Advertisement

ಸರ್ಕಾರ ಹೆಚ್ಚಿನ ಸೌಲಭ್ಯ ಕಲ್ಪಿಸಲಿ

05:53 PM May 01, 2020 | Suhan S |

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುವಾರ ಮತ್ತೆ 11 ಕೋವಿಡ್ 19 ಸೋಂಕಿನ ಪ್ರಕರಣಗಳು ಖಚಿತವಾಗಿದ್ದು ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿರೇ ಬಾಗೇವಾಡಿಯ ಎಲ್ಲ ಜನರ ಆರೋಗ್ಯ ತಪಾಸಣೆ ನಡೆಯಬೇಕು ಮತ್ತು ಅಲ್ಲಿನ ಜನರಿಗೆ ಎಲ್ಲ ರೀತಿಯ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಒತ್ತಾಯಿಸಿದ್ದಾರೆ.

Advertisement

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿರೇ ಬಾಗೇವಾಡಿಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿವೆ. ಕಳೆದ 15 ದಿನದಲ್ಲಿ 4 ಬಾರಿ ನಾನು ಅಲ್ಲಿಗೆ ಹೋಗಿದ್ದೇನೆ. ಶಾಸಕನಾಗಿ ನನ್ನ ಜವಾಬ್ದಾರಿ ಮಾಡುತ್ತಿದ್ದೇನೆ. ಆದರೆ ಸೀಲ್‌ಡೌನ್‌ದಿಂದ ಅಲ್ಲಿಯ ಜನರಿಗೆ ತುಂಬಾ ತೊಂದರೆಯಾಗಿದೆ. ಮಾತ್ರ ಅಕ್ಕಿ ಮತ್ತು ಗೋಧಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಎಣ್ಣೆ, ಕಾಳು ಕಡಿ, ಹಾಲು ಮತ್ತಿತರ ಸಾಮಗ್ರಿಗಳ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ ಎಂದರು.

ಹಿರೇ ಬಾಗೇವಾಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಬೆಳಗ್ಗೆ ಕೆಲಸ ಮಾಡಿ ರಾತ್ರಿ ಊಟ ಮಾಡಬೇಕಾದ ಪರಿಸ್ಥಿತಿ ಬಹಳಷ್ಟು ಜನರಿಗಿದೆ. 600 ಜನ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವವರಿದ್ದಾರೆ. ದೈನಂದಿನ ಜೀವನ ನಡೆಸುವುದು ಅವರಿಗೆಲ್ಲ ಕಷ್ಟವಾಗಿದೆ. ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಹಲವಾರು ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲ. ಇದಕ್ಕೆಲ್ಲ ವ್ಯವಸ್ಥೆಯಾಗಬೇಕು ಎಂದು ಅವರು ಹೇಳಿದರು.

ಗ್ರಾಮದ ಪ್ರತಿ ಮನೆಗೆ ಹಾಲಿನ ವ್ಯವಸ್ಥೆಯಾಗಬೇಕು. ದನಕರುಗಳಿಗೆ ಮೇವು ಪೂರೈಕೆಯಾಗಬೇಕು. ಮೂಲಭೂತ ಸೌಲಭ್ಯ ಒದಗಿಸಬೇಕು. ಕೆಳಮಟ್ಟದ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು ಎಂದರು.

ಗ್ರಾಮದಲ್ಲಿ ಮನೆಗಳು ಬಹಳ ಹತ್ತಿರ ಇದೆ. ಹಾಗಾಗಿ ಎಚ್ಚರಿಕೆ ಮತ್ತು ಸಮರೋಪಾದಿಯಲ್ಲಿ ಕೆಲಸಗಳಾಗಬೇಕು ಎಂದು ಹೇಳಿದ ಅವರು, ಹಿರೇಬಾಗೇವಾಡಿ ಜನರ ಸೇವೆಗೆ ನಾನು ದಿನದ 24 ಗಂಟೆಯೂ ಸಿದ್ದನಿದ್ದೇನೆ. ಏನೇ ಸಮಸ್ಯೆ ಇದ್ದರೂ ಯಾವುದೇ ಸಮಯದಲ್ಲಿ ಜನರು ಸಂಪರ್ಕಿಸಬಹುದು ಎಂದು ಧೈರ್ಯ ತುಂಬಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next