Advertisement

ಒಡಿಶಾ ಸಚಿವ ದಾಸ್‌ ಹತ್ಯೆಯ ನಿಗೂಢತೆ ಬಯಲಾಗಲಿ

12:58 AM Jan 31, 2023 | Team Udayavani |

ಭದ್ರತೆಗಾಗಿ ಇರುವ ಸಿಬಂದಿಯಿಂದಲೇ ರಾಜಕೀಯ ನಾಯಕರ ಹತ್ಯೆ ನಿಜಕ್ಕೂ ಕಳವಳಕಾರಿಯಾಗಿರುವ ಸಂಗತಿಯೇ ಹೌದು. ಇಂಥ ವಿಚಾರ ಉಲ್ಲೇಖಿಸುವುದಕ್ಕೆ ಕಾರಣವೂ ಇದೆ. ಒಡಿಶಾದ ಆಡಳಿತ ಪಕ್ಷ ಬಿಜು ಜನತಾ ದಳದ ಹಿರಿಯ ಮುಖಂಡ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬ ಕಿಶೋರ್‌ದಾಸ್‌ ಅವರನ್ನು ಝಾರ್ಸುಗುಡಾದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆಯಿಂದ ಹಲವು ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ.

Advertisement

ಸಹಾಯಕ ಸಬ್‌-ಇನ್‌ಸ್ಪೆಕ್ಟರ್‌ ಗೋಪಾಲ್‌ ದಾಸ್‌ ಅತ್ಯಂತ ಸಮೀಪದಿಂದ ಸಚಿವರನ್ನು ಗುರಿಯಾಗಿ ಇರಿಸಿಕೊಂಡು ಎರಡು ಬಾರಿ ಗುಂಡು ಹಾರಿಸಿದ್ದಾನೆ.

ಇದರಿಂದಾಗಿ ಅವರ ಎದೆ ಮತ್ತು ಶ್ವಾಸಕೋಶಕ್ಕೆ ಹಾನಿಯಾಗಿತ್ತು. ಭುವನೇಶ್ವರದಲ್ಲಿನ ಆಸ್ಪತ್ರೆಯ ವೈದ್ಯರು ಪ್ರಯತ್ನ ಮಾಡಿದ್ದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಶ.

ಬಿಜು ಜನತಾ ದಳದಿಂದಲೇ ಮೂರು ಬಾರಿ ಝಾರ್ಸುಗುಡಾ ಕ್ಷೇತ್ರದ ಶಾಸಕರಾಗಿರುವ ನಬ ಕಿಶೋರ್‌ದಾಸ್‌ ಅವರು ಸಿಎಂ ನವೀನ್‌ ಪಟ್ನಾಯಕ್‌ ಸಂಪುಟದಲ್ಲಿ ಸಚಿವರಾಗಿದ್ದವರು. ನವೀನ್‌ ಪಟ್ನಾಯಕ್‌ ಪ್ರಭಾವ ಇದ್ದ ಹೊರತಾಗಿಯೂ ಕೂಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು ಎಂದರೆ ದಾಸ್‌ ಅವರು ಒಡಿಶಾದಲ್ಲಿ ಹೊಂದಿರುವ ವರ್ಚಸ್ಸು ಎಂಥದ್ದು ಎಂಬುದನ್ನು ವಿವರಿಸಬೇಕಾಗಿಲ್ಲ.

ಸದ್ಯ ಪೊಲೀಸ್‌ ವಶದಲ್ಲಿ ಇರುವ ಸಹಾಯಕ ಸಬ್‌-ಇನ್‌ಸ್ಪೆಕ್ಟರ್‌ಗೆ ಮಾನಸಿಕವಾಗಿ ಆರೋಗ್ಯ ಚೆನ್ನಾಗಿ ಇರಲಿಲ್ಲ. ಅದಕ್ಕಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಬಗ್ಗೆ ಅವರ ಕುಟುಂಬದ ಸದಸ್ಯರೇ ಹೇಳಿಕೊಂಡಿದ್ದಾರೆ. ಅಂಥವರಿಗೆ ಸಂಪುಟದ ಪ್ರಮುಖ ಸಚಿವರು ಝಾರ್ಸುಗುಡಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಮವಸ್ತ್ರ ಧರಿಸಿ, ಪೊಲೀಸ್‌ ಪೋಸ್ಟ್‌ ಒಂದರ ಉಸ್ತುವಾರಿಯನ್ನು ಕೊಟ್ಟಿದ್ದರ ಬಗ್ಗೆ ಮತ್ತು ಅವರಿಗೆ ಸರ್ವಿಸ್‌ ರಿವಾಲ್ವರ್‌ ನೀಡಲಾಗಿದ್ದ ಕುರಿತು ಪ್ರಶ್ನೆಗಳು ಎದ್ದಿವೆ.

