Advertisement

ವಚನ ಉಳಿಸಿ ಬೆಳೆಸುವ ಕಾರ್ಯವಾಗಲಿ

06:10 PM Nov 08, 2021 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ವಿರಕ್ತಮಠ, ಶೂನ್ಯಪೀಠ ಪರಂಪರೆ ಹೊಂದಿದ ಸಾವಿರಾರು ಮಠಗಳು, ಕೋಟ್ಯಂತರ ಭಕ್ತರಿದ್ದರೂ ಶರಣರ ವಿಚಾರಗಳು ಹಾಗೂ ಕ್ಷೇತ್ರಗಳನ್ನು ನಿರೀಕ್ಷಿತ ಮಟ್ಟದಲ್ಲಿ ಬೆಳೆಸಲು ಆಗಿಲ್ಲವೆಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಉಣಕಲ್ಲದ ಶ್ರೀ ಚನ್ನಬಸವಣ್ಣನವರ ದೇವಸ್ಥಾನ ಆವರಣದಲ್ಲಿ ಚನ್ನಬಸವ ಸಾಗರ ರಕ್ಷಣಾಭಿವೃದ್ಧಿ ಸಮಿತಿ ವತಿಯಿಂದ ಚಿನ್ಮಯಜ್ಞಾನಿ ಶ್ರೀ ಚನ್ನಬಸವಣ್ಣನವರ ಜಯಂತಿ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಶರಣರ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನ್ಯಧರ್ಮದಲ್ಲಿ ಸ್ವಾಮಿಗಳಿಲ್ಲ. ತ್ಯಾಗಿಗಳು ಇಲ್ಲ. ಆದರೂ ಅವರ ಧರ್ಮಗಳು ಜಾಗತಿಕ ಮಟ್ಟದಲ್ಲಿ ಬೆಳೆದಿವೆ. ವಚನ ಸಾಹಿತ್ಯ ಬದುಕಿದರೆ ನಮ್ಮ ವೈದಿಕ ಧರ್ಮಕ್ಕೆ ಕುತ್ತು ಬರುತ್ತದೆ ಎಂದು ಭಾವಿಸಿ ಜಾತಿವಾದಿಗಳು, ಪುರೋಹಿತ ಶಾಹಿಗಳು ವಚನ ಸಾಹಿತ್ಯ ನಾಶಪಡಿಸುವ ಉದ್ದೇಶ ಹೊಂದಿದ್ದರು.

ಆದರೆ ಶರಣರ ಉದ್ದೇಶವು ಬಸವಣ್ಣನವರ ಪ್ರಾಣವಾಗಿರುವ ವಚನ ಸಾಹಿತ್ಯ ರಕ್ಷಿಸಬೇಕೆಂದು 12ನೇ ಶತಮಾನದಲ್ಲಿ ಚನ್ನಬಸವಣ್ಣನವರು 12 ಸಾವಿರ ಜಂಗಮರು, ಶರಣರನ್ನು ಕರೆದುಕೊಂಡು ಕಲ್ಯಾಣದಿಂದ ವಚನ ಸಾಹಿತ್ಯವನ್ನು ತಲೆ ಮೇಲೆ ಹೊತ್ತುಕೊಂಡು ಊರೆಲ್ಲ ಸಂಚರಿಸಿ ಸಹ್ಯಾದ್ರಿಬೆಟ್ಟ ಉಳವಿಗೆ ಬಂದರು. ವಚನ ಸಾಹಿತ್ಯ ಸುಡಬೇಕೆನ್ನುವ ಜಾತಿವಾದಿಗಳ ಉದ್ದೇಶ ತಡೆಯಲು ಶರಣರು ಸಾಹಿತ್ಯ ವಚನ ಗ್ರಂಥಗಳನ್ನು ರಕ್ಷಿಸಲು ಹೊತ್ತು ನಡೆದರು. ಕಾರಣ ಶರಣರ ವಚನಗಳನ್ನು ಉಳಿಸಿ, ಬೆಳೆಸುವ ಕಾರ್ಯ ನಾವೆಲ್ಲ ಮಾಡೋಣ ಎಂದರು.

ವೀರಾಪುರ ರಸ್ತೆ ಎರಡೆತ್ತಿನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಚನ್ನಬಸವಣ್ಣನವರು ಉಳವಿಗೆ ಹೋಗುವಾಗ ಉಣಕಲ್ಲ ಕೆರೆ ತಪ್ಪಲಿನಲ್ಲಿದ್ದರು. ಅವರು ನೀಡಿರುವ ಗ್ರಂಥಗಳನ್ನು ಓಲೆ ಮಠದಲ್ಲಿ ಇಡಲಾಗಿತ್ತು. ಮೂರುಸಾವಿರ ಮಠದಲ್ಲೂ ಸಾಕಷ್ಟು ವಚನ ಗ್ರಂಥಗಳಿವೆ. ಅದರ ಸಂಶೋಧನೆ ನಡೆಯುತ್ತಿದೆ. ಶರಣರ ವಚನಗಳ ಕುರಿತು ಜನರನ್ನು ಜಾಗೃತಿಗೊಳಿಸುವ ಕಾಲ ಬಂದಿದೆ. ಇಲ್ಲಿ ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಅವಶ್ಯ. ಆ ಮೂಲಕ ಪುಣ್ಯಕ್ಷೇತ್ರವನ್ನಾಗಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

