ಚಳ್ಳಕೆರೆ: ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆ ಹಾಗೂ ವೇದಾವತಿ ನದಿ ಪಾತ್ರದಲ್ಲಿ ಹರಿದ ನೀರಿನ ಪರಿಣಾಮ ಮರಳು ಸಾಕಷ್ಟು ಪ್ರಮಾಣದಲ್ಲಿ ನದಿಯಲ್ಲಿದೆ. ಸರ್ಕಾರ ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಮರಳು ಸಾಗಾಣಿಕೆಯಾಗದಂತೆ ಜಾಗ್ರತೆ ವಹಿಸಿ ರೈತರಿಗೆ ನೆರವಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಒತ್ತಾಯಿಸಿದರು.
ತಾಲೂಕಿನ ಗಡಿ ಭಾಗದಲ್ಲಿರುವ ತೊರೆಬೀರನಹಳ್ಳಿ, ಗೊರ‌್ಲತ್ತು ಮೊದಲಾದ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ್ದ ಅವರು, ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಕಳೆದ ಕೆಲವು ವರ್ಷಗಳ ಹಿಂದೆಯೇ ರೈತರ ಪರವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದೆ. ಈ ಭಾಗ ಬರಗಾಲ ಪೀಡಿತ ಪ್ರದೇಶವಾಗಿದ್ದು, ಅಪರೂಪಕ್ಕೆ ಜಲ ಸಂಪತ್ತು ಹೆಚ್ಚಿದೆ. ಜಲ ಸಂಪತ್ತು ಹೆಚ್ಚಳವಾಗಲು ನದಿಯಲ್ಲಿನ ಮರಳು ಕಾರಣ. ಮರಳು ಎತ್ತಿದರೆ ಮತ್ತೆ ರೈತ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಹಳೆ ಟೆಂಡರ್ ರದ್ದುಪಡಿಸಿ ರೈತರ ನೆರವಿಗೆ ಧಾವಿಸಬೇಕು ಎಂದರು.
ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ| ನಂಜುಂಡಸ್ವಾಮಿ ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರು ಪ್ರತಿ ನಿತ್ಯ ಮರಳು ಸಾಗಾಟ ತಡೆಯಲು ಹೋರಾಟ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಅ ಧಿಕಾರಿಗಳನ್ನು ಹೊರತುಪಡಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಭಾಗಕ್ಕೆ ನೀರು ತರಿಸಲು ನಿರಂತರ ಹೋರಾಟ ನಡೆಸಿದ ಶಾಸಕ ಟಿ. ರಘುಮೂರ್ತಿಯವರು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಉಪ ತಹಶೀಲ್ದಾರ್ ಸಂಧ್ಯಾ, ವೃತ್ತ ನಿರೀಕ್ಷಕ ಕೆ. ಸಮೀವುಲ್ಲಾ, ಜಿಯಾಲಾಜಿಸ್ಟ್ ಕುಮಾರ್, ಕಂದಾಯಾಧಿಕಾರಿ ಮೋಹನ್, ಕಾಂಗ್ರೆಸ್ ಮುಖಂಡ ಚನ್ನಕೇಶವ, ಚೌಳೂರು ಪ್ರಕಾಶ್, ಟಿ. ಗೋಪಾಲಕೃಷ್ಣ, ತಿಪ್ಪಮ್ಮ, ಎಚ್. ರಂಗಸ್ವಾಮಿ, ರಾಧಮ್ಮ, ಆರ್. ವೀರಭದ್ರ, ಆರ್. ಪ್ರೇಮ, ದುರುಗಪ್ಪ, ವಿ. ಮಂಜುಳಾ, ಟಿ.ಎಸ್. ಹನುಮಂತರಾಯ, ಸಿ. ಕವಿತಾ, ಆರ್. ರಾಜಪ್ಪ, ವೀಣಾ ಮತ್ತಿತರರು ಇದ್ದರು.
ಡಿಸಿ ಜತೆ ಚರ್ಚಿಸಿ ಸೂಕ್ತ ತೀರ್ಮಾನ
ಮರಳು ಸಾಗಾಟ ಮಾಡಲು ಜಿಲ್ಲಾಡಳಿತ ಈ ಹಿಂದೆಯೇ ಅನುಮತಿ ನೀಡಿದೆ. ಖಾಸಗಿ ಗುತ್ತಿಗೆದಾರರು ಅನುಮತಿ ಪಡೆದಿದ್ದು ನಿಯಮದ ಪ್ರಕಾರ ಅಷ್ಟು ಪ್ರಮಾಣದ ಮರಳನ್ನು ಸಾಗಾಟ ಮಾಡಲು ಇಲಾಖೆ ಅನುಮತಿ ನೀಡಬೇಕು. ಆದರೆ ರೈತ ಸಮುದಾಯ ಮತ್ತು ಶಾಸಕರು ಮರಳು ಸಾಗಾಟ ತಡೆಯುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿ ರಾಮ್ ಜೀ ನಾಯ್ಕ ಭರವಸೆ ನೀಡಿದರು.