Advertisement

ವಿಚಾರಣ ಅದಾಲತ್‌ ಆರಂಭಶೂರತ್ವ ಆಗದಿರಲಿ

01:26 AM Mar 29, 2022 | Team Udayavani |

ಕರ್ನಾಟಕ ಸರಕಾರದ ಕೆಲವು ನೌಕರರ ದುರ್ನಡತೆ, ಸರಿಯಾದ ಸಮಯಕ್ಕೆ ಕೆಲಸ ಕಾರ್ಯಗಳನ್ನು ಜನರಿಗೆ ಮಾಡಿ ಕೊಡದೆ ಸತಾಯಿಸು ತ್ತಿದ್ದಾರೆ ಎಂಬ ಆರೋಪ ಹೊಸದೇನಲ್ಲ. ಇಂಥ ಆರೋಪಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಜಿಲ್ಲೆಗಳಲ್ಲಿ ಸರಕಾರಿ ನೌಕರರ ವಿರುದ್ಧ ಇರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ಇತ್ಯರ್ಥಗೊಳಿಸಲು ತಿಂಗಳಿಗೊಮ್ಮೆ ಇಲಾಖಾ ವಿಚಾರಣೆ ಅದಾಲತ್‌ ನಡೆಸಲು ರಾಜ್ಯ ಸರಕಾರದ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೊನೆಗೂ ಮನಸ್ಸು ಮಾಡಿದೆ. ಅದರ ಮೊದಲ ಹಂತವಾಗಿ ಮುಂದಿನ ತಿಂಗಳು ಮೊದಲ ಹಂತದ ವಿಚಾರಣೆ ನಡೆಯಲಿದೆ.

Advertisement

ಸರಕಾರ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಇರುವ ಆರೋಪಗಳ ಮೇಲೆ ತನಿಖೆ ನಡೆಸಿ, ಒಂದು ವೇಳೆ ನಿಜಕ್ಕೂ ಅವರು ತಪ್ಪಿತಸ್ಥರು ಎಂದು ಸಾಬೀತಾದರೆ ಅವರಿಗೆ ಶಿಕ್ಷೆ ವಿಧಿಸಬೇಕಾದದ್ದೇ. ಆದರೆ ಅದು ಆರಂಭ ಶೂರತ್ವ ಆಗಬಾರದು ಮತ್ತು ಕೇವಲ ಪ್ರಕರಣ ಗಳನ್ನು “ಇತ್ಯರ್ಥಗೊಳಿಸಿ ಮುಕ್ತಾಯ’ ಮಾಡುವ ಹಂತಕ್ಕೆ ಮಾತ್ರ ಸೀಮಿತವಾದರೆ ಸರಕಾರದ ಏನು ಯೋಚಿಸಿದೆಯೋ ಅದು ಈಡೇರು ವುದಿಲ್ಲ ಎನ್ನುವುದು ಸ್ಪಷ್ಟ. ಉದಾಹರಣೆಗೆ ಹೇಳುವುದಿದ್ದರೆ, ಕೆಲ ದಿನಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ರಾಜ್ಯಾದ್ಯಂತ ಹದಿನೆಂಟು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ, ನಗದು ವಶ ಪಡಿಸಿಕೊಂಡಿತ್ತು. ಮಾಧ್ಯಮಗಳಲ್ಲಿ ಆ ಸುದ್ದಿ ಆದ್ಯತೆಯಲ್ಲಿ ಪ್ರಕಟವೂ ಆಯಿತು. ಕಳೆದ ಐದು ವರ್ಷಗಳಲ್ಲಿ ಎಸಿಬಿ ವತಿಯಿಂದ ಸರಕಾರಿ ಅಧಿಕಾರಿಗಳ ವಿರುದ್ಧ 310 ಕೇಸುಗಳು ದಾಖಲಾಗಿವೆ. ಈ ಪೈಕಿ 63ರಲ್ಲಿ ತನಿಖೆ ಮುಕ್ತಾಯಗೊಂಡಿದೆ. 223 ಕೇಸುಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎಸಿಬಿ ಶಿಫಾರಸು ಮಾಡಿದೆ. 371 ಸರಕಾರಿ ನೌಕರರು ಮತ್ತು ಅಧಿಕಾರಿಗಳ ಮನೆ-ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ರಾಜ್ಯ ಸರಕಾರ ಭ್ರಷ್ಟರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿತ್ತು. ಆದರೆ ಹೇಳಿಕೆ ಮತ್ತು ವಾಸ್ತವವಾಗಿ ಇರುವಂಥ ಅಂಶಕ್ಕೆ ಅಜಗಜಾಂತರ ವ್ಯತ್ಯಾಸ ಇದೆ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿ ಬೇರೂರಿ ಬಿಟ್ಟಿದೆ. ಸರಳ ರೀತಿಯ ಪ್ರಮಾಣ ಪತ್ರ ಪಡೆಯುವುದರಿಂದ ತೊಡಗಿ, ದೊಡ್ಡ ಮಟ್ಟದ ಕಾಮಗಾರಿ ಬಿಲ್‌ ಮಂಜೂರು ಮಾಡಿಸುವ ವರೆಗೆ ಸರಕಾರದ ಇಲಾಖೆಗಳಲ್ಲಿನ ಕೆಲವು ಅಧಿಕಾರಿಗಳು ಸುಸೂತ್ರವಾಗಿ ಅದನ್ನು ನಡೆಸಿಕೊಡುವುದಿಲ್ಲ ಎನ್ನು ವುದು ಹಗಲಿನಷ್ಟೇ ಸತ್ಯವಾಗಿರುವ ವಿಚಾರ.

ಹೀಗಾಗಿ ಪ್ರತೀ ತಿಂಗಳು ಆಯಾ ಇಲಾಖೆಗಳ ವತಿಯಿಂದ ವಿಚಾರಣ ಅದಾಲತ್‌ ಕೈಗೊಂಡರೆ, ಅದರ ಬಿಸಿ ನೇರವಾಗಿ ಸರಕಾರಿ ನೌಕರರಿಗೆ ತಟ್ಟುತ್ತದೆ. ಸರಕಾರಿ ಕೆಲಸ ಎಂದರೆ ದೇವರ ಕೆಲಸ ಎಂದು ವಿಧಾನಸೌಧದ ಎದುರು ಕೆತ್ತಲಾಗಿದೆ. ಅಂಥ ಮನೋಭಾವವನ್ನು ಅವರಲ್ಲಿ ಮೂಡಿಸಬೇಕಾಗಿದೆ. ಜತೆಗೆ ವಿಚಾರಣೆ ನಡೆಸುವ ಪ್ರಕ್ರಿಯೆಯನ್ನೂ ಕ್ಷಿಪ್ರವಾಗಿ ನಡೆಸಬೇಕು. ಹೀಗಾಗಿ ಅದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಅದನ್ನು ಸಾರ್ಥಕವಾಗಿ ಜಾರಿಗೊಳಿಸುವುದು ಅಗತ್ಯ. ಇಲ್ಲದೇ ಇದ್ದರೆ ಹತ್ತರ ಜತೆಗೆ ಹನ್ನೊಂದು ಎಂಬಂತೆ ಆದೀತೇ ಹೊರತು ಬೇರೆ ಏನನ್ನೂ ನಿರೀಕ್ಷೆ ಮಾಡಲು ಅಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next