ಬೆಂಗಳೂರು: ಸಾರ್ವಜನಿಕರ ಸಹಕಾರದಿಂದ ಮಾತ್ರ ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕಲು ಸಾಧ್ಯ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಚುನಾವಣಾ ಆಯೋಗದಿಂದ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ಇರುವ ಮತದಾರರ ಪಟ್ಟಿಯಲ್ಲಿ ಶೇ.1ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದಾರೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದೇವೆ. ಮತದಾರರ ಪಟ್ಟಿ ಪರಿಶೀಲನೆಗೆ ಸಾರ್ವಜನಿಕರು ಸಹಕರಿಸುವ ಮೂಲಕ ನಕಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಸದ್ಯ ಇರುವ ಮತದಾರರ ಪಟ್ಟಿಯಲ್ಲಿ ಲಿಂಗ ಅಸಮಾನತೆ ಸರಿಯಾಗಿದೆ. ಪುರುಷ – ಮಹಿಳೆ ಮತದಾರರ ಸಂಖ್ಯೆ ಸಾವಿರಕ್ಕೆ 979 ಇದೆ. ಯುವ ಮತದಾರರ ಸಂಖ್ಯೆಯ ನೋಂದಣಿಯಲ್ಲಿ ಸ್ವಲ್ಪ ಸಮಸ್ಯೆ ಇದೆ. ಅರ್ಹ ಯುವ ಮತದಾರರು 11ಲಕ್ಷಕ್ಕೂ ಅಧಿಕ ಇದ್ದಾರೆ. ಆದರೆ, ಈವರೆಗೂ 10.19ಲಕ್ಷ ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಯುವ ಮತದಾರರ ನೋಂದಣಿಗೆ ಹೆಚ್ಚಿನ ಮಹತ್ವ ನೀಡಲಿದ್ದೇವೆ ಎಂದು ಹೇಳಿದರು.
ಮತದಾರರು ಮತದಾರರನ ಗುರುತಿನ ಚೀಟಿಯಲ್ಲಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ ಅಥವಾ ಇನ್ಯಾವುದೇ ರೀತಿಯ ತಿದ್ದುಪಡಿ ಇತ್ಯಾದಿಗಳನ್ನು ಆನ್‌ಲೈನ್ ಮೂಲಕವೂ ಮಾಡಿಕೊಳ್ಳಬಹುದಾಗಿದೆ. ಚುನಾವಣಾ ಆಯೋಗದ ಸಿಟಿಜನ್ ಸರ್ವಿಸ್ ಸೆಂಟರ್‌ನ ಸದುಪಯೋಗ ಮಾಡಿಕೊಳ್ಳಬೇಕು. 6151 ಸಿಟಿಜನ್ ಸರ್ವಿಸ್ ಸೆಂಟರ್‌ಗಳಿವೆ ಅಲ್ಲಿಂದ ಮಾಹಿತಿ ಪಡೆಯಬಹುದು ಅಥವಾ 1950ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಭಿಯಾನ ಮೂಗಿದ 2020ರ ಜ.15ರೊಳಗೆ ಹೊಸ ಗುರುತಿನ ಚೀಟಿಯನ್ನು ನೀಡಲಿದ್ದೇವೆ ಎಂದರು.
ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಮಾತನಾಡಿ, ದೇಶಾದ್ಯಂತ ಈ ಅಭಿಯಾನ ನಡೆಯುತ್ತಿದೆ. ಯುವ ಮತದಾರರ ನೋಂದಣಿಗೆ ವಿಶೇಷ ಅದ್ಯತೆ ನೀಡಲಾಗುತ್ತದೆ. ಮನೆಮನೆಗೆ ಹೋಗಿ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.