ಸರಿಸುಮಾರು ಒಂದೂವರೆ ವರ್ಷದ ಬಳಿಕ ರಾಜ್ಯದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಗಂಟೆಯ ಸದ್ದು ಶುರುವಾಗಿದೆ. ಬಿಕೋ ಎನ್ನುತ್ತಿದ್ದ ಶಾಲಾ ಕಾಲೇಜು ಪರಿಸರ, ತರಗತಿ ಕೊಠಡಿಗಳಿಗೆ ಜೀವಕಳೆ ಬಂದಿದೆ. ವಿದ್ಯಾರ್ಥಿಗಳು ಶಾಲೆಗೆ ಬರಲಾರಂಬಿಸಿದ್ದಾರೆ. ಭೌತಿಕ ತರಗತಿಗಳಲ್ಲಿ ಬೋಧನೆಯ ಜತೆಗೆ ಶೈಕ್ಷಣಿಕ ಚಟುವಟಿಕೆಯೂ ಚುರುಕುಗೊಂಡಿದೆ. ಶಾಲಾ ಕಾಲೇಜು ಆರಂಭದ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ತಳಿರು ತೋರಣ, ರಂಗೋಲಿ ಗಳೊಂದಿಗೆ ವಿದ್ಯಾರ್ಥಿಗಳಿಗೆ ಭವ್ಯಸ್ವಾಗತ ನೀಡಲಾಗಿತ್ತು. ಬಹುತೇಕ ಶಾಲಾ ಕಾಲೇಜುಗಳಲ್ಲಿ ಜನ ಪ್ರತಿನಿಧಿಗಳು ಶಿಕ್ಷಣ ಇಲಾಖೆಅಧಿಕಾರಿಗಳು ಎಸ್‌ಡಿಎಂಸಿ ಸದಸ್ಯರು, ಊರಿನ ಹಿರಿಯರು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ಶಾಲಾ ಕಾಲೇಜು ಆರಂಭ ವ್ಯವಸ್ಥಿತವಾಗಿ ನಡೆದಿದೆ. ವಿದ್ಯಾರ್ಥಿಗಳ ದಾಖಲಾತಿಯೂ ಚೆನ್ನಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ತಾಂತ್ರಿಕ ತಜ್ಞರ ಸಲಹೆಯಂತೆ ರೂಪಿಸಿದ್ದ ಮಾರ್ಗಸೂಚಿ ಅನ್ವಯ ಎಲ್ಲೆಡೆ ಕಠಿನ ನಿಯಮ ಪಾಲನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ, ಸ್ಯಾನಿಟೈಜೇಷನ್, ಮಾಸ್ಕ್, ದೇಹದ ಉಷ್ಣಾಂಶ ಪರೀಕ್ಷೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ. ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳು ಮಾತ್ರ ಆರಂಭವಾಗಿದ್ದರಿಂದ ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆಯಿತ್ತು. ಅದರಲ್ಲೂ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್, ಉಳಿದ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಇದ್ದುದ್ದ ರಿಂದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿತ್ತು. ಇದೇ ರೀತಿಯ ಸುರಕ್ಷಿತ ವ್ಯವಸ್ಥೆ ಮುಂದೆಯೂ ನಿರಂತರವಾಗಬೇಕು. ಪಾಲಕ, ಪೋಷಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿರುವುದರಿಂದ ಸರಕಾರ ಉಳಿದ ತರಗತಿಗಳನ್ನು ಶೀಘ್ರ ಆರಂಭಿಸುವ ಅಥವಾ ಆ ವಿದ್ಯಾರ್ಥಿಗಳಿಗೆ ಶಾಲಾವರಣದಲ್ಲಿ ವಿದ್ಯಾಗಮ ತರಗತಿ ನಡೆಸುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಬೇಕು.
