Advertisement

ಗಾಂಧಿ-ಅಂಬೇಡ್ಕರ್‌ ಚರ್ಚೆ ಕದನವಾಗದಿರಲಿ

08:50 PM Oct 26, 2019 | Lakshmi GovindaRaju |

ಮೈಸೂರು: ಗಾಂಧೀಜಿಯವರನ್ನು ನಿರಾಕರಣೆ ದೃಷ್ಟಿಯಿಂದ ಚರ್ಚೆ ಮಾಡಿದ್ದರಿಂದಲೇ ಈಗ ನಾಥುರಾಮ್‌ ಗೋಡ್ಸೆಗೂ ಭಾರತರತ್ನ ಕೊಟ್ಟರೆ ತಪ್ಪಿಲ್ಲ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯ ಘಟಕದಿಂದ ಶನಿವಾರ ಏರ್ಪಡಿಸಿದ್ದ ಪ್ರಸ್ತುತದಲ್ಲಿ ಅಂಬೇಡ್ಕರ್‌-ಒಂದು ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ನಡುವಿನ ಚರ್ಚೆಗಳು ನಮ್ಮ ಈ ಪರಸ್ಪರ ಆಂತರಿಕ ವಿಮರ್ಶೆಗಳಾಗಿರಬೇಕೆ ಹೊರತು ಊರ ಕದನ‌ವಾಗಬಾರದು. ಹಾಗಾದಲ್ಲಿ ಈ ಊರ ಕದನವನ್ನೇ ಪರೋಕ್ಷವಾಗಿ ತಮ್ಮ ಬಂಡವಾಳವಾಗಿ ಮಾಡಿಕೊಳ್ಳುವ ಮೂಲಭೂತವಾದಿಗಳನ್ನು ಬೆಳೆಸಿದಂತಾಗುತ್ತದೆ ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬೂ ಜಗಜೀವನರಾಂ ಬಗ್ಗೆ ಚರ್ಚಿಸುವಾಗ ನಾವು ಗಾಂಧೀಜಿಯವರನ್ನು ಇಟ್ಟು ನೋಡಬೇಕು. ಈ ವಿಮರ್ಶೆ, ಚರ್ಚೆ ನಡೆಯಲೇಬೇಕು. ಒಂದು ವೇಳೆ ವಿಮರ್ಶೆ, ಜಿಜ್ಞಾಸೆ, ತೌಲನಿಕ ಅಧ್ಯಯನ ನಡೆಯದಿದ್ದರೆ, ಚಲನಶೀಲತೆ ಇರಲ್ಲ. ವಿಮರ್ಶೆ ನಮ್ಮನ್ನು ಬೆಳೆಸುತ್ತೆ. ಆದರೆ, ಈ ವಿಮರ್ಶೆ ನಿರಾಕರಣೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದರು.

ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ಈ ಆಂತರಿಕ ವಿಮರ್ಶೆ ಭಿನ್ನಾಭಿಪ್ರಾಯಗಳು ಪರೋಕ್ಷವಾಗಿ ಮೂಲಭೂತವಾದಿಗಳನ್ನು ಬೆಳೆಸುತ್ತವೆ. ಹೀಗಾಗಿ ನಮ್ಮ ವಿಮರ್ಶೆಗಳು ಆಂತರಿಕ ವಿಮರ್ಶೆಗಳಾಗಿರಬೇಕು. ಮನೆಯ ಒಳಗಿರಬೇಕು. ಊರ ಕದನಗಳಾಗುವುದು ಬೇಡ. ಮನೆಯ ಕದನ ಬೇರೆ, ಊರ ಕದನವೇ ಬೇರೆ. ಊರ ಕದನವು ಮನೆ ಕದನವನ್ನಾಗಿ ಪರಿವರ್ತಿಸುವಂತಾಗಬೇಕು ಎಂದರು.

ಸಾವರ್ಕರ್‌ಗೆ ಅಂತಹ ಸತ್ವ ಇದ್ದರೆ ಭಾರತ ರತ್ನ ಕೊಡಲಿ. ಸಾವರ್ಕರ್‌ ಅವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರೆ, ಆನಂತರ ನಡೆದ ಬೆಳವಣಿಗೆಗಳೇನು ಎಂಬುದರ ಬಗ್ಗೆಯೂ ಎಲ್ಲರಲ್ಲೂ ವಿಸ್ತೃತವಾಗಿ ಚರ್ಚೆಗಳಾಗಬೇಕಾಗಿದೆ ಎಂದರು. ದಲಿತ ಅನ್ನುವಂತಹ ಪದ ಬಹುತ್ವವಾಗಿದೆ. ದಲಿತ ಎಂದರೆ ಆಲೋಚನೆ ಕ್ರಮವಷ್ಟೆ. ಕರ್ನಾಟಕದಲ್ಲಿ ದಲಿತರು ಬರೆದಿದ್ದು, ಮಾತ್ರ ದಲಿತ ಸಾಹಿತ್ಯ ಎಂಬ ಚರ್ಚೆ ಹಿಂದೆ ಹುಟ್ಟಿಕೊಂಡಿತು. ಆಗ ನಾನು ವಿರೋಧಿಸಿ ಮಾತನಾಡಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

ದಲಿತ ಮತ್ತು ದಲಿತೇತರರು ಅಸ್ಪೃಶ್ಯತೆ ಬಗ್ಗೆ ಬರೆದರೆ ಅದೆಲ್ಲವೂ ದಲಿತ ಸಾಹಿತ್ಯ ಎಂದಿದ್ದೆ. ಕೆಲವರು ನನ್ನನ್ನು ಹಿಗ್ಗಾಮುಗ್ಗಾ ಬೈದರು. ದಲಿತರೇ ಬರೆದರೆ ದಲಿತ ಸಾಹಿತ್ಯವೆನ್ನುವುದು ಸಾಹಿತ್ಯದಲ್ಲಿನ ಅಸ್ಪೃಶ್ಯಕೇರಿಯಾಗುತ್ತದೆ. ಒಂದೇ ವಾರ್ಡಿನ ರೋಗಿಗಳ ನರಳು ಸಾಹಿತ್ಯ ಅದಾಗುತ್ತದೆ. ಹೀಗಾಗಿ ದಲಿತ ಪದದ ವ್ಯಾಕರಣವನ್ನು ಮರು ಪರಿಶೀಲಿಸಬೇಕು ಎಂದು ಹೇಳಿದರು.

ಪ್ರಧಾನ ಭಾಷಣ ಮಾಡಿದ ಚಿಂತಕ ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು, ದೇಶದಲ್ಲಿ ಪ್ರಜಾಪ್ರಭುತ್ವ,ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ, ಏಕಚಕ್ರಾಧಿಪತ್ಯದ ಆಡಳಿತಕ್ಕೆ ಸಾಗುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎದುರಾಗುವ ಅಪಾಯವನ್ನು ತಡೆಯಲು ನಾವು ಸಾಹಿತ್ಯದ ಮೂಲಕವೇ ಪ್ರಯತ್ನಿಸಬೇಕು. ಯುವಕರ ಮನಸ್ಸನ್ನು ಕದಡುವ ಜನರಿಗೆ ನಾವು ಪಾಠ ಕಲಿಸಬೇಕಾಗಿದೆ ಎಂದರು.

ಅಕಾಡೆಮಿಯ ನೂತನ ರಾಜ್ಯಾಧ್ಯಕ್ಷರಾಗಿ ಡಾ.ಸಿ. ವೆಂಕಟೇಶ್‌ ಪದಗ್ರಹಣ ಮಾಡಿದರು. ಅಕಾಡೆಮಿಯ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್‌ ಎಚ್‌. ಕಾನಡೆ, ಮಾಜಿ ರಾಜ್ಯಾಧ್ಯಕ್ಷ ಚಲುವರಾಜು, ರಾಜ್ಯ ಉಪಾಧ್ಯಕ್ಷ ಕೆ.ಎಸ್‌.ಶಿವರಾಮು, ಕಲಾವಿದ ಡಾ. ಬಾಬುರಾವ್‌ ನಡೋನಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next