Advertisement

ಬಡವರ ಸೇವೆಯೇ ಧ್ಯೇಯವಾಗಲಿ

06:59 AM Jun 26, 2019 | Lakshmi GovindaRaj |

ಬೆಂಗಳೂರು: ಬಡವರು, ರೋಗಿಗಳು, ಅನಾಥರು, ಗ್ರಾಮೀಣ ಪ್ರದೇಶದವರು ಮತ್ತು ವೃದ್ಧರ ಸೇವೆಗೆ ಶ್ರಮಿಸುವುದೇ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ವಯಂ ಸೇವಕರ ಧ್ಯೇಯವಾಗಿರಬೇಕು ಎಂದು ರಾಜ್ಯಪಾಲ ವಿ.ಆರ್‌.ವಾಲಾ ಸಲಹೆ ನೀಡಿದರು.

Advertisement

ರಾಜಭವನದಲ್ಲಿ ಮಂಗಳವಾರ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಬ್ಸ್, ಬುಲ್‌ಬುಲ್ಸ್‌, ಸ್ಕೌಟ್ಸ್‌, ಗೈಡ್ಸ್‌, ರೋವರ್ ಮತ್ತು ರೇಂಜರ್ಗಳಿಗೆ ಚುತುರ್ಥ ಚರಣ್‌, ಹೀರಕ್‌ ಪಂಕ್‌ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಣೆ ಮಾಡಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ವಯಂ ಸೇವಕರಿಗೆ ಸೇವೆಯೇ ಪರಮ ಧ್ಯೇಯವಾಗಬೇಕು. ಕರ್ನಾಟಕ, ಭಾರತವಷ್ಟೇ ಅಲ್ಲದೆ ಇಡೀ ವಿಶ್ವದ ಜನರು ತಮ್ಮವರು ಎಂಬ ಭಾವನೆ ಹೊಂದಬೇಕು. ಕೆಟ್ಟ ವಿಚಾರಗಳತ್ತ ಗಮನ ಹರಿಸದೆ, ಸಮಾಜಮುಖೀ ಚಿಂತನೆಗಳೊಂದಿಗೆ ಮುಂದೆ ಸಾಗಬೇಕು ಎಂದು ಕರೆ ಕೊಟ್ಟರು.

ರಾಷ್ಟ್ರ ಮತ್ತು ಸಮಾಜ ಸೇವೆಗೆ ಅರ್ಪಣೆ ಮಾಡಿಕೊಂಡಾಗ ಪ್ರತಿಯೊಬ್ಬರೂ ಸುಖ ಹಾಗೂ ಸಂತೋಷದಿಂದ ಇರಲು ಸಾಧ್ಯ. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಮೂಡಿಸುತ್ತಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಅತ್ಯಂತ ಹಳೆಯ ಹಾಗೂ ವಿಶ್ವದ ಅತಿದೊಡ್ಡ ಸಂಘಟನೆಯಾಗಿದೆ. 218 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸುಮಾರು 52 ಸಾವಿರ ವಿದ್ಯಾರ್ಥಿಗಳು ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಳವಳಿಯ ಭಾಗವಾಗಿದ್ದಾರೆ. ರಾಜ್ಯ ಸರ್ಕಾರ ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದೆ ಹಾಗೂ ಸರ್ಕಾರದ ಎಲ್ಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಧೈರ್ಯ, ಶೌರ್ಯ, ದೇಶಭಕ್ತಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹೆಚ್ಚು ನೆರವಾಗಿದೆ ಎಂದು ಹೇಳಿದರು.

Advertisement

ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ ಮಾತನಾಡಿ, ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯಾದ್ಯಂತ ನಮ್ಮ ಸ್ವಯಂ ಸೇವಕರು ಸುಮಾರು 1 ಕೋಟಿ ಸೀಡ್‌ ಬಾಲ್‌ಗ‌ಳನ್ನು ತಯಾರಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ನಮ್ಮ ಸ್ವಯಂ ಸೇವಕರ ಸೇವೆಯನ್ನು ಭಾರತೀಯ ಚುನಾವಣಾ ಆಯೋಗ ಗುರುತಿಸಿದೆ. ಮುಂಬರುವ ದಿನಗಳಲ್ಲಿ ನಮ್ಮ ಎಲ್ಲ ಸ್ವಯಂ ಸೇವಕರಿಗೆ ಆನ್‌ಲೈನ್‌ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ಉಪಾಧ್ಯಕ್ಷರಾದ ಕೊಂಡಜ್ಜಿ ಬಿ.ಷಣ್ಮುಖಪ್ಪ, ತೇಜಸ್ವಿನಿ ಅನಂತಕುಮಾರ್‌, ಭಾರತಿ ಚಂದ್ರಶೇಖರ್‌ ಮತ್ತು ಸಂಸ್ಥೆಯ ರಾಜ್ಯ ಆಯುಕ್ತ ಎಂ.ಎ.ಖಾಲಿದ್‌ ಉಪಸ್ಥಿತರಿದ್ದರು.

466 ಮಂದಿಗೆ ಪ್ರಮಾಣ ಪತ್ರ: ಚತುರ್ಥಚರಣ ಕಬ್ಸ್ ಪುರಸ್ಕಾರಕ್ಕೆ 898 ಮಂದಿ, ಹೀರಕ್‌ ಪಂಕ್‌ ಬುಲ್‌ಬುಲ್ಸ್‌ ಪುರಸ್ಕಾರಕ್ಕೆ 896, ರಾಜ್ಯ ಪುರಸ್ಕಾರ ಸ್ಕೌಟ್ಸ್‌ಗೆ 1,370, ರಾಜ್ಯ ಪುರಸ್ಕಾರ ಗೈಡ್ಸ್‌ಗೆ 1,191, ರಾಜ್ಯ ಪುರಸ್ಕಾರ ರೋವರ್ಗೆ 122 ಮತ್ತು ರಾಜ್ಯ ಪುರಸ್ಕಾರ ರೇಂಜರ್ಗೆ 136 ಮಂದಿ ಸೇರಿದಂತೆ ಒಟ್ಟು 4,613 ಮಂದಿಗೆ ಪ್ರಶಸ್ತಿ ಲಭಿಸಿದೆ. ಒಟ್ಟು 466 ಮಂದಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಯೋಗ, ಧ್ಯಾನ, ಕೌಶಲ್ಯ ಅಭಿವೃದ್ಧಿ, ಎನ್‌ಸಿಸಿ, ಎನ್‌ಎಸ್‌ಎಸ್‌ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಲಿದೆ.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next