Advertisement

ಸಾಮಾನ್ಯವಾಗಿ ಆರೋಗ್ಯ ಹದಗೆಟ್ಟಾಗಲೇ ಸಚಿವರ ಭೇಟಿ ವೇಳೆ ಇರುವ ಭದ್ರತಾ ವ್ಯವಸ್ಥೆಯ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೀಡಲು ಪೊಲೀಸ್‌ ಇಲಾಖೆ ಹಿಂದೇಟು ಹಾಕುತ್ತದೆ. ಅಂಥ ಸಂದರ್ಭದಲ್ಲಿ ಮಾನಸಿಕವಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದ ಅಧಿಕಾರಿಗೆ ಪೊಲೀಸ್‌ ಪೋಸ್ಟ್‌ನ ನೇತೃತ್ವ ಮತ್ತು ಸರ್ವಿಸ್‌ ರಿವಾಲ್ವರ್‌ ನೀಡಿದ ನಿರ್ಧಾರವೇ ಪ್ರಶ್ನಾರ್ಹ. ಅದಕ್ಕೆ ಪೂರಕವಾಗಿ ಸಚಿವ ದಾಸ್‌ ಹತ್ಯೆ ಪ್ರಕರಣವನ್ನು ಸಿಬಿಐ ಮೂಲಕ ನಡೆಸಬೇಕು ಎಂಬ ಆಗ್ರಹ ಈಗ ಒಡಿಶಾದಲ್ಲಿ ಕೇಳಿ ಬರಲಾರಂಭಿಸಿದೆ.

ಸದ್ಯ ಒಡಿಶಾ ಕ್ರೈಮ್‌ ಬ್ರ್ಯಾಂಚ್‌ ತನಿಖೆಯ ಹೊಣೆಯನ್ನು ವಹಿಸಿಕೊಂಡಿದೆ. ಇದುವರೆಗೆ ಸಚಿವರ ಮೇಲೆ ಪೊಲೀಸ್‌ ಅಧಿಕಾರಿ ಯಾವ ಕಾರಣಕ್ಕೆ ಗುಂಡು ಹಾರಿಸಿದರು, ಪ್ರಕರಣದ ಹಿಂದೆ ಏನಾದರೂ ಸಂಚು ಇದೆಯೇ ಸೇರಿದಂತೆ ಹಲವು ಪ್ರಶ್ನೆಗಳಿಗೆ ಪ್ರಾಥಮಿಕ ಉತ್ತರ ಕಂಡುಕೊಳ್ಳಲು ಸದ್ಯ ಇರುವ ತನಿಖಾ ತಂಡಕ್ಕೆ ಸಾಧ್ಯವಾಗಲಿಲ್ಲ. ಕುತೂಹಲಕಾರಿ ಸಂಗತಿ ಎಂದರೆ ಸದ್ಯ ಪೊಲೀಸ್‌ ವಶದಲ್ಲಿ ಇರುವ ಎಎಸ್‌ಐ ಕೂಡ ಕರ್ತವ್ಯದಲ್ಲಿ ಅಪ್ರತಿಮರೇ ಆಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ 18 ಬಾರಿ ಪೊಲೀಸ್‌ ಪದಕಗಳು, ಎಂಟು ಬಾರಿ ನಗದು ಪುರಸ್ಕಾರವನ್ನು ಗೆದ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಚೋದನೆ ಇಲ್ಲದೆಯೇ ಗುಂಡು ಹಾರಿಸಿದ್ದಾರೆ ಎಂದಾದರೆ ಸಮಗ್ರ ತನಿಖೆಯೇ ಆಗಬೇಕಾಗುತ್ತದೆ.

ರಾಜಕೀಯದಲ್ಲಿ ಪ್ರತಿಸ್ಪರ್ಧಿಯನ್ನು ನಿವಾರಿಸಬೇಕು ಎಂದಾದರೆ, ಹತ್ಯೆ ಮಾಡುವ ಪರಿಪಾಠವೂ ಇದೆ. ನಿಜಕ್ಕೂ ಸದರಿ ಪ್ರಕರಣದಲ್ಲಿ ಆ ಶಂಕೆಯೇ ನಿಜವಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಕಪ್ಪು ಚುಕ್ಕೆಯಾದಂತೆ ಎಂದು ವಿಷಾದಿಂದ ಹೇಳಬೇಕಾಗುತ್ತದೆ.

ಸಚಿವರ ಹತ್ಯೆಯ ಹಿಂದೆ ಏನೇ ವಿಚಾರ ಇರಲಿ, ಅದು ಕಾನೂನು ಪ್ರಕಾರವಾಗಿ ರುವ ತನಿಖೆಯ ಮೂಲಕ ದೇಶಕ್ಕೆ ಗೊತ್ತಾಗಬೇಕು. ಕೃತ್ಯವೆಸಗಿದವರಿಗೆ ಮತ್ತು ಅದರ ಹಿಂದಿನ ಸೂತ್ರಧಾರರು ಇದ್ದಲ್ಲಿ ಅಂಥವರಿಗೂ ಶಿಕ್ಷೆಯಾಗಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next