Advertisement

ರೈತರು ಮೂಲ ವ್ಯವಸಾಯಕ್ಕೆ ಹಿಂತಿರುಗಲಿ 

12:02 PM Jan 28, 2018 | |

ಮೈಸೂರು: ದೇಶದ ಕೃಷಿ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಬೆಳವಣಿಗೆ ವೈಜ್ಞಾನಿಕ ತಳಹದಿ, ಸಂಶೋಧನೆ ಮೂಲಕ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು. ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರೋಪ  ಉದ್ಘಾಟಿಸಿ ಮಾತನಾಡಿದರು.

Advertisement

ವ್ಯವಸಾಯ ದೇಶದ ಮೂಲ ಕಸುಬಾಗಿದ್ದು, ಇವುಗಳಿಗೆ ನ್ಯೂನತೆಯಾದರೆ ದೇಶದ ಅಭಿವೃದ್ಧಿಗೆ ಮಾನ್ಯತೆ ಆಗಲಿದೆ. ದೇಶದಲ್ಲಿ 126 ಕೋಟಿ ಜನಸಂಖ್ಯೆ ಇದ್ದರೂ, ಆಹಾರದಲ್ಲಿ ಸ್ವಾವಲಂಬನೆ ಕಾಪಾಡಿಕೊಂಡಿದ್ದೇವೆ. ಆದರೆ, ಸೀಮಿತವಾಗಿರುವ ಕೃಷಿ ಭೂಮಿಯಲ್ಲಿ ಹೊಸ ತಂತ್ರಜ್ಞಾನದ ಬಳಕೆಯಿಂದ ನಮ್ಮ ಉತ್ಪಾದನೆ ಹೆಚ್ಚಿಸದಿದ್ದರೆ, ಆಹಾರದ ಸ್ವಾವಲಂಬನೆ ಕಾಯ್ದುಕೊಳ್ಳಲು ಕಷ್ಟ.

ಹೀಗಾಗಿ ಕೃಷಿ ವಿಶ್ವವಿದ್ಯಾಲಯಗಳು, ಕೃಷಿತಜ್ಞರು ಸಂಶೋಧನಾ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಬಳಸಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಬಳಕೆ ಮೂಲಕ ಪ್ರತಿಯೊಬ್ಬರೂ ಮೂಲ ಕೃಷಿಯತ್ತ ಸಾಗುತ್ತಿದ್ದೇವೆ. ಇದರಿಂದಾಗಿ ಮೂಲ ಕೃಷಿಯ ಬಳಕೆ ಮಾಡದಿದ್ದರೆ ನಮ್ಮ ಉಳಿವಿಲ್ಲ ಎಂಬ ತತ್ವದ ಅರಿವಿಲ್ಲದೆ ಅಳವಡಿಸಿಕೊಳ್ಳುತ್ತಿದ್ದೇವೆಂದರು. 

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದ್ದು, ರಾಸಾಯನಿಕ ಗೊಬ್ಬರವಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಮಣ್ಣಿನ ಪರೀಕ್ಷೆ ನಡೆಸಿ ನಂತರ ಬೆಳೆ ಬೆಳೆಯುವ ಸ್ಥಿತಿ ಬಂದಿದ್ದು, ಅದಕ್ಕೆ ಅನುಗುಣವಾಗಿ ಗೊಬ್ಬರ ಬಳಕೆ ಮಾಡುವಂತಾಗಿದೆ ಎಂದು ತಿಳಿಸಿದರು.

ಸಾಲಮನ್ನಾಕ್ಕಿಂತ ಹೆಚ್ಚಾಗಿ ರೈತರಿಗೆ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ. ಇನ್ನೂ ರೈತರಿಗೆ ಅನುಕೂಲವಾಗುವಂತೆ ಗ್ರಾಪಂ ಹಂತದಲ್ಲೇ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಬೆಳೆಗೆ ಅರ್ಹ ಬೆಲೆ ಸಿಗಲಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಿನ ಬಜೆಟ್‌ನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

Advertisement

ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಸದ ಆರ್‌.ಧ್ರುವನಾರಾಯಣ್‌, ಜಿಪಂ ಸದಸ್ಯರಾದ ಅರುಣ್‌ಕುಮಾರ್‌, ಎಸ್‌.ದಿನೇಶ್‌, ಬೀರಿಹುಂಡಿ ಬಸವಣ್ಣ, ಚಂದ್ರಿಕಾ ಸುರೇಶ್‌, ತಾಪಂ ಅಧ್ಯಕ್ಷೆ ಕಾಳಮ್ಮ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಶಿವಣ್ಣ, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಟಿ.ಶಿವಶಂಕರ್‌ ಇದ್ದರು.
 
ಕೃಷಿ ಹಾಗೂ ಗುಡಿ ಕೈಗಾರಿಕೆಗಳ ಅಭಿವೃದ್ಧಿ, ಬೆಳವಣಿಗೆ ವೈಜ್ಞಾನಿಕ ತಳಹದಿ ಮತ್ತು ಸಂಶೋಧನೆ ಮೂಲಕ ಅಭಿವೃದ್ಧಿಯಾಗಬೇಕಿದೆ. ಆದರೆ, ಹೆಚ್ಚು ರಾಸಾಯನಿಕ ಪದ್ಧತಿ ಅಳವಡಿಸಿಕೊಳ್ಳದೆ, ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಸಾವಯವ ಅಳವಡಿಸಿಕೊಳ್ಳಬೇಕಿದೆ. 
-ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next