ಕೊರೊನಾದಿಂದ ಶಿಕ್ಷಣ ಕ್ಷೇತ್ರಕ್ಕೆ ಭಾರಿ ಪೆಟ್ಟು ಬಿದ್ದಿದೆ. ನಿರಂತರ ಕಲಿಕೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಕಲಿಕೆಯೇ ಮರೆತಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಹಲವು ರೀತಿಯ ಕಾನೂನು ಬಾಹಿರ ಆಚರಣೆಗಳೂ ಹೆಚ್ಚಾಗುತ್ತಿವೆ. ಸದ್ಯ ಪ್ರೌಢಶಾಲೆ ಹಾಗೂ ಪಿಯು ಕಾಲೇ ಜುಗಳ ಆರಂಭವಾಗಿದೆ. ಉಳಿದ ತರಗತಿಗಳನ್ನು ಈಗಿರುವಷ್ಟೇ ಸುರಕ್ಷತೆ ಹಾಗೂ ಮುನ್ನೆಚ್ಚರಿಕ ಕ್ರಮಗಳೊಂದಿಗೆ ಶೀಘ್ರಾತಿಶೀಘ್ರ ಆರಂಭಿಸಿದಲ್ಲಿ, ವಿದ್ಯಾರ್ಥಿಗಳ ಕಲಿಕೆಯ ಅಂತರ ಕಡಿಮೆ ಮಾಡಲು ಸಾಧ್ಯವಿದೆ. ಸರಕಾರಿ ಶಾಲಾ ವ್ಯವಸ್ಥೆಯಲ್ಲಿ ಸುಮಾರು 45 ಲಕ್ಷ ಮಕ್ಕಳಿದ್ದಾರೆ. ಇವರಿಗೆ ಆನ್‌ಲೈನ್ ಶಿಕ್ಷಣ ಸಮರ್ಪಕವಾಗಿ ಸಿಗುತ್ತಿಲ್ಲ. ಸಂವೇದ ಹಾಗೂ ಪೂರ್ವ ಮುದ್ರಿತ ವೀಡಿಯೋ ತರಗತಿ ಇತ್ಯಾದಿಗಳಷ್ಟೇ ನಡೆಯುತ್ತಿದೆ. ಈ ಮಕ್ಕಳು ಶಾಲೆಗೆ ಬಂದು ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊ ಳ್ಳುವ ಜತೆಗೆ ನಿರಂತರ ಕಲಿಕೆಯಲ್ಲೂ ಮುಂದುವರಿಯುವಂತೆ ಆಗಬೇಕು.
9ರಿಂದ 12ನೇ ತರಗತಿ ವಿದ್ಯಾರ್ಥಿಗಳಲ್ಲಿನ ಉತ್ಸಾಹ, ಸಂಭ್ರಮ ಉಳಿದ ತರಗತಿಗಳ ಮಕ್ಕಳಲ್ಲೂ ಇದೆ. ಅದರಂತೆ ಸರಕಾರ ಉಳಿದ ಮಕ್ಕಳಿಗೆ ಸುರಕ್ಷಿತ ವ್ಯವಸ್ಥೆಯಲ್ಲಿ ತರಗತಿಗಳನ್ನು ಆರಂಭಿಸಬೇಕು. ಕನಿಷ್ಠ ವಾರದಲ್ಲಿ 3 ದಿನವಾದರೂ ಈ ಮಕ್ಕಳು ಶಾಲೆಗೆ ಬಂದು ಕಲಿಯುವಂತಾ ಗಬೇಕು. ನಿರಂತರ ಕಲಿಕೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ಸಿಗಲಿದೆ. ಸರಕಾರದ ಸುರಕ್ಷತ ಕ್ರಮದ ಜತೆಗೆ ಪಾಲಕ, ಹೆತ್ತವರು ಎಚ್ಚರಿಕೆ, ವಿದ್ಯಾರ್ಥಿಗಳ ಜಾಗೃತ ಪ್ರಜ್ಞೆಯೂ ಅತೀ ಅವಶ್ಯಕ.