Advertisement

ಗಂಗಾಧರ ದೊಡವಾಡ ಪ್ರಾಸ್ತಾವಿಕ ಮಾತನಾಡಿ, ಉಣಕಲ್ಲ ಕೆರೆಯ ಚನ್ನಬಸವ ಸಾಗರದಲ್ಲಿ ಚನ್ನಬಸವಣ್ಣವರ 196 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಬೇಕೆಂಬ ಸಂಕಲ್ಪ ಮಾಡಲಾಗಿದೆ. ಇದಕ್ಕೆ ಅಂದಾಜು 1.96 ಕೋಟಿ ರೂ. ವೆಚ್ಚ ತಗಲುವ ಸಾಧ್ಯತೆಯಿದೆ. ಭಕ್ತರಿಂದ ಸಂಗ್ರಹಿಸಿದ ದೇಣಿಗೆಯಿಂದ ಮೂರ್ತಿ ನಿರ್ಮಿಸಲಾಗುವುದು ಎಂದರು.

ಗಣ್ಯರಿಂದ ಚನ್ನಬಸವ ಸಾಗರ ನಾಮಫಲಕ ಅನಾವರಣಗೊಳಿಸಲಾಯಿತು. ಶರಣರ ಸಭೆಗೂ ಮೊದಲು ವಚನ ಸಾಹಿತ್ಯದ ಮೆರವಣಿಗೆ, ಬಸವ ಧ್ವಜಾರೋಹಣ, ಧರ್ಮಗುರು ಬಸವೇಶ್ವರ ಪೂಜೆ, ಸಾಮೂಹಿಕ ಪ್ರಾರ್ಥನೆ, ವಚನ ಪಠಣ ನಡೆಯಿತು. ಸಂಕಲ್ಪ ಶೆಟ್ಟರ, ಮಹಾದೇವಪ್ಪ ಮೆಣಸಿನಕಾಯಿ, ಸಿ.ಬಿ. ಮರಿಗೌಡರ, ಅಜ್ಜಪ್ಪ ಹೊರಕೇರಿ, ಡಾ| ನಿತಿನಚಂದ್ರ ಹತ್ತಿಕಾಳ, ಅಜ್ಜಪ್ಪ ಬೆಂಡಿಗೇರಿ, ಮಂಜುನಾಥ ಗುಡಿಮನಿ, ಆರ್‌.
ಜೆ. ಬೆಳ್ಳೇನವರ ಮೊದಲಾದವರಿದ್ದರು. ಕೆ.ಎಸ್‌. ಕೋರಿಶೆಟ್ಟರ ನಿರೂಪಿಸಿದರು.

ಮಹಾತ್ಮರು ಜನಿಸಿ ಈ ಭಾಗದಲ್ಲಿ ಓಡಾಡಿರುವುದು ನಮ್ಮೆಲ್ಲರ ಪುಣ್ಯ. ಹನಿಹನಿ ಕೂಡಿದರೆ ಹಳ್ಳವೆನ್ನುವಂತೆ ನಾವೆಲ್ಲ ಸೇರಿ ಚನ್ನಬಸವಣ್ಣನವರ 196 ಅಡಿ ಎತ್ತರದ ಮೂರ್ತಿ ನಿರ್ಮಿಸೋಣ.
ಷಡಕ್ಷರಿ ಸ್ವಾಮೀಜಿ, ರಾಜ ವಿದ್ಯಾಶ್ರಮ,
ಹಳೇಹುಬ್ಬಳ್ಳಿ ಆನಂದನಗರ ರಸ್ತೆ

ಉಣಕಲ್ಲ ಕೆರೆಗೆ ಚನ್ನಬಸವ ಸಾಗರ ಎಂಬ ನಾಮಕರಣದ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಆಗಿತ್ತು. ಆದರೆ ಕಾರಣಾಂತರಗಳಿಂದ ಅದು ಆಗಿರಲಿಲ್ಲ. ಈಗ ಸಂಘಟನೆಯು ಆ ಹೆಸರು ಇಟ್ಟಿರುವುದು ಶ್ಲಾಘನೀಯ. ಚನ್ನಬಸವಣ್ಣವರ ದೇವಸ್ಥಾನದ ಅಭಿವೃದ್ಧಿ ಮತ್ತು ಅವರ ಮೂರ್ತಿ ಪ್ರತಿಷ್ಠಾಪನೆಗೆ ನಮ್ಮೆಲ್ಲರ ಸಹಕಾರ ನೀಡಲಾಗುವುದು.
ಬಸವಲಿಂಗ ಸ್ವಾಮಿಗಳು, ರುದ್ರಾಕ್ಷಿ ಮಠ

Advertisement

Udayavani is now on Telegram. Click here to join our channel and stay updated with the latest news.

Next