Advertisement
ಪ್ರಮುಖ ಮೂರು ಪಕ್ಷಗಳು ಮತದಾರರ ಮೇಲೆ ಭರವಸೆಯ ಸುರಿಮಳೆಗೈದಿವೆ. ಅಧಿಕಾರಕ್ಕೆ ಬಂದ 24 ತಾಸಿನೊಳಗಾಗಿ ರೈತರ ಸಾಲಮನ್ನಾ, ಒಂದು ವರ್ಷದೊಳಗೆ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ. ಇಂಥ ದೊಡ್ಡ ಭರವಸೆಗಳ ಜತೆಗೆ ಹುಡಿಪುಡಿ ಆಶ್ವಾಸನೆಗಳನ್ನು ಎಲ್ಲ ವರ್ಗಗಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಘೋಷಿಸಲಾ ಗಿದೆ. ಈ ರೀತಿ ಆಶ್ವಾಸನೆ ನೀಡುವಾಗ ಸಮಾಜವನ್ನು ಸಾಕಷ್ಟು ವಿಭಾಗಿಸಿ ಆಯಾ ವಿಭಾಗದ ದೌರ್ಬಲ್ಯ ಅಥವಾ ಅಸಹಾಯಕತೆ ಯನ್ನು ಎತ್ತಿ ತೋರಿಸಿ, ಅವುಗಳನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಈಗಿನ ತಂತ್ರ. ದುರದೃಷ್ಟವೇನೆಂದರೆ ಯಾವುದೇ ರಾಜಕೀಯ ಪಕ್ಷ ಸಮಾಜವನ್ನು ಪ್ರಜಾಸತ್ತಾತ್ಮಕ ದೃಷ್ಟಿಯಲ್ಲಿ ಒಂದು ಘಟಕವಾಗಿ ಕಾಣುವುದೇ ಇಲ್ಲ.
Related Articles
Advertisement
ಸರ್ಕಾರಿ ಕಚೇರಿಗಳಲ್ಲಿನ ಅಕ್ರಮ ತಡೆಗಟ್ಟಲು ಕ್ಯಾಮರಾ ಜಾಲ ಒಂದರ ಸ್ಥಾಪನೆ ಹಾಗೂ ಅದರ ಉಸ್ತುವಾರಿಯನ್ನು ನೋಡಲು ಮೂರನೇ ಕಣ್ಣು ಎಂಬ ತಂಡದ ರಚನೆ ಮಾಡುವ ಆಶ್ವಾಸನೆಯನ್ನು ಒಂದು ಪಕ್ಷ ನೀಡಿದೆ. ಈ ತಂಡದಲ್ಲಿ ಆ ಪಕ್ಷದ ಜನರೇ ಇರುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಇದು ಇನ್ನೊಂದು ಗಿಮ್ಮಿಕ್ಸ್. ಆಡಳಿತದ ದಕ್ಷತೆ ಹೆಚ್ಚಿಸಲು ಹಾಲಿ ಕಾನೂನುಗಳೇ ಸಾಕು. ಅವುಗಳ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ಅನುಷ್ಠಾನ ಮುಖ್ಯ. ನಮ್ಮ ದೇಶದ ಆಡಳಿತದ ದುರಂತವೇ ಇದು.
ಸಂವಿಧಾನದಲ್ಲಿ ಆಡಳಿತಕ್ಕೆ ಮೂರು ಅಂಗಗಳನ್ನು ರಚಿಸಲಾಗಿದ್ದು ಅವುಗಳು ಪ್ರತ್ಯೇಕವಾಗಿ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸು ವಂತೆ ಅಧಿಕಾರ ದತ್ತವಾಗಿದೆ. ಆದರೆ ಕಾರ್ಯಾಂಗ ಸದಾ ಶಾಸಕಾಂಗದ ಅನುವರ್ತಿಯಾಗಿಯೇ ಇರಬೇಕಾದ ಪರಿಸ್ಥಿತಿಯುಂಟು. ಮುಖ್ಯಮಂತ್ರಿ ಶಾಸಕಾಂಗದ ಮುಖ್ಯಸ್ಥರು ಮಾತ್ರವಲ್ಲ ಕಾರ್ಯಾಂಗದ ನಿರ್ಣಯವನ್ನು ಪ್ರಮಾಣೀಕರಿಸುವವರು ಅವರೆ. ಅರ್ಥಾತ್ ಕಾರ್ಯಾಂಗದಲ್ಲಿ ಎಷ್ಟೇ ಓದಿದ ಹಾಗೂ ತಾಂತ್ರಿಕ ಪರಿಣತಿಯುಳ್ಳ ಅಧಿಕಾರಿಗಳೇ ಇರಲಿ ಅಂತಿಮ ನಿರ್ಣಯ ಸಚಿವರು ಹೇಳಿದಂತೆ ಎನ್ನುವುದು ವಾಸ್ತವ. ನಮ್ಮ ಸಾಂವಿಧಾನಿಕ ಪರಿಕಲ್ಪನೆಯಲ್ಲಿ ಶಾಸಕಾಂಗ ಸರ್ವ ಸಾರ್ವಜನಿಕರ ಆಯ್ಕೆ (popular choice), ಅದರ ನಡೆ ನಿರ್ಣಾಯಕ ಹಾಗೂ ಪ್ರಸ್ತುತ. ಅಂಥ ಶಾಸಕಾಂಗದ ತುತ್ತತುದಿಯಲ್ಲಿರುವ ಮುಖ್ಯಮಂತ್ರಿ ಅಭ್ಯರ್ಥಿ ತಾನು ಅಪ್ಪಟ ಪ್ರಾಮಾಣಿಕನಾಗಿರುತ್ತೇನೆ ಎಂಬ ಆಶ್ವಾಸನೆ ನೀಡಿದ್ದರೆ ಸಾಕಿತ್ತು. ಆದರೆ ಅದೊಂದನ್ನು ಬಿಟ್ಟು ಉಳಿದೆಲ್ಲವನ್ನು ಹೇಳಿದ್ದಾರೆ.
ಪ್ರಕೃತ ವಿಶ್ವದ ಗಮನ ಸೆಳೆದ ಒಂದು ರಾಜ್ಯದ ಚುನಾವಣೆ ಎಂದರೆ ಕರ್ನಾಟಕದ ಚುನಾವಣೆ. ಪ್ರಧಾನಮಂತ್ರಿಗಳು ಅನೇಕ ಬಾರಿ ಒಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಕರ್ನಾಟಕದ ಪ್ರಸಕ್ತ ಸರಕಾರದ ಆಡಳಿತವನ್ನು ದೂಷಿಸಿದ್ದಾರೆ. ಅದು ಹತ್ತು ಪರ್ಸೆಂಟ್ ಆಡಳಿತ ಎಂದು ಕಟಕಿಯಾಡಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಪರ್ಸೆಂಟ್ ಕೂಡ ಇಲ್ಲದೆ ಆಡಳಿತ ನಡೆಸುತ್ತದೆ ಎಂದು ಪ್ರತ್ಯೇಕ ಆಶ್ವಾಸನೆ ನೀಡಲಿಲ್ಲ. ಇನ್ನು ಕರ್ನಾಟಕದ ಆಡಳಿತಾರೂಢ ಪಕ್ಷ ಸರಕಾರದ ಮುಖಂಡರು ಸುರಿವ ಆರೋಪಗಳನ್ನು ಕೊಡಹಿ, ಮುಂದಿನ ಐದು ವರ್ಷ ನಮ್ಮದೇ ಎಂದು ಬೀಗುತ್ತಿದ್ದಾರೆ. ದಕ್ಷತೆ ಎನ್ನುವ ಪದವೇ ಅವರಿಗೆ ಅಲರ್ಜಿ. ಅವರು ಆಡಳಿತದ ದಕ್ಷತೆ ಹೆಚ್ಚಿಸುವ ಭರವಸೆ ಕೊಡುವುದುಂಟೆ? ಒಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಹೇಳುವುದಿಷ್ಟೆ. ನಿಮಗೆ ಎಲ್ಲ ಕೊಡುತ್ತೇವೆ-ಸ್ವಚ್ಛ ಆಡಳಿತ ಬಿಟ್ಟು.
ಇಂದು ಮತದಾನ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಸರಕಾರ ರಚಿಸಲ್ಪಡುತ್ತದೆ. ಯಾವುದೇ ಪಕ್ಷದ ಸರಕಾರ ಬರಲಿ ಅಥವಾ ಸಮ್ಮಿಶ್ರ ಸರಕಾರವೇ ಪ್ರಾಪ್ತವಾಗಲಿ ಸಮಸ್ತ ಸಾರ್ವಜನಿಕರು ಸಂವಿಧಾನ ದತ್ತ ಸ್ವಾತಂತ್ರ್ಯವನ್ನು ನಿರಾತಂಕವಾಗಿ ಅನುಭವಿಸಲು ಸಾಧ್ಯವಾಗುವಂತೆ ಸಾಮಾನ್ಯ ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ಆಗ್ರಹಿಸುವ.
ಬೇಳೂರು ರಾಘವ ಶೆಟ್ಟಿ