒತ್ತಾಯಿಸಿದರು.

ಕಬ್ಬು ಬೇಸಾಯ ಪರಿಣಿತ ಡಾ| ಖಂಡಗಾವಿ, ಸಮಗ್ರ ಕೃಷಿ ಪಂಡಿತ ಎಸ್‌.ಟಿ. ಪಾಟೀಲ್‌, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಡಾ| ಸಂಜಯ್‌ ಪಾಟೀಲ್‌ ಮಾತನಾಡಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ್‌, ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಬಿ. ಸಿದ್ನಾಳ, ಮಾರುತಿ ನಲವಾಡೆ, ರಮೇಶ ಹಿರೇಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ಮಹಂತೇಶ ವಾಲಿ, ಈಶ್ವರ ಬಾಗೋಜಿ ಸೇರಿದಂತೆ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next