Advertisement

ಜನಸಾಮಾನ್ಯರ ಬದುಕು ಹಸನಾಗಲಿ

11:23 PM Jan 01, 2020 | mahesh |

ಆರ್ಥಿಕತೆಯ ಏರುಗತಿಯನ್ನು ಉತ್ತೇಜಿಸುವಂಥ ವಿತ್ತೀಯ ನೀತಿಯನ್ನು ಅನಾವರಣಗೊಳಿಸುವುದು ತಕ್ಷಣದ ಕ್ರಮವಾಗಬೇಕು. ಇದಾಗಬೇಕಿದ್ದರೆ ವಾಸ್ತವವನ್ನು ಇದ್ದ ಹಾಗೇ ಒಪ್ಪಿಕೊಳ್ಳುವ ಪ್ರಾಮಾಣಿಕತೆಯನ್ನು ಮತ್ತು ಸಮಸ್ಯೆಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ಬಗೆಹರಿಸಿಕೊಂಡು ಹೋಗುವ ಮುತ್ಸದ್ದಿತನವನ್ನು ತೋರಿಸಬೇಕು.

Advertisement

ಮೂಲಸೌಕರ್ಯ ಯೋಜನೆಗಳಿಗೆ 102 ಲಕ್ಷ ಕೋ.ರೂ.ಯ ಬೃಹತ್‌ ಕೊಡುಗೆಯನ್ನು ಘೋಷಿಸುವ ಮೂಲಕ ಸರಕಾರ ಹೊಸ ವರ್ಷವನ್ನು ಭರ್ಜರಿಯಾಗಿಯೇ ಸ್ವಾಗತಿಸಿದೆ. ಕಳೆದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಮೂಲಸೌಕರ್ಯ ವಲಯಕ್ಕೆ ಬೃಹತ್‌ ಮೊತ್ತದ ಪ್ಯಾಕೇಜ್‌ ನೀಡುವುದಾಗಿ ಹೇಳಿದ್ದರು. ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅದನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದಾರೆ. ಮಂದಗತಿಯಲ್ಲಿರುವ ಆರ್ಥಿಕತೆಯನ್ನು ಚೇತರಿಸುವಂತೆ ಮಾಡಲು ಸರಕಾರದ ಕಡೆಯಿಂದ ಇಂಥದ್ದೊಂದು ನಿರ್ಧಾರದ ಅಗತ್ಯವಿತ್ತು.

ಆದರೆ 102 ಲಕ್ಷ ಕೋ.ರೂ.ಯಷ್ಟು ಬೃಹತ್‌ ಮೊತ್ತವನ್ನು ಹೊಂದಿಸುವುದು ಎಲ್ಲಿಂದ ಎಂಬುದನ್ನು ಸಚಿವೆ ತಿಳಿಸಿಲ್ಲ. ಬರೀ ದೊಡ್ಡ ಮೊತ್ತದ ಪ್ಯಾಕೇಜ್‌ಗಳನ್ನು ಘೋಷಿಸುವುದರಿಂದ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಅದನ್ನು ಕಾರ್ಯರೂಪಕ್ಕಿಳಿಸುವ ವಿಧಾನಗಳನ್ನೂ ತಿಳಿಸಬೇಕು. ಮುಖ್ಯವಾಗಿ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಒಂದು ಸ್ಪಷ್ಟತೆಯಿರಬೇಕು. ಈಗಾಗಲೇ ನಮ್ಮ ಆರ್ಥಿಕತೆ ಹಿಂಜರಿತದ ಸುಳಿಗೆ ಸಿಲುಕಿ ಕಂಗಾಲಾಗಿದೆ. ವಿತ್ತೀಯ ಕೊರತೆ 7.2 ಲಕ್ಷ ಕೋ. ರೂ. ತಲುಪಿದೆ. ಮೂಲಸೌಕರ್ಯ ಕ್ಷೇತ್ರದ ಹೂಡಿಕೆ ದೂರಗಾಮಿ ನೆಲೆಯಲ್ಲಿ ಫ‌ಲಗಳನ್ನು ನೀಡಬಹುದು. ಆದರೆ ಈಗ ಆಗಬೇಕಿರುವುದು ಆರ್ಥಿಕತೆಯನ್ನು ತಕ್ಷಣಕ್ಕೆ ಉತ್ತೇಜಿಸಬಹುದಾದ ದೃಢ ಕ್ರಮಗಳು. ಈ ನಿಟ್ಟಿನಲ್ಲಿ ಪೂರಕ ನೀತಿಗಳನ್ನು ರಚಿಸುವತ್ತ ಮೊದಲು ಗಮನ ಹರಿಸುವ ಅಗತ್ಯವಿದೆ.

ಈ ನೀತಿಗಳು ಮಾರುಕಟ್ಟೆಯಲ್ಲಿ ಬೇಡಿಕೆಗಳನ್ನು ಹೆಚ್ಚಿಸುವಂತಿರಬೇಕು. ಈ ಮೂಲಕ ಉದ್ಯೋಗ ಸೃಷ್ಟಿಯಾಗಬೇಕು. ದೇಶ ಈಗ ಎದುರಿಸುತ್ತಿರುವ ಮುಖ್ಯ ಸಮಸ್ಯೆಯೇ ಬೇಡಿಕೆಯಲ್ಲಾಗಿರುವ ಕುಸಿತ ಮತ್ತು ನಿರುದ್ಯೋಗದ ಹೆಚ್ಚಳ. 2017-18ರಲ್ಲಿ ಕಳೆದ ನಾಲ್ಕು ದಶಕದಲ್ಲಿಯೇ ನಿರುದ್ಯೋಗ ಪ್ರಮಾಣ ಅಧಿಕವಾಗಿತ್ತು ಎನ್ನುವುದನ್ನು ಸರಕಾರದ ಅಂಶಗಳೇ ಬಹಿರಂಗಪಡಿಸಿವೆ. ರಫ್ತು ಪ್ರಮಾಣವೂ ಕುಸಿದಿದೆ. ಹೀಗೆ ಆರ್ಥಿಕತೆಯ ಮುಖ್ಯ ಅಂಗಗಳೆಲ್ಲವೂ ಹಿನ್ನಡೆಯಲ್ಲಿರುವುದರಿಂದ ಸುಧಾರಣಾ ಕ್ರಮಗಳೆಲ್ಲ ವಿಫ‌ಲಗೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ 2020ರಲ್ಲಿ ಸರಕಾರ ಸ್ಪಷ್ಪವಾದ ಗುರಿಗಳನ್ನು ಇಟ್ಟುಕೊಂಡು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಆರ್ಥಿಕತೆಯ ಏರುಗತಿಯನ್ನು ಉತ್ತೇಜಿಸುವಂಥ ವಿತ್ತೀಯ ನೀತಿಯನ್ನು ಅನಾವರಣಗೊಳಿಸುವುದು ತಕ್ಷಣದ ಕ್ರಮವಾಗಬೇಕು. ಇದಾಗಬೇಕಿದ್ದರೆ ವಾಸ್ತವವನ್ನು ಇದ್ದ ಹಾಗೇ ಒಪ್ಪಿಕೊಳ್ಳುವ ಪ್ರಾಮಾಣಿಕತೆಯನ್ನು ಮತ್ತು ಸಮಸ್ಯೆಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ಬಗೆಹರಿಸಿಕೊಂಡು ಹೋಗುವ ಮುತ್ಸದ್ದಿತನವನ್ನು ತೋರಿಸಬೇಕು. ಹೇಳಿಕೆಗಳು ಮತ್ತು ಘೋಷಣೆಗಳಿಂದ ಕಹಿ ವಾಸ್ತವಗಳನ್ನು ಬಹುಕಾಲ ಬಚ್ಚಿಟ್ಟುಕೊಳ್ಳುವುದು ಅಸಾಧ್ಯ.

Advertisement

ನಾವೀಗ ಹೊಸ ವರ್ಷ ಮಾತ್ರವಲ್ಲ ಹೊಸ ದಶಕದ ಹೊಸಿಲಲ್ಲಿದ್ದೇವೆ. ಕಳೆದ ದಶಕದ ಪೂರ್ವಾರ್ಧ ಅಸ್ಥಿರ ರಾಜಕೀಯ ಸ್ಥಿತಿಯಿಂದಾಗಿ ನೀತಿ ಸ್ಥಾಗಿತ್ಯದ ಸಮಸ್ಯೆಯಲ್ಲಿ ತೊಳಲಾಡಿತು. ಉತ್ತರಾರ್ಧದಲ್ಲಿ ರಾಜಕೀಯ ಸ್ಥಿರತೆ ಸಿಕ್ಕಿದರೂ ಆರ್ಥಿಕತೆ ಅನೇಕ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು. ರೂಪಾಯಿ ಅಪಮೌಲ್ಯ, ಜಿಎಸ್‌ಟಿ ಜಾರಿ ಹೀಗೆ ಹಲವು ಹೊಸತನಗಳಿಗೆ ತೆರೆದುಕೊಂಡ ಕಾರಣ ಭಾರೀ ವೇಗದ ಅಭಿವೃದ್ಧಿಗೆ ಕಡಿವಾಣ ಬಿತ್ತು. ಹೊಸ ದಶಕದಲ್ಲೂ ಇದು ಪುನರಾವರ್ತನೆಯಾಗಬಾರದು. ಈಗಲೂ ಕೇಂದ್ರದಲ್ಲಿ ರಾಜಕೀಯ ಸ್ಥಿರತೆಯಿದೆ. ಆದರೆ ಈ ಸ್ಥಿರತೆ ಅಧಿಕಾರವನ್ನು ಸ್ಥಿರಗೊಳಿಸುವುದಕ್ಕೆ ಮಾತ್ರ ಬಳಕೆಯಾಗದೆ ದೇಶದ ಸಮೃದ್ಧಿಗೆ ಚಾಲಕ ಶಕ್ತಿಯಾಗಬೇಕು. ಅಗತ್ಯ ವಸ್ತುಗಳು ಬೆಲೆ ಏರಿಕೆ ಸಹಿತ ಹಲವು ಸಮಸ್ಯೆಗಳನ್ನು ಜನರನ್ನು ಕಿತ್ತು ತಿನ್ನುತ್ತಿವೆ. ಕನಿಷ್ಠ ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಕೂಡ ಸಾಧ್ಯವಾಗಿಲ್ಲ. ಇದರ ಜೊತೆಗೆ ಗಾಯದ ಮೇಲೆ ಬರೆ ಎಂಬಂತೆ ಹೊಸ ವರ್ಷದಲ್ಲೇ ರೈಲು ಟಿಕೆಟ್‌ ದರ ಮತ್ತು ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಲಾಗಿದೆ. ಪೆಟ್ರೋಲು ಬೆಲೆ ಏರುಗತಿ ಪಡೆದುಕೊಂಡು ಬಹಳ ದಿನಗಳಾಯಿತು. ಜನರ ನಿತ್ಯದ ಬವಣೆಗಳನ್ನು ಬಗೆಹರಿಸುವತ್ತಲೂ ಆಳುವವರು ತುರ್ತಾಗಿ ಗಮನ ಹರಿಸುವ ಅಗತ್ಯವಿದೆ. ಮೊದಲ ಅವಧಿಯ ಸಾಧನೆ -ವೈಫ‌ಲ್ಯಗಳು ಏನೇ ಇದ್ದರೂ ಬಿಜೆಪಿಗೆ ಜನರು ಎರಡನೇ ಬಾರಿ ನಿಚ್ಚಳ ಬಹುಮತವನ್ನು ನೀಡಿದ್ದಾರೆ. ಜನರಿಟ್ಟ ಈ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ ಅವರ ಬದುಕನ್ನು ಹಸನುಗೊಳಿಸುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next