ವಾಡಿ: ಕೇವಲ ತನ್ನ 23ನೇ ವಯಸ್ಸಿನಲ್ಲಿ ಗಲ್ಲುಗಂಬಕ್ಕೆ ಮುತ್ತಿಟ್ಟು ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ಬದಲಿಸಿದ ಹುತಾತ್ಮ ಭಗತ್‌ಸಿಂಗ್ ಅವರ ಸಮಾಜವಾದಿ ಕ್ರಾಂತಿ ಹೋರಾಟ ಮುನ್ನಡೆಸುವ ಜವಾಬ್ದಾರಿ ಪ್ರತಿಯೊಬ್ಬ ಯುವಕ-ಯುವತಿಯರ ಮೇಲಿದೆ ಎಂದು ಆಲ್ ಇಂಡಿಯಾ ಕಿಸಾನ್ ಕೇತ್ ಮಜ್ದೂರ್ ಯೂನಿಯನ್ (ಎಐಕೆಕೆಎಂಎಸ್) ಜಿಲ್ಲಾಧ್ಯಕ್ಷ ಗಣಪತರಾವ್ ಮಾನೆ ಹೇಳಿದರು.
ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್‌ಸಿಂಗ್ ಹುತಾತ್ಮದಿನದ ನಿಮಿತ್ತ ಹಳಕರ್ಟಿ ಗ್ರಾಮದಲ್ಲಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ, ಎಐಡಿವೈಒ ಯುವಜನ ಸಂಘಟನೆ, ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ಏರ್ಪಡಿಸಲಾಗಿದ್ದ ಪಂಜಿನ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ರಾಜಗುರು, ಸುಖದೇವ ಬ್ರಿಟಿಷರಿಂದ ನೇಣಿಗೆ ಶರಣಾಗುವ ದಿನ ಭಾರತದಲ್ಲಿ ಯುವಜನರು ಇಂಕ್ವಿಲಾಬ್ ಜಿಂದಾಬಾದ್, ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಗಳನ್ನು ಕೂಗಿ ಬಿಳಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸಾವಿನಲ್ಲೂ ಹೋರಾಟದ ಕಿಚ್ಚು ಹೊತ್ತಿಸಿದ ಸಿಡಿಲಮರಿ ಭಗತ್‌ಸಿಂಗ್ ಕನಸಿನ ಸ್ವಾತಂತ್ರ್ಯ ಪಡೆಯಲು ಜಾತಿ ಧರ್ಮಗಳ ಬೇಧ ತೊರೆದು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಗ್ರಾಮದ ಮುಖಂಡ ಪಾಲ್ಗುಣಪ್ಪ ಗಂಜಿ ಅತಿಥಿಯಾಗಿದ್ದರು.
ಎಸ್‌ಯುಸಿಐ ವಾಡಿ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ, ಎಐಡಿಎಸ್‌ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಹೇರೂರ, ಎಐಕೆಕೆಎಂಎಸ್ ಅಧ್ಯಕ್ಷ ಚೌಡಪ್ಪ ಗಂಜಿ, ಮುಖಂಡರಾದ ದತ್ತು ಹುಡೇಕರ, ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರಕರ, ದೊಡ್ಡಪ್ಪ ಹೊಸೂರ, ಅಯ್ಯಪ್ಪ ಹುಳಗೋಳ, ಶಿವುಕುಮಾರ ಆಂದೋಲಾ, ಸಾಬಣ್ಣ ಸುಣಗಾರ, ಗೋವಿಂದ ಯಳವಾರ, ಸಿದ್ಧು ಮದ್ರಿ, ಸಿದ್ಧಾರ್ಥ ತಿಪ್ಪನರ್, ಬಸವರಾಜ ನಾಟೀಕಾರ, ಶ್ರೀಶೈಲ ಕೆಂಚಗುಂಡಿ ಸೇರಿದಂತೆ ಗ್ರಾಮದ ನೂರಾರು ಯುವಕರು, ರೈತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗ್ರಾಮದ ವಿವಿಧ ಗಲ್ಲಿಗಳಲ್ಲಿ ಭಗತ್‌ಸಿಂಗ್ ಭಾವಚಿತ್ರ ಹಾಗೂ ದೀವಟಿಗೆ ಹಿಡಿದು ಮೆರವಣಿಗೆ ನಡೆಸಲಾಯಿತು.