ಯಳಂದೂರು: ಯಳಂದೂರು ತಾಲೂಕು ಶೈವ, ವೈಷ್ಣವ ಹಾಗೂ ಗಿರಿಜನರಾದ ಸೋಲಿಗ ಸಂಸ್ಕೃತಿಯ ಪ್ರತೀಕವಾಗಿದೆ. ಬಿಳಿಗಿರಿರಂಗನಬೆಟ್ಟವೇ ಇದಕ್ಕೆ ಸಾಕ್ಷಿಭೂತಿಯಾಗಿ ನಿಂತಿದ್ದು, ಇಂತಹ ಸಂಸ್ಕೃತಿ ಈ ದೇಶದ ಮೂಲವಾಗಿದೆ. ಇದರ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಸಾಹಿತಿ ಮದ್ದೂರು ದೊರೆಸ್ವಾಮಿ ಹೇಳಿದರು.
ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ರಂಗದೇಗುಲ ಕಲಾ ವೇದಿಕೆ 2018-19ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಜನಪದ ಝೇಂಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡು ಕಾಡನ್ನು ಬೆಸೆಯುವ ಸಂಸ್ಕೃತಿ ಬೆಟ್ಟದ ಸಂಸ್ಕೃತಿಯಲ್ಲಿ ಅಡಕವಾಗಿದೆ. ವೈಷ್ಣವನಾದ ಬಿಳಿಗಿರಿರಂಗನಾಥ ಸ್ವಾಮಿ ಸೋಲಿಗರ ಕುಸುಮಾಲೆಯನ್ನು ಮೋಹಿಸಿ, ಅವರ ಪೋಷಕರನ್ನು ಒಲಿಸಿ ವಧು ದಕ್ಷಿಣೆ ನೀಡಿ, ವಿವಾಹವಾಗುವ ಜಾನಪದ ಕತೆ ಈ ನೆಲದ ಭಾವೈಕ್ಯತೆಯ ಶ್ರೀಮಂತಿಕೆಯನ್ನು ತೋರಿಸುವುದಾಗಿದೆ ಎಂದರು.
ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಅಗತ್ಯ: ಗ್ರಾಪಂ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಮುಂದಿನ ಪೀಳಿಗೆಗಳಿಗೆ ಇದನ್ನು ಜೋಪಾನ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಅಭಿನಂದನಾರ್ಹ ಎಂದರು.
ಗ್ರಾಮೀಣ ಸೊಗಡನ್ನು ಪಸರಿಸುವ ಕೆಲಸ: ತಾಪಂ ಅಧ್ಯಕ್ಷ ನಿರಂಜನ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗದೇಗುಲ ಕಲಾ ವೇದಿಕೆಯ ಇಂತಹ ಆಯೋಜನೆ ಗ್ರಾಮೀಣ ಭಾಗದ ಸೊಗಡನ್ನು ಪಸರಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ಸ್ಥಳೀಯ ಕಲಾವಿದರಿಗೂ ಇದು ಮಾರ್ಗದರ್ಶಕವಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ಗಮನ ಸೆಳೆದ ಮೆರವಣಿಗೆ: ಗ್ರಾಮದ ಅರುಣ ಮಾರಮ್ಮ ದೇಗುಲದ ಮುಂಭಾಗದಿಂದ ಮಂಗಳವಾದ್ಯ, ಡೊಳ್ಳು ಕುಣಿತ, ಗೊರವರ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಭವ್ಯ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಹನಾ, ಮಹೇಶ, ಮಹಾದೇವ ಸ್ವಾಮಿ, ಶಿವಕುಮಾರ ಸ್ವಾಮಿ, ದೊಡ್ಡಗವಿ ಬಸಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಜೆ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಗಮನ ಸೆಳೆದವು. ಈ ವೇಳೆ ತಾಪಂ ಸದಸ್ಯೆ ಭಾಗ್ಯ ನಂಜಯ್ಯ, ಸಬ್ ರಿಜಿಸ್ಟ್ರರ್ ಮಹಾದೇವಯ್ಯ, ಮುಖಂಡರಾದ ಮಹದೇವ ನಾಯಕ, ಕೃಷ್ಣಯ್ಯ, ನಂಜಯ್ಯ, ಮಹೇಶ್ ರಂಗದೇಗುಲದ ಅಧ್ಯಕ್ಷ ಶಾಂತರಾಜು, ಕಲಾವಿದರಾದ ಶಿವಕುಮಾರ್, ಭಾಗ್ಯ, ಮಹಾದೇವ ಪ್ರಭು, ಗೀತಾ, ರಾಧಾ, ಪ್ರಕಾಶ್, ಸಿದ್ದರಜು, ನಾಗರಾಜು, ರವಿ, ರೂಪೇಶ, ಸುಶೀಲಾ, ಗೋವಿಂದರಾಜು, ಜಗದೀಶ್, ಕಲೆ ನಟರಾಜು ಹಾಜರಿದ್ದರು.