Advertisement

ಸರ್ಕಾರ ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂದಿಸಲಿ

01:02 PM Apr 04, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಎಲ್ಲ ವರ್ಗದವರಂತೆ ಪತ್ರಿಕಾ ವಿತರಕರಿಗೂ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಒತ್ತಾಯಿಸಿದರು.

Advertisement

ನಗರದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಅಂಗವಾಗಿ ಜಯದೇವ ವೃತ್ತದಿಂದ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದ ಅವರು, ಮಳೆ, ಚಳಿ, ಬಿಸಿಲು, ಕೊರೊನಾ ಏನಿದ್ದರೂ ಪ್ರತಿ ನಿತ್ಯ ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವಂತಹ ಪತ್ರಿಕಾ ವಿತರಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದರು.

ಪತ್ರಿಕೆಗಳ ಓದುಗರೇ ವಿತರಕರ ಅನ್ನದಾತರು. ಪತ್ರಿಕೆಯೇ ನಮ್ಮ ಜೀವನ ಹಾಗೂ ಜೀವಾಳವಾಗಿದೆ. ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸುತ್ತಿದೆ. ಅದರಂತೆಯೇ ಪತ್ರಿಕಾ ವಿತರಕರಿಗೂ ಸಹ ನ್ಯಾಯ ಒದಗಿಸಬೇಕು. ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವ ವಿತರಕರನ್ನು ಸರ್ಕಾರ ದಯವಿಟ್ಟು ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಪತ್ರಿಕಾ ವಿತರಕರು ಎಲ್ಲಿಯೂ, ಯಾವಾಗಲೂ ಉದ್ಘಟತನ ಪ್ರದರ್ಶನ ಮಾಡಿಲ್ಲ. ಎಲ್ಲರ ಹೋರಾಟ ಗಳನ್ನು ನೋಡಿಕೊಂಡು ಬಂದಿರುವವರು ನಾವು. ಹೋರಾಟ, ಏನೇ ಇರಲಿ ಸುದ್ದಿಗಳನ್ನು ಪ್ರತಿದಿನ ಮನೆ ಮನೆಗೆ ತಲುಪಿಸುತ್ತೇವೆ. ಕೋವಿಡ್‌ ಸಂದರ್ಭದಲ್ಲಿ ಪತ್ರಿಕೆ ಕೊಳ್ಳುವವರು, ಮನೆಗೆ ಹಾಕಿಸಿಕೊಳ್ಳುವವರು ಕೂಡಾ ಪತ್ರಿಕೆಗಳನ್ನು ಬೇಡ. ಕೊರೊನಾ ಭಯ ಬಿಟ್ಟು ಪತ್ರಿಕೆಗಳನ್ನು ಓದುವ ಮೂಲಕ ನಮ್ಮಂತಹ ಪತ್ರಿಕಾ ವಿತರಕರಿಗೆ ನೆರವಾಗಲಿ ಎಂದರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ದಯವಿಟ್ಟು ಪತ್ರಿಕೆಗಳನ್ನು ಕೊಂಡು ಓದಿರಿ ಪತ್ರಿಕೆಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂಬ ಉದ್ದೇಶದಿಂದ ಮೊದಲ ಹಂತದ ಈ ಜಾಥಾ ಮಾಡಿದ್ದೇವೆ. ನಮ್ಮ ಜಾಥಾ ಯಶಸ್ವಿಯಾಗಿದೆ. ಸಂಯಮದಿಂದ ಭಾಗವಹಿಸಿರುವ ವಿತರಕರು ಅಭಿನಂದನಾರ್ಹರು ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಜಾಥಾದಲ್ಲಿ ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್‌.ಚಂದ್ರು, ಖಜಾಂಚಿ ಅರುಣಕುಮಾರ್‌, ಬಂಕಾಪುರದ ಚನ್ನಬಸಪ್ಪ, ರಮೇಶ್‌ ಜೆ. ವತನ್‌, ನಿಂಗಪ್ಪ, ಎ.ಆರ್‌. ಕೃಷ್ಣಮೂರ್ತಿ, ಮಂಜುನಾಥ, ಎಸ್‌. ಕೆ. ಪ್ರಕಾಶ್‌, ದಿನೇಶ ಬಾಬು, ರವಿಪ್ರಸಾದ, ಶಿವು, ಪ್ರಕಾಶ, ಬಸವರಾಜ, ಬಿ.ಲೋಕೇಶ್‌, ಸುಧಾಕರ, ಅಣ್ಣಪ್ಪ, ಹರೀಶ, ಆನಂದ, ಪ್ರದೀಪ, ಪಿ.ಪ್ರಕಾಶ, ಆನಂದ, ಕುಮಾರಸ್ವಾಮಿ, ಶಂಕರ್‌ ಇತರರು ಇದ್ದರು. ಜಯದೇವ ವೃತ್ತದಿಂದ ಪ್ರಾರಂಭವಾದ ಜಾಥಾ ಪ್ರವಾಸಿ ಮಂದಿರ ರಸ್ತೆ, ಪಿ.ಬಿ.ರಸ್ತೆ, ಹಳೆ ಬಸ್‌ ನಿಲ್ದಾಣ, ಗಾಂಧಿ ಸರ್ಕಲ್‌, ಅಶೋಕ ರಸ್ತೆ, ಹದಡಿ ರಸ್ತೆ, ವಿದ್ಯಾರ್ಥಿ ಭವನದವರೆಗೆ ನಡೆಯಿತು.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಎಲ್ಲ ವರ್ಗದವರಿಗೂ ಸಿಹಿ, ಬೊಂಬಾಯಿ ಮಿಠಾಯಿ ಕೊಟ್ಟಿತು. ಆದರೆ ಪತ್ರಿಕಾ ವಿತರಕರಿಗೆ ಕಹಿ ಹಾಗಲಕಾಯಿ ಕೊಟ್ಟಿತು. ನಮ್ಮ ಮೇಲೆ ಇಷ್ಟೊಂದು ನಿರ್ಲಕ್ಷ್ಯ, ತಾತ್ಸಾರ ಮನೋಭಾವ ಬೇಡ. – ಕೆ. ಶಂಭುಲಿಂಗ, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next