ಕಲಬುರಗಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪ್ರತಿಪಕ್ಷವಾದ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮೇಲೆಯೇ ಗೂಂಡಾಗಿರಿ ಮಾಡುವಷ್ಟು ವ್ಯವಸ್ಥೆ ಕಟ್ಟು ಹೋಗಿದೆ. ಆದ್ದರಿಂದ ಬಿಜೆಪಿ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾಗಿದ್ದ ಬಿಜೆಪಿ ಮುಖಂಡ ರಮೇಶ ಜಾರಕಿಹೊಳಿ “ಸರ್ಕಾರವನ್ನೇ ಬೀಳಿಸಿದವ ನಾನು, ಸಿಡಿ ಪ್ರಕರಣವೇನು ಮಹಾ’ ಎನ್ನುವಂತ ಹೇಳಿಕೆ ನೀಡಿ ಬಹಿರಂಗವಾಗಿ ಕಾನೂನು ವ್ಯವಸ್ಥೆಗೆ ಸವಾಲು ಹಾಕುತ್ತಾರೆ. ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೇಲೆ ಗೂಂಡಾಗಳ ಮೂಲಕ ಹಲ್ಲೆ ಮಾಡಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಇದನ್ನು ಕಾನೂನು ಸುವ್ಯವಸ್ಥೆ ಎನ್ನಬೇಕಾ ಎಂದು ಪ್ರಶ್ನಿಸಿದರು. ಸಂತ್ರಸ್ತ ಯುವತಿ ತನಗೆ ರಮೇಶ ಜಾರಕಿಹೊಳಿಯಿಂದ ಜೀವ ಭಯವಿದೆ ಎಂದು ಹೇಳುತ್ತಿದ್ದಾರೆ.
ರಮೇಶ ವಿರುದ್ಧ ಗಂಭೀರವಾದ 376(ಸಿ) ಅಡಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣ ಬೇರೆಯವರ ಮೇಲೆ ದಾಖಲಾದರೆ ಸುಮ್ಮನೆ ಬಿಡುತ್ತಾರಾ? ಸ್ವತಃ ಸಂತ್ರಸ್ತೆ ದೂರು ಕೊಟ್ಟರೂ ರಮೇಶ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾನ ಮರ್ಯಾದೆ ಎಲ್ಲ ಗಾಳಿಗೆ ತೂರಿ ರಮೇಶ ರಕ್ಷಣೆಗೆ ಮಾನಗೇಡಿ ಸರ್ಕಾರ ನಿಂತಿದೆ ಎಂದು ವಾಗ್ಧಾಳಿ ನಡೆಸಿದರು. ಸಿಡಿ ಪ್ರಕರಣದಲ್ಲಿ ಅಧಿ ಕಾರದ ದುರ್ಬಳಕೆ ಆಗುತ್ತಿದೆ. ಎಸ್‌ಐಟಿ ರಮೇಶ ಜಾರಕಿಹೊಳಿ ಮತ್ತು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಆರೋಪಿ ಸ್ಥಾನದಲ್ಲಿರುವ ರಮೇಶನನ್ನು ಬಂ ಧಿಸುವುದು ಬಿಟ್ಟು, ಆತನ ಪರವಾಗಿ ಗೃಹ ಸಚಿವರು ಹೇಳಿಕೆ ಕೊಡುತ್ತಿದ್ದಾರೆ.
ಇದಕ್ಕಿಂತ ನಾಚಿಕಗೇಡಿತನದ ಸಂಗತಿ ಯಾವುದೂ ಇಲ್ಲ ಎಂದು ಟೀಕಿಸಿದರು. ತನ್ನ ಮೇಲಿನ ಆರೋಪ ಮುಚ್ಚಿಟ್ಟುಕೊಳ್ಳಲು ರಮೇಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇಡೀ ಪ್ರಕರಣವನ್ನು ಡಿ.ಕೆ. ಶಿವಕುಮಾರ ಅವರತ್ತ ತಿರಗಿಸುವ ಕುತಂತ್ರ ಮಾಡುತ್ತಿದ್ದಾರೆ. ಹೀಗಾಗಿ ತಕ್ಷಣ ರಮೇಶ ಜಾರಕಿಹೊಳಿ ಅವರನ್ನು ಬಂಧಿ ಸಬೇಕು. ಈಗಾಗಲೇ ಯುವತಿ ಹೇಳಿರುವಂತೆ ಹೈಕೋರ್ಟ್ ಮುಖ್ಯ ನಾಯಮೂರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಶರಣಪ್ರಕಾಶ ಹೇಳಿದರು. ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೊಡ, ಶರಣು ಮೋದಿ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶಿವಾನಂದ ಹೊನಗುಂಟಿ ಇದ್ದರು