Advertisement

ಮಠಗಳು ವಿಶ್ವ ಮಾನವ ಪರಿಕಲ್ಪನೆಗೆ ಒತ್ತು ನೀಡಲಿ

08:03 PM Apr 05, 2021 | Team Udayavani |

ದಾವಣಗೆರೆ : ಮಠಗಳು ಮತೀಯ ವ್ಯವಸ್ಥೆ ಗಟ್ಟಿಗೊಳಿಸದೆ ವಿಶ್ವ ಮಾನವ ಪರಿಕಲ್ಪನೆ ದಿಕ್ಕಿನಲ್ಲಿ ಸಾಗುವಂತಾಗಬೇಕು ಎಂದು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ರವಿ ಹಂಜ್‌ರವರ ರ ಠ ಈ ಕ ಮತ್ತು ಅಗಣಿತ ಅಲೆಮಾರಿ ಕೃತಿಗಳ ಲೋಕಾರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಠಗಳಿರುವುದು ಸಮಾಜದ ಸುಧಾರಣೆಗಾಗಿ. ಮತೀಯ ವ್ಯವಸ್ಥೆ ಗಟ್ಟಿಗೊಳಿಸುವುದರಿಂದ ಮಠಗಳ ಮೂಲ ಉದ್ದೇಶ ಸಫಲವಾಗುವುದಿಲ್ಲ. ಮಠಗಳು ವಿಶ್ವಪ್ರಜ್ಞೆ ಪಾಲನೆಯ ಜೊತೆಗೆ ಆ ನಿಟ್ಟಿನಲ್ಲಿ ಮುನ್ನಡೆದಾಗ ಸಣ್ಣ ಮಠ ಕೂಡ ದೊಡ್ಡ ಮಠವಾಗಿ ಹೊರ ಹೊಮ್ಮುತ್ತದೆ. ಮಾನವೀಯ ಪ್ರಜ್ಞೆ ಪಾಲಿಸುವಂತದ್ದು ಮತ್ತು ಬೆಳೆಸುವಂತದ್ದು ಮಠಗಳ ಹೊಣೆಗಾರಿಕೆ ಆಗಿರಬೇಕು ಎಂದರು.

ಎಲ್ಲ ಇದ್ದವರು ಭಿಕ್ಷುಕ ವೃತ್ತಿಯೊಂದಿಗೆ ಗುರುತಿಸಿಕೊಳ್ಳುವುದು ಅಷ್ಟೊಂದು ಸುಲಭದ್ದಲ್ಲ. ಗೌತಮ ಬುದ್ಧ ಅರಸೊತ್ತಿಗೆಯಲ್ಲಿದ್ದುಕೊಂಡು ಸುಖ ಸಂಪತ್ತು ಅನುಭವಿಸಬಹುದಿತ್ತು. ಆದರೆ ಗೌತಮ ಬುದ್ಧ ಲೌಕಿಕ ಅನುಭವಕ್ಕೆ ಅರಸೊತ್ತಿಗೆಯ ತ್ಯಜಿಸಿ ಬೀದಿಗೆ ಬಂದು ದಾರ್ಶನಿಕನಾಗುತ್ತಾನೆ. ಇಂತಹ ಪ್ರಯೋಗ ಭಾರತದಲ್ಲಿ ಮಾತ್ರ ಕಂಡು ಬರಲು ಸಾಧ್ಯ. ಭಾರತ ದೇಶ ಎಲ್ಲ ರೀತಿಯ ಪ್ರಯೋಗ ಶಾಲೆ ಇದ್ದಂತೆ ಎಂದು ತಿಳಿಸಿದರು.

ಗೌತಮ ಬುದ್ಧನಿಗೆ ಭಾರತಕ್ಕಿಂತಲೂ ಇತರೆ ದೇಶಗಳಲ್ಲಿ ಸಾಕಷ್ಟು ಮನ್ನಣೆ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ. ಗೌತಮ ಬುದ್ಧನ ಮಾದರಿಯಲ್ಲೇ ಅಲ್ಲಮರು ಸಹ ಅನೇಕ ರಹಸ್ಯ ಭೇದಿಸಿದರು. ಆದರೆ, ಗೌತಮ ಬುದ್ಧನಿಗೆ ದೊರೆತಂತಹ ಪ್ರಾಮುಖ್ಯತೆ ಅಲ್ಲಮರಿಗೆ ದೊರೆ  ಯದೇ ಇರುವುದನ್ನು ಕಾಣಬಹುದು ಎಂದರು. ಜೀವನದಲ್ಲಿ ಸುತ್ತಾಟದಿಂದ ಅನುಭವ ದೊರೆಯುತ್ತದೆ. ದೇಶ ಸುತ್ತಿ ನೋಡು ಎನ್ನುವಂತೆ ಸುತ್ತಾಟದಿಂದ ಗಳಿಸಿದ ಅನುಭವವನ್ನು ಕಥೆ, ಸಾಹಿತ್ಯದ ಮೂಲಕ ಕಟ್ಟಿಕೊಡುವಂತಾಗಬೇಕು. ಅದು ಅನೇಕರಿಗೆ ಜೀವನದ ಬಗೆಗಿನ ಒಳ ನೋಟ ನೀಡುತ್ತದೆ.

ಅದರಿಂದ ಜೀವನ ಎತ್ತರಕ್ಕೆ ಸಾಗುತ್ತದೆ. ಜಯದೇವ ಶ್ರೀಗಳು ಸುತ್ತಾಟದ ಮೂಲಕ ಸಮಾಜ ಕಟ್ಟುವಿಕೆಯ ಕೆಲಸ ಮಾಡಿದವರು ಎಂದು ಸ್ಮರಿಸಿದರು. ರವಿ ಹಂಜ್‌ ಅವರು ಅಮೆರಿಕದಲ್ಲಿದ್ದುಕೊಂಡು ದಾವಣಗೆರೆಯ ಬಗ್ಗೆ ಆತ್ಮಕಥನ ಬರೆದಿರುವುದು ಅವರ ದೊಡ್ಡತನ. ನಮ್ಮ ಪ್ರಕಾರ ದಾವಣಗೆರ ಒಂದು ಪುಟ್ಟ ಭಾರತ. ವಿಶ್ವದಲ್ಲಿ ಇರುವುದು ಭಾರತದಲ್ಲಿದೆ. ಅದೇ ರೀತಿ ಭಾರತದಲ್ಲಿರುವುದು ದಾವಣಗೆರೆಯಲ್ಲಿ ಇದೆ ಎಂದು ವಿಶ್ಲೇಷಿಸಿದರು.

Advertisement

ಕೃತಿಗಳ ಲೋಕಾರ್ಪಣೆ ಮಾಡಿದ ಚಲನಚಿತ್ರ ನಿರ್ದೇಶಕ ಬಿ.ಎಸ್‌. ಲಿಂಗದೇವರು ಮಾತನಾಡಿ, ಕನ್ನಡದಲ್ಲಿ ಮಹಾಕಾವ್ಯ ಎಂದಾಕ್ಷಣ ರಾಮಾಯಣ, ಮಹಾಭಾರತ ಮತ್ತು ಆದರಲ್ಲಿನ ಪಾತ್ರಗಳು ಥಟ್ಟನೆ ನೆನಪಿಗೆ ಬರುತ್ತವೆ. ಆದೇ ರೀತಿ ಜನಸಾಮಾನ್ಯರ ಬಗ್ಗೆ ಯಾವ ಕಾರಣಕ್ಕೆ ಮಹಾಕಾವ್ಯಗಳು ಇರುವುದಿಲ್ಲ ಎಂಬ ಪ್ರಶ್ನೆ ಸಾಹಿತ್ಯ ವಲಯ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲೂ ಕಾಡಲಾರಂಭಿಸಿದೆ. ಮನುಷ್ಯನ ಸಹಜ ಗುಣದಿಂದ ಮುಕ್ತ ಗೊಳಿಸುವಂತಹ ಶಕ್ತಿ ಸಾಹಿತ್ಯಕ್ಕೆ ಇದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿದರು.

ಹಿರಿಯ ಸಾಹಿತಿ ಪ್ರೊ| ಮಲೆಯೂರು ಗುರುಸ್ವಾಮಿ ರ ಠ ಈ ಕ ಹಾಗೂ ಪ್ರೊ| ಮೊರಬದ ಮಲ್ಲಿಕಾರ್ಜುನ ಅಗಣಿತ ಅಲೆಮಾರಿ ಕೃತಿ ಕುರಿತು ಮಾತನಾಡಿದರು. ಹಿರಿಯ ವಾಗ್ಮಿ ಡಾ| ಶಾಂತಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಎಪಿಎಂಸಿ ನಿರ್ದೇಶಕ ಮುದೇಗೌಡ್ರ ಗಿರೀಶ್‌, ಕೃತಿಕಾರ ರವಿ ಹಂಜ್‌ ಇತರರು ಇದ್ದರು. ಡಾ. ಆನಂದ ಋಗ್ವೇದಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next