Advertisement
ಶಾರದಾ ವಿಲಾಸ ವಿದ್ಯಾಸಂಸ್ಥೆಯಲ್ಲಿ ಆರಂಭಿಸಿರುವ ಅಡ್ವಾನ್ಸ್ ರಿಸರ್ಚ್ ಸೆಂಟರ್ ಮತ್ತು ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಪೋಷಕರು ತಮ್ಮ ಮಗುವನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಬೇಕು ಎಂಬ ಪ್ರತಿಷ್ಠೆ ಬಿಟ್ಟು, ಆರ್ಥಿಕವಾಗಿ ಶಕ್ತಿ ಇಲ್ಲದವರು ಸರ್ಕಾರಿ ಶಾಲೆಗೆ ಬನ್ನಿ, ಆಗ ಸರ್ಕಾರಿ ಶಾಲೆಗಳೂ ಸಬಲವಾಗುತ್ತವೆ ಎಂದರು.
Related Articles
Advertisement
ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ನಮ್ಮ ಮಗು ಇಂಗ್ಲಿಷ್ ಮಾಧ್ಯಮದಿಂದ ವಂಚಿತವಾಗಬಾರದು ಎಂಬುದು ಪೋಷಕರ ಆಸೆ. ಇದರಿಂದಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಶುರುವಾದಾಗ ಮಕ್ಕಳು ಸಿಗುತ್ತಾರೆ ಎಂಬ ಚರ್ಚೆಯೂ ಇದೆ. ಇದರ ಮಧ್ಯೆ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳೇ ಡಿಸ್ಟಿಂಕ್ಷನ್ ಪಡೆಯುತ್ತಿದ್ದಾರೆ. ಹೀಗಾಗಿ ತಂದೆ-ತಾಯಿಗಳು ಇಂಗ್ಲಿಷ್ ಮಾಧ್ಯಮದಲ್ಲೇ ಮಕ್ಕಳನ್ನು ಓದಿಸಬೇಕು ಎಂಬ ಪ್ರತಿಷ್ಠೆ ಬಿಡಬೇಕು ಎಂದು ಹೇಳಿದರು.
ಆಯ್ಕೆ ಮಾದರಿ ಪ್ರಶ್ನೆಪತ್ರಿಕೆಯಿಂದಾಗಿ ವಿದ್ಯಾರ್ಥಿಗಳು ಬರೆಯುವುದು ಕಡಿಮೆಯಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳೂ ಎಲ್ಲರ ಜತೆ ಸ್ಪರ್ಧೆಮಾಡಲಿ ಎಂಬ ಕಾರಣಕ್ಕೆ ಸ್ವಲ್ಪವಾದರೂ ಬರೆಯಲಿ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಳ್ಳೆಯ ಪ್ರಶೆ °ಪತ್ರಿಕೆ ರೂಪಿಸುತ್ತಿದ್ದೇವೆ ಎಂದರು. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್, ಶಾರದಾವಿಲಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಕೆ.ಶ್ರೀನಾಥ್ ಉಪಸ್ಥಿತರಿದ್ದರು.
ಶಾಲಾ ಅವಧಿಯಲ್ಲಿ ಬಸ್ ವ್ಯವಸ್ಥೆಗೆ ಚಿಂತನೆ: ಶಾಲಾ ಅವಧಿಯಲ್ಲಿ ನಗರ ಸಂಚಾರಿ ಬಸ್ ವ್ಯವಸ್ಥೆ ಮಾಡುವ ಉದ್ದೇಶವಿದೆ. ಗ್ರಾಮಾಂತರದಲ್ಲಿ ಶಾಲಾ ಮಕ್ಕಳಿಗಾಗಿಯೇ ಬಸ್ ಓಡಿಸುತ್ತೇವೆ. ಆದರೆ, ನಗರದ ಶಾಲೆಗಳು ಒಂದೇ ಸಮಯಕ್ಕೆ ಆರಂಭವಾಗಲ್ಲ, ಒಂದೇ ಸಮಯಕ್ಕೆ ಬಿಡುವುದಿಲ್ಲ. ಹೀಗಾಗಿ ಸಮಸ್ಯೆ ಇದೆ. ಈ ಬಗ್ಗೆ ಯೋಚಿಸುವುದಾಗಿ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ರಾಜ್ಯದಲ್ಲಿರುವ 60 ಸಾವಿರ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಸೌಕರ್ಯ ಕಲ್ಪಿಸಬೇಕಿದೆ. ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳಿಗೆ ಈ ಮೂಲಸೌಲಭ್ಯ ಕಲ್ಪಿಸಲಿದ್ದು, ನಂತರದಲ್ಲಿ ಖಾಸಗಿ ಶಾಲೆಗಳಿಗೂ ಈ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಂಸ್ಥೆಗೆ 158 ವರ್ಷ, ಮಹತ್ವದ ಹೆಜ್ಜೆ: ಶಾರದಾ ವಿಲಾಸ ವಿದ್ಯಾಸಂಸ್ಥೆಯು 158 ವರ್ಷ ನಡೆದು ಬಂದಿರುವುದು ಮಹತ್ವದ ಹೆಜ್ಜೆ. ಸಂಸ್ಥೆಯಲ್ಲಿ ಆರಂಭಿಸಿರುವ ಅಡ್ವಾನ್ಸ್ ರಿಸರ್ಚ್ ಸೆಂಟರ್ ಅನ್ನು ಮುಂಬರುವ ದಿನಗಳಲ್ಲಿ ಆಹಾರ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯವನ್ನಾಗಿ ವಿಸ್ತರಿಸಲಾಗುವುದು ಎಂದು ಶಾರದಾವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ತಿಳಿಸಿದರು.