ಧಾರವಾಡ: ಜೀವನದಲ್ಲಿ ಆಶಾವಾದದ ಪ್ರತಿಬಿಂಬವಾಗಿ ಬರೆದ ಕಾವ್ಯಗಳು ಹೃದಯಕ್ಕೆ ತಟ್ಟಿ ಓದುಗನಲ್ಲಿ ಹೃದಯ ಶ್ರೀಮಂತಿಕೆಯನ್ನು ಉಂಟು ಮಾಡಬೇಕು ಎಂದು ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರೊ| ನಾಗವೇಣಿ ಗಾಂವಕರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಆಯೋಜಿಸಿದ್ದ ಶಿಕ್ಷಕ, ಕವಿ ಶಿವಕುಮಾರ ಬ. ಜಮದಂಡಿ ಅವರ “ಹೂ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರೇಮದ ಬೆಳಕು ಒಡಲೊಳಗೆ ಜ್ವಲಿಸುವಂತೆ ಪ್ರಕೃತಿಯ ಆರಾಧನೆ ಮಾಡುವಂತಹ ತನ್ಮಯತೆಗೆ ಸಾಕ್ಷಿ ಪ್ರಜ್ಞೆಯಾಗಿರುವ ಜಮದಂಡಿಯವರ ಕಾವ್ಯ ಪ್ರಯೋಗ ಅದ್ಭುತವಾಗಿದೆ.
ಮನುಷ್ಯನ ಸಾರ್ಥಕ ಬದುಕು ಹೇಗಿರಬೇಕೆಂಬುದನ್ನು ಮನೋಜ್ಞವಾಗಿ ಓದುಗರ ಮನಮುಟ್ಟುವಂತೆ ರಚಿಸಿದ್ದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರುದ್ರಣ್ಣ ಚಿಲುಮಿ ಮಾತನಾಡಿ, ಇಂದಿನ ಸಂಕೀರ್ಣ ಸಮಾಜದಲ್ಲಿ ಜಾಗತೀಕರಣದ ಪ್ರಭಾವ ಹಾಗೂ ಅಂತರ್ಜಾಲದ ಮಹಿಮೆಯಿಂದ ಯುವ ಜನಾಂಗದಲ್ಲಿ ಸಾಹಿತ್ಯ ರಚನೆಯ ಕೊರತೆಯಾಗಿದ್ದು ವಿಷಾದನೀಯ.
ಕವಿ ಬರೆದ ಕವಿತೆಗಳನ್ನು ಓದಿದರೆ ಮನಸು ಅರಳುವಂತಾಗಬೇಕೇ ವಿನಃ ನರಳುವಂತಾಗಬಾರದು. ಶಿವಕುಮಾರ ಜಮದಂಡಿಯವರು ಜೀವನದಲ್ಲಿ ನೋವುಂಡು ನಗುವಿನಿಂದ ಕಾವ್ಯ ಬರೆದು ಗುರು ಸ್ಮರಣೆ ಮಾಡಿದ ಸಾತ್ವಿಕ ಮನೋಭಾವನೆಯ ಸರಳ ಸಜ್ಜನಿಕೆಯ ಸಾಧಕರಾಗಿದ್ದಾರೆ ಎಂದರು. ಜಮದಂಡಿಯವರ ಮಾತಾ-ಪಿತೃಗಳಾದ ಬಸವರಾಜ ಜಮದಂಡಿ ಹಾಗೂ ಅನ್ನಪೂರ್ಣಮ್ಮನವರು ಕೃತಿ ಬಿಡುಗಡೆ ಮಾಡಿದರು.
ನಿಂಗಣ್ಣ ಕುಂಟಿ, ಡಾ| ರಾಜಶೇಖರ ಜಮದಂಡಿ, ಪ್ರಕಾಶ ಅಂಗಡಿ, ಲಕ್ಷ್ಮಣ ಬಸ್ತವಾಡ, ದಯಾನಂದ ಬಣಕಾರ, ಆನಂದ ಸಿದ್ದಲಿಂಗಯ್ಯ ಅಳಿಮಟ್ಟಿ, ರವಿ ಜಿ. ದೇವಣ್ಣ, ನಾಗರಾಜ ಕೊಲ್ಲೂರಿ, ರವಿ ಭೋವಿ, ಎಂ.ಎಸ್. ನರೇಗಲ್ ಇದ್ದರು. ಗುರು